ಕಣಿಪುರ ಸುದ್ದಿಜಾಲ( ಆ.1)
ಬದಿಯಡ್ಕ: ಇಲ್ಲಿನ ಮೂಕಂಪಾರೆ ನಿವಾಸಿ, ಕುಂಟಿಕಾನ ಹಿರಿಯ ಬುನಾದಿ ಶಾಲೆಯಲ್ಲಿ ಪ್ರಾಥಮಿಕ ತರಗತಿಯ ಕನ್ನಡ ಅಧ್ಯಾಪಕನಾಗಿ ನಿವೃತ್ತರಾಗಿದ್ದ ಗೋಪಾಲ ಮಾಸ್ತರ್(84) ನಿಧನರಾದರು.
ಸಾಮಾಜಿಕ, ಸಾಂಸ್ಕೃತಿಕ ಕಳಕಳಿಯಿದ್ದ ಅವರು ಈಗಿನ ಆಟವೇ ಪಾಠ ಪರಿಕಲ್ಪನೆಯನ್ನು 80ರ ದಶಕದಲ್ಲೇ ಸ್ವತಂತ್ರವಾಗಿ ತನ್ನ ತರಗತಿಯಲ್ಲಿ ಅನುಷ್ಠಾನಕ್ಕೆ ತಂದಿದ್ದರು. ತರಗತಿಯಲ್ಲಿ ಪಠ್ಯದ ಹಾಡನ್ನು ಮನೋಜ್ಞವಾಗಿ ತಾನು ಹಾಡುತ್ತಾ, ಮಕ್ಕಳನ್ನು ಹಾಡಿಸುತ್ತಾ ಪಾಠಮಾಡಿದ ಅವರು ಒಂದು ತಲೆಮಾರನ್ನು ಪ್ರಭಾವಿಸಿದ ಮಾದರಿ ಅಧ್ಯಾಪಕ.
ಮೂಲತಃ ಮಾಯಿಪ್ಪಾಡಿಯವರಾದ ಅವರು ಬದಿಯಡ್ಕದಲ್ಲಿ ದಶಕಗಳಿಂದ ನೆಲೆಸಿದ್ದರು. ಇವರ ಪತ್ನಿ ವಡಕ್ಕೇವೀಟಿಲ್ ಕಲ್ಯಾಣಿ ಈ ಮೊದಲೇ ನಿಧನರಾಗಿದ್ದರು. ಮೃತರು ಮಕ್ಕಳಾದ ಡಾ. ಸುನಿಲ್ ಜಿ.ಎಂ, (ನಿವೃತ್ತ ಡೆಪ್ಯೂಟಿ ಡಯರಕ್ಟರ್ ಮೃಗಸಂರಕ್ಷಣ ಇಲಾಖೆ, ಕೇರಳ), ಅನಿಲ್ ಜಿ.ಎಂ (ಸಾಪ್ಟ್ವೇರ್ ಇಂಜಿನಿಯರ್ ಯು.ಎಸ್.ಎ),
ಸೊಸೆಯಂದಿರಾದ ಮೀರಾ( ನಿವೃತ್ತ ಸಹಾಯಕ ನಿರ್ದೇಶಕಿ, ಕೃಷಿ ಇಲಾಖೆ ಕೇರಳ), ಕವಿತಾ ಅನಿಲ್(ಸಾಫ್ಟ್ವೇರ್ ಇಂಜಿನಿಯರ್ ಯು.ಎಸ್.ಎ) ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.
ಮಕ್ಕಳನ್ನು ಆಟದ ಪಾಠದಿಂದ ಮುದಗೊಳಿಸುತ್ತಿದ್ದ ಗೋಪಾಲ ಮಾಸ್ತರ್ ವಿದ್ಯಾರ್ಥಿಗಳನ್ನು ಪ್ರೀತಿಸಿದಂತೆಯೇ ತಿದ್ದುತ್ತಿದ್ದರು. ಅಧ್ಯಾಪಕನೆಂದರೆ ಒಂದು ಪೀಳಿಗೆಯ ಸೃಜಕನೆಂಬ ಅರಿವಿನಿಂದ ಅವರು ತರಗತಿ ನಡೆಸಿದ್ದರು. ನೂರಾರು ಶಿಷ್ಯ ಪರಂಪರೆಯುಳ್ಳ ಅವರ ಅಗಲುವಿಕೆಗೆ ಕುಂಟಿಕಾನ ಹಿರಿಯ ಪ್ರಾಥಮಿಕ ಶಾಲಾ ಆಡಳಿತ ವರ್ಗ, ಅಧ್ಯಾಪಕ ವರ್ಗ ಸಂತಾಪ ಸೂಚಿಸಿದೆ.