ಯಕ್ಷಗಾನದಲ್ಲಿ ಇತಿಹಾಸ ಬರೆದ ಕೆರೆಮನೆಯ ಇಡಗುಂಜಿ ಮೇಳಕ್ಕೆ ( ಇಡಗುಂಜಿ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ) ವಿಶ್ವಸಂಸ್ಥೆಯ ಮಾನ್ಯತೆ ಪ್ರಾಪ್ತವಾಗಿದೆ. ಯಕ್ಷಗಾನಕ್ಕೆ ಹೀಗೊಂದು ಲೋಕಮಾನ್ಯತೆ ಇದೇ ಮೊದಲು…ಎಂಬುದೇ ಕನ್ನಡ ನಾಡಿನ ಸಾಧನೆಯ ಸಂಭ್ರಮ!
ಕಣಿಪುರ ಸುದ್ದಿಜಾಲ (ಸೆ.30)
ಯಕ್ಷಗಾನ ರಂಗ ಭೂಮಿಯಲ್ಲಿ ಹಲವು ಸರ್ವ ಪ್ರಥಮಗಳ ದಾಖಲೆ ನಿರ್ಮಿಸಿದ ಯಕ್ಷಗಾನ ಮಂಡಳಿ ಇಡಗುಂಜಿ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ಎಂಬ ಕೆರೆಮನೆ ಮೇಳ..!
ಅದಕ್ಕೀಗ ನವತಿಯ ಸಡಗರ. ಇದೇ ಹೊತ್ತಿಗೆ ಇಂದು (ಸೆ.30) ವಿಶ್ವಸಂಸ್ಥೆಯ (UN recognition) ಅಂಗೀಕಾರ ಗೌರವ ಪಡೆದುಕೂಂಡಿದೆ ಎಂಬುದು ಇಡೀ ಕರಾವಳಿಯ ಸಮಗ್ರ ಯಕ್ಷಗಾನ ವಲಯದ ಸಂಭ್ರಮ, ಅಭಿಮಾನ.
ಯಕ್ಷಗಾನ ಸಂಸ್ಥೆಯೊಂದಕ್ಕೆ ಈ ಮಾನ್ಯತೆ ಪ್ರಥಮ ಬಾರಿಯಾಗಿ ಬಂದಿದೆ ಎಂಬುದೇ ವೈಶಿಷ್ಠ್ಯ..
ಇದು ಕನ್ನಡ ನಾಡಿನ ಯಕ್ಷಗಾನ ಪ್ರಿಯರೆಲ್ಲ ಅಭಿಮಾನಿಸಿ, ಎದೆಯುಬ್ಬಿಸುವ ಸುಮೂಹೂರ್ತ..!
ಸ್ವಾತಂತ್ಯ ಪೂರ್ವದ 1934ರಲ್ಲಿ ಸ್ಥಾಪನೆಯಾದ ಕೆರೆಮನೆ ಮಂಡಳಿಗೆ ಈಗ ಭರ್ತಿ 90ನೇ ವರ್ಷದ ಸಂಭ್ರಮ. ಇದೇ ಸಂದರ್ಭದಲ್ಲಿ ವಿಶ್ವಮನ್ನಣೆ ಈ ಸಂಸ್ಥೆಗೆ ದೊರಕಿರುವುದು ” ಕನ್ನಡ ನಾಡು ಅತಿಯಾದ ಹೆಮ್ಮೆ, ಸಂತೋಷ ದಿಂದ ಸಂಭ್ರಮಿಸುವ ಸಂಗತಿಯಾಗಿದೆ. ಇದು ಮಂಡಳಿಗೆ ಸಿಕ್ಕಿದ ಅಂಗೀಕಾರಕ್ಕಿಂತಲೂ ಯಕ್ಷಗಾನಕ್ಕೆ ದೊರೆತ ಮಾನ್ಯತೆ” ಎಂದು ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ಕೆರೆಮನೆ ನಿರ್ದೇಶಕ ಕೆರೆಮನೆ ಶಿವಾನಂದ ಹೆಗಡೆ ‘ಕಣಿಪುರ’ ಕ್ಕೆ ತಿಳಿಸಿದ್ದಾರೆ.
ವಿಶ್ವದ 58 ರಾಷ್ಟ್ರೀಯ ಸಂಸ್ಥೆಗಳ ಪೈಕಿ ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ಕೆರೆಮನೆ ಒಂದಾಗಿದೆ ಎಂಬುದು ಇಡೀ ಕರ್ನಾಟಕ್ಕೆ ಹೆಮ್ಮೆ, ಅಭಿಮಾನ ಮತ್ತು ಕಲಾ ಮಾನ್ಯತೆಯ ಸಂಗತಿಯಾಗಿದೆ. ಜೂನ್ ತಿಂಗಳಿನಲ್ಲಿ ಯುನೆಸ್ಕೋ ಮುಖ್ಯ ಕಚೇರಿಯಲ್ಲಿ ನಡೆದ 10ನೇ ಅಧಿವೇಶನದಲ್ಲಿ ಮಂಡಳಿಗೆ ಮಾನ್ಯತೆ ಘೋಷಿಸಲಾಗಿದೆ. ಯುನೆಸ್ಕೂ 2003ರ ಅಮೂರ್ತ ಸಾಂಸ್ಕೃತಿಕ ಪರಂಪರೆ, ಸಂರಕ್ಷಣೆ, ಆಂತರಿಕ ಸಮಿತಿಗೆ ಸಲಹೆ ಮಾಡಲು ಮಂಡಳಿ ಮಾನ್ಯತೆ ಪಡೆದಿದೆ ಎಂದು ಹೇಳಿದ್ದಾರೆ.
ಇಡಗುಂಜಿ ಯಕ್ಷಗಾನ ಮಂಡಳಿಯ ಪಯಣ ಚಿಕ್ಕದೇನಲ್ಲ. ಅದು ಸುದೀರ್ಘವಾಗಿ ಯಕ್ಷಗಾನದ ಸಂವರ್ಧನೆ, ಪರಂಪರೆ ಪ್ರಸಾರ, ಪ್ರಚಾರ, ದಾಖಲಾತಿ ಇತ್ಯಾದಿ ಎಲ್ಲಾ ಪ್ರಯತ್ನ ಹಾಗೂ ಸಾಧನೆ ಮಾಡಿದೆ. ಕಲೆಯನ್ನು ಪ್ರದರ್ಶನಕ್ಕಷ್ಟೇ ಮೀಸಲಿಡದೇ ಅಧ್ಯಯನ ಪಥದಲ್ಲಿ ನಿರೂಪಿಸಿ ಜಾಗೃತಿಯ ಅಭಿರುಚಿ ಮೂಡಿಸಿರುವುದು ಮಂಡಳಿಯ ವೈಶಿಷ್ಟ್ಯ. ಯಕ್ಷಗಾನದ ಹೆಸರಲ್ಲಿ ಉಳಿದೆಲ್ಲರೂ ವ್ಯಾವಹಾರಿಕ ಟೂರಿಂಗ್ ಟಾಕೀಸ್ ನಡೆಸಿದರೆ ಇಡಗುಂಜಿ ಮೇಳ ಧ್ಯೇಯಬದ್ಧ ಕಲಾದರ್ಶನದ ಯಾನ ಮಾಡಿದೆ. ಪರಂಪರಾಗತ ಕಲೆಯನ್ನು ಸಮಕಾಲಿಕವಾಗಿ ರೂಪಿಸದೇ ಸನಾತನವಾಗಿ ಕೈದಾಟಿಸಿದೆ ಎಂಬುದೇ ಹೆಗ್ಗಳಿಕೆ. ಈ ಕಾರಣದಿಂದಲೇ ಜಾಗತಿಕ ಮಾನ್ಯತೆಯ ಕಿರೀಟ ಮುಡಿಗೇರಿದೆ.
ಹೊನ್ನಾವರ ತಾಲೂಕಿನ ಗುಣವಂತೆ ಗ್ರಾಮದಲ್ಲಿ ರಂಗಮಂದಿರ, ಯಕ್ಷಗಾನ ಪ್ರದರ್ಶನ, ಯಕ್ಷಗಾನ ಗುರುಕುಲ, ಶಿಕ್ಷಣ, ಆಟವೇ ಪಾಠ, ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ, ಭಾಸಂ, ಪ್ರಾತ್ಯಕ್ಷತೆ, ಅಧ್ಯಯನ, ಕಾರ್ಯಾಗಾರ ಮುಂತಾದ ಕ್ಷೇತ್ರದಲ್ಲಿ ಕಳೆದ 90 ವರ್ಷದಿಂದ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಮಂಡಳಿಯ ಸಾಧನೆ ಅಪಾರವಾದದ್ದು. ಸಮಗ್ರ ಯಕ್ಷಗಾನ ವಲಯದಲ್ಲಿ ಉಳಿದೆಲ್ಲ ಮಂಡಳಿಗಳದ್ದು ವ್ಯಾವಹಾರಿಕ ನಡಿಗೆಯಾದರೆ ಕೆರೆಮನೆ ಮೇಳದ್ದು ಕಲಾ ಚಿಂತನೆಯ, ಜಾಗೃತಿಯ ನಡಿಗೆ. ರಂಗಭೂಮಿಯ ಕುರಿತು ಧ್ಯೇಯೋದ್ದೇಶದ ಖಚಿತ ನಿಲುವು, ರಾಜಿಯಿಲ್ಲದ ನಡಿಗೆ ಮಾಡಿದ ಮತ್ತೊಂದು ಕಲಾ ಸಂಸ್ಥೆ ಯಕ್ಷಗಾನದಲ್ಲೇ ಇಲ್ಲ. ಆದ್ದರಿಂದ ಜಾಗತಿಕ ಮಾನ್ಯತೆ ಎಂಬುದು ಯಕ್ಷಗಾನಕ್ಕೆ ಮಾತ್ರವಲ್ಲ ಇದು ನಾಡಿನ ಸಡಗರ.
🟣 ಸಮಗ್ರ ಯಕ್ಷಗಾನಕ್ಕಿದು ರೋಮಾಂಚಕ ಸಂದರ್ಭ ಎಂದರು ಮಂಡಳಿ ಸಂಚಾಲಕ ಕೆರೆಮನೆ ಶಿವಾನಂದ ಹೆಗಡೆ..
“ಯಕ್ಷಗಾನಕ್ಕಿದು ಪ್ರಥಮ ಜಾಗತಿಕ ಮಾನ್ಯತೆ. ಮಹತ್ವದ ಜಾಗದಲ್ಲಿ ಯಕ್ಷಗಾನದ ಹೆಸರು ಉಲ್ಲೇಖವಾಗುತ್ತಿದೆ. ನಮ್ಮ ಮೇಳಕ್ಕೆ90ರ ಹರೆಯದಲ್ಲಿ ಇಂಥಾ ಅಂಗೀಕಾರ ಒದಗುವುದರಲ್ಲಿ ಕಾಣದ ನೂರಾರು ಕೈಗಳ ಪ್ರೀತಿ, ಬೆಂಬಲಗಳಿವೆ. ಹಹೃದಯರ ಆಶೀರ್ವಾದವಿದೆ. ಕಲಾವಿದರ ಬೆವರು, ಪರಿಶ್ರಮವಿದೆ.
ಮಾಧ್ಯಮಗಳ ಮುಕ್ತ ಅನಿಸಿಕೆಗಳ ಸಹಕಾರವಿದೆ. ಪ್ರೇಕ್ಷಕರ ಒಲವಿದೆ. ಹೀಗೆ ಎಲ್ಲರ ಸಹಕಾರದಿಂದಲೇ 90ರ ಹರೆಯದಲ್ಲಿ ಮಂಡಳಿಗೆ ಜಾಗತಿಕ ಮಾನ್ಯತೆ ಸಿಕ್ಕಿದೆ. ಇದು ಯಕ್ಷಗಾನದ ಅಂಗೀಕಾರವೇ ಹೊರತು ನಮ್ಮದ್ದಲ್ಲ. ಇದು ನಿಜಕ್ಕೂ ಇಡೀ ಯಕ್ಷಗಾನಕ್ಕೆ ರೋಮಾಂಚನ ತರುವ ಜಾಗತಿಕ ಸಾಧನೆ. ನವರಾತ್ರಿಯ ನಾಡಹಬ್ಬದ ವೇಳೆ ಯಕ್ಷಗಾನಕ್ಕೆ ಯುನೆಸ್ಕೋ ಮಾನ್ಯತೆ ಎನ್ನುವುದು ನಮಗಷ್ಟೇ ಅಲ್ಲ..ಇಡೀ ಕನ್ನಡನಾಡಿಗೇ ಸಂಭ್ರಮ. ಇದು ನಮ್ಮ ರಾಜ್ಯಕ್ಕೆ ಸಿಕ್ಕ ಅಂಗೀಕಾರದ ಮಾನ್ಯತೆ..”
– ಕೆರೆಮನೆ ಶಿವಾನಂದ ಹೆಗಡೆ
(ಸಂಚಾಲಕರು, ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ)