ಏತಡ್ಕ : “ತನ್ನ ದೇಹದಲ್ಲಿ ಶಕ್ತಿ ಇರುವ ತನಕ ಸಮಾಜದ ಕೆಲಸ ಮಾಡಬೇಕು.ಸ್ಥಳೀಯ ಕ್ಷೇತ್ರಗಳು ಇದಕ್ಕೆ ಸೂಕ್ತ , ಸರ್ವಶ್ರೇಷ್ಠ ಜಾಗಗಳು.ಮಹಿಳಾ ಶಕ್ತಿಯು ಸಂಪನ್ನವಾದಾಗ ಸಾಮಾಜಿಕವಾಗಿ ಅಭೂತಪೂರ್ವ ಸಕಾರಾತ್ಮಕ ಬದಲಾವಣೆಗಳಾಗುತ್ತವೆ” ಎಂದು ವಸಂತಿ ಟೀಚರ್ ಅಗಲ್ಪಾಡಿ ಹೇಳಿದರು. ಏತಡ್ಕ ಶ್ರೀ ಸದಾಶಿವ ದೇವಸ್ಥಾನ ಬ್ರಹ್ಮಕಲಶೋತ್ಸವ -25ರ ಸಂದರ್ಭದಲ್ಲಿ ನಡೆದ ‘ಶಿವಾರ್ಪಣಂ ‘ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಸಾಂಕೇತಿಕವಾಗಿ ಬಟ್ಟೆಯ ಹೂವಿನ ಹಾರ ಮಾಡುವುದರ ಮೂಲಕ ಅವರು ಯೋಜನೆಗೆ ಚಾಲನೆ ನೀಡಿದರು.
ಪರಿಸರ ಸ್ನೇಹಿಯಾದ ‘ಶಿವಾರ್ಪಣಂ ‘ ಯೋಜನೆಯನ್ನು ಈ ಬ್ರಹ್ಮಕಲಶೋತ್ಸವಕ್ಕೆ ಜೋಡಿಸಿದ್ದು ಜನಪ್ರಿಯವಾಗಿದೆ. ಪಾರಂಪರಿಕ ಕೌಶಲ್ಯಗಳಿಗೆ ಒತ್ತು ನೀಡುವ ಯೋಜನೆಯಲ್ಲಿ ಭಕ್ತಾದಿಗಳು ತೊಡಗಿಸಿಕೊಳ್ಳಬೇಕು ಎಂಬುದಾಗಿ ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷ ಡಾ.ವೇಣುಗೋಪಾಲ ಕಳೆಯತ್ತೋಡಿ ದಿಕ್ಸೂಚಿ ಭಾಷಣಗೈದರು.
ಈ ಕಾರ್ಯಗಾರದಲ್ಲಿ ಬಟ್ಟೆಯ ಹೂ ಮಾಲೆ ಮತ್ತು ಚೀಲ ತಯಾರಿ ಕುರಿತು ಈಶ್ವರೀ ಬೇರ್ಕಡವು, ತರಕಾರಿ ಕೃಷಿ ಕುರಿತು ದೇರಣ್ಣ ರೈ ಪುತ್ರಕಳ , ಮಡಲು ಹೆಣೆಯುವುದು , ದೇಸೀ ದನದ ಸೆಗಣಿಯ ಬೆರಣಿ ತಯಾರಿಯ ಕುರಿತು ಕಾವೇರಿ ಎತ್ತರ ಅವರು ಪ್ರಾತ್ಯಕ್ಷಿಕೆ ನೀಡಿ ವಿಚಾರ ವಿನಿಮಯ ನಡೆಸಿದರು.
ಜಿಲ್ಲಾ ಪಂಚಾಯತ್ ಸದಸ್ಯೆ ಶೈಲಜಾ ನಡುಮನೆ ಶುಭಾಶಂಸನೆಗೈದರು.
ಕಾರ್ಯದರ್ಶಿ ಡಾ.ಪ್ರಕಾಶ ವೈ.ಎಚ್ ಹಾಗೂ ಖಜಾಂಜಿ ವೈ.ವಿ.ಸುಬ್ರಹ್ಮಣ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಆನೆಪ್ಪಳ್ಳ ಲತಾ ಮತ್ತು ತಂಡದವರು ಪ್ರಾರ್ಥನೆ ಮಾಡಿದರು. ಗೌರಿ ಕೆ ಎಸ್ ಸ್ವಾಗತಿಸಿದರು.ಡಾ.ವೈ.ವಿ.ಕೃಷ್ಣಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಚಂದ್ರಶೇಖರ ಏತಡ್ಕ ಕಾರ್ಯಕ್ರಮ ನಿರೂಪಿಸಿದರು.ಕೊನೆಯಲ್ಲಿ ವೈ.ವಿ.ರಮೇಶ ಧನ್ಯವಾದ ನೀಡಿದರು.