ಕಣಿಪುರ ಸುದ್ದಿಜಾಲ
🟣 ನಿಜಕ್ಕೂ ಅದೊಂದು ರಣರೋಚಕ ಸನ್ನಿವೇಶ.!!
ಕಂಡವರ ಎದೆಗುಂಡಿಗೆಯನ್ನೇ ಕದಡಿಸುವ ದೃಶ್ಯ..!
ಹೌದು, ಕಾಳಿಂಗ ಸರ್ಪವೊಂದು ಭುಸುಗುಟ್ಟುತ್ತಾ ಮನೆಯಂಗಳಕ್ಕೆ ಧಾವಿಸಲೆತ್ನಿಸಿದರೆ ಶಿಸ್ತಿನ ಸಿಪಾಯಿಯಂತೆ ಮಾರ್ಜಾಲವೊಂದು ಕದಲದೇ ಕಾವಲು ನಿಂತು ಕಾಳಿಂಗನನ್ನೇ ಮರಳಿ ಕಾಡಿಗಟ್ಟಿದ ಅನನ್ಯ ಘಟನೆಯಿದು..!
ಇಂಥದ್ದೊಂದು ಅಪರೂಪದ ಸನ್ನಿವೇಶ ಕಾಸರಗೋಡಿನ ಮುಳಿಯಾರಿನಲ್ಲಿ (ಸೆ.29) ನಿನ್ನೆ ಸಂಜೆ ನಡೆಯಿತು. ಮುಳಿಯಾರಿನ ಕುಣಿಯೇರಿ ನಿವಾಸಿ ಅಬ್ದುಲ್ ರಹ್ಮಾನ್ ಎಂಬವರ ಮನೆಯಂಗಳಕ್ಕೆ ನಿನ್ನೆ ಸಂಜೆ ಅದೆಲ್ಲಿಂದಲೋ ಘಟ ಸರ್ಪ ಬಂದಿತ್ತು. ಅಂಗಳಕ್ಕೆ ಹಾವು ಬಂದಿರುವುದನ್ನು ಮನೆಯ ಸಾಕು ಬೆಕ್ಕು ಗಮನಿಸಿತ್ತು. ಗಮನಿಸಿದ ಮೇಲದು ಬಿಡುತ್ತದೆಯೇ..??
ಬಾರಯ್ಯ..ಬಾ..ತಾಖತ್ತಿದ್ರೆ ಬಾ..ನೋಡೋಣ ಎಂದು ದೃಷ್ಠಿ ಕದಲಿಸದೇ ಕುಳಿತೇ ಬಿಟ್ಟಿತು. ಸರ್ಪ ಹೆಡೆ ಎತ್ತಿ ಫೂತ್ಕರಿಸುತ್ತಾ ನಾನಾ ಪ್ರಯತ್ನಗಳನ್ನು ಮಾಡಿತು. ಆದರೂ ಮಾರ್ಜಾಲ ಅದಕ್ಕೆ ಬಗ್ಗಲೂ ಇಲ್ಲ, ಒಲಿಯಲೂ ಇಲ್ಲ. ತುಂಬಾ ಹೊತ್ತು ಪ್ರಯತ್ನಿಸಿದ ಬಳಿಕ ಹಾವು ತಾನೇ ಸೋಲೊಪ್ಪಿಕೊಂಡು , ತಲೆತಗ್ಗಿಸಿ ನಿರ್ಗಮಿಸಬೇಕಾಯಿತು. ಈ ಅಪರೂಪದ ದೃಶ್ಯವನ್ನು ಮನಗಯವರೇ ಸೆರೆ ಹಿಡಿದಿದ್ದಾರೆ. ಅದು ಮಾಧ್ಯಮಗಳಲ್ಲಿ ವೈರಲ್ ಪ್ರಚಾರ ಪಡೆದಿದೆ.