ಕಣಿಪುರ ಸುದ್ದಿಜಾಲ(ಸೆ.29)
ವಿಶೇಷವಾಗಿ ಕಾಸರಗೋಡು ಜಿಲ್ಲೆಯಲ್ಲಿ ಆಧುನಿಕ ಯುವ ಪೀಳಿಗೆ ಡ್ರಗ್ಸ್ ಜಾಲಕ್ಕೆ ಅಡಿಯಾಳಾಗಿ ಬದುಕಿನ ಭವಿಷ್ಯವನ್ನೇ ಕಮರಿಸುತ್ತಿರುವುದು ನಾಡನ್ನು ಕಾಡುವ ಆಧುನಿಕ ಸಮಸ್ಯೆ. ಇದರ ಪರಿಹಾರಕ್ಕೆ ಡ್ರಗ್ಸ್ ಸೇವಕರ ಕುರಿತು ಪೋಲೀಸ್ ಇಲಾಖೆಗೆ ಮಾಹಿತಿ ನೀಡುತ್ತಾ, ಡ್ರಗ್ಸ್ ಮುಕ್ತ ಸಮಾಜಕ್ಕಾಗಿ ನಾಗರಿಕರು ಪೋಲೀಸ್ ಇಲಾಖೆಯೊಂದಿಗೆ ಕೈಜೋಡಿಸಿ ಸಹಕರಿಸಬೇಕು, ನಾಡಿನಲ್ಲಿ ಈ ಪಿಡುಗಿನ ವಿರುದ್ಧ ಜನಜಾಗೃತಿ ಮೂಡಿಸಬೇಕು, ಸಾಮಾಜಿಕ ಸೇವಾ ಸಂಘಟನೆಗಳು ಇದರಿಂದ ಹಿಂಜರಿಯಬಾರದು ಎಂದು ಕಾಸರಗೋಡು ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಡಿ.ಶಿಲ್ಫಾ ಹೇಳಿದರು.
ನೀರ್ಚಾಲಿನ ಮಹಾಜನ ಸಂಸ್ಕೃತ ಕಾಲೇಜು ಹೈಸ್ಕೂಲಿನಲ್ಲಿ (ಸೆ.28) ನಡೆದ ವಿಕಾಸ ಟ್ರಸ್ಟ್ ನ ಕನ್ನಡ ವಿಕಾಸ ಮಾಹಿತಿ ಅಭಿಯಾನ-2 ಉದ್ಘಾಟನೆಯಲ್ಲಿ ಅತಿಥಿಯಾಗಿ ಪಾಲ್ಗೊಂಡು ಮಾತಾಡಿದ ಅವರು ಶಾಲಾ ವಿದ್ಯಾರ್ಥಿಗಳು, ಕಾಲೇಜು ವಿದ್ಯಾರ್ಥಿಗಳು ಶೈಕ್ಷಣಿಕ ಹಂತದಿಂದಲೇ ಅತ್ಯಾಧುನಿಕ ಮಾದಕ ವಸ್ತು ಸೇವನೆಯ ಚಟಕ್ಕೆ ಬಲಿಯಾಗುತ್ತಿದ್ದಾರೆ. ರಾಜ್ಯ ವ್ಯಾಪಕ ಹೀಗಿದ್ದರೂ ನಮ್ಮ ನಡುವಿನ ಎಳೆ ಪೀಳಿಗೆಯನ್ನು ನಾವು ಮನಸ್ಸಿಟ್ಟರೆ ಕಾಪಾಡಬಹುದು. ವರ್ತಮಾನದ ಅತೀ ದೊಡ್ಡ ಪಿಡುಗು, ಸಮಸ್ಯೆಯಾದ ಈ ದಂಧೆಯ ವಿರುದ್ಧ ಜನಜಾಗೃತಿ ಅತ್ಯಗತ್ಯ. ಇದಕ್ಕೆ ಪ್ರತಿಯೊಬ್ಬರೂ ಕೈ ಜೋಡಿಸಬೇಕೆಂದು ಅವರು ಆಹ್ವಾನ ಇತ್ತರು.
ಡ್ರಗ್ಸ್ ಸೇವನೆಯಿಂದ ಅವರಷ್ಟೇ ಅಲ್ಲ, ಇಡೀ ಕುಟುಂಬವೇ ದುಷ್ಪರಿಣಾಮ ಅನುಭವಿಸುತ್ತದೆ. ಅದು ಆರೋಗ್ಯದ ಮೇಲೆ, ಕುಟುಂಬದ ಮೇಲೆ ಬೀರುವ ಪರಿಣಾಮ ಚಿಕ್ಕದ್ದಲ್ಲ. ಈ ಕುರಿತಾದ ಸಾಮಾಜಿಕ ಜನಜಾಗೃತಿಗೆ ಕನ್ನಡಿಗರ ಸಹಿತ ಇಡೀ ಜಿಲ್ಲೆಯ ಎಲ್ಲರೂ ಕೈಜೋಡಿಸಿ ಜಾಗೃತಿ ಮೂಡಿಸುವುದು ಅಗತ್ಯ ಎಂದವರು ನುಡಿದರು.
ಡ್ರಗ್ಸ್ ಬಳಸುವಾತನನ್ನು ಕ್ರಿಮಿನಲ್ ಎಂದು ಪರಿಗಣಿಸಬೇಕಾಗಿಲ್ಲ. ತನ್ನದ್ದಲ್ಲದ ತಪ್ಪಿಂದ ಆತ ಡ್ರಗ್ಸ್ ದಾಸನಾಗಿರಬಹುದು. ಅವರಿಗೆ ಇದರ ಪರಿಣಾಮದ ಭವಿಷ್ಯತ್ ಫಲಗಳು ಗೊತ್ತಿರಲಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ಡ್ರಗ್ಸ್ ಸೇವಕರಿಗೆ ಅರಿವು ಮೂಡಿಸಿ, ಅದರಿಂದ ಮುಕ್ತರನ್ನಾಗಿಸಿ, ಅವರನ್ನು ಸಹಜ ಬದುಕಿಗೆ ಮರಳಿ ಕರೆತರುವ, ಪುನವರ್ಸತಿ ಕಲ್ಪಿಸುವ ಹೊಣೆ ಸಮಾಜಕ್ಕಿದೆ ಎಂದು ಪೋಲೀಸ್ ವರಿಷ್ಠಾಧಿಕಾರಿ ನುಡಿದರು.
ಈ ದೃಷ್ಠಿಯಲ್ಲಿ ಶೀಘ್ರವೇ ಗ್ರಾ.ಪಂ. ಮಟ್ಟದಲ್ಲಿ ಜನಜಾಗೃತಿ ಸಾಮಾಜಿಕ ವೇದಿಕೆ ರೂಪಿಸಬೇಕಾಗಿದೆ. ಇದು ಸಾಮಾಜಿಕರು ಪೋಲೀಸ್ ಇಲಾಖೆಯ ಜತೆ ಕೈಜೋಡಿಸಿ ಮಾಡಬೇಕಾದ ಕಾಯಕ ಎಂದು ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಡಿ. ಶಿಲ್ಪ ಹೇಳಿದರು.