🟤 ಕಣಿಪುರ ಸುದ್ದಿಜಾಲ (ಸೆ.29)
🟢 ದೇಶದ ಮೂಲೆ,ಮೂಲೆಗಳಿಂದ ಸಕಾರಾತ್ಮಕ ಸುದ್ದಿಗಾಥೆಗಳನ್ನು ಆಯ್ದು ದೇಶದ ಜನರೊಡನೆ ಹಂಚಿ ಸ್ಪೂರ್ತಿಯ ಪ್ರೇರಣೆ ಮೂಡಿಸಿದ ಪ್ರಧಾನಿ ನರೇಂದ್ರ ಮೋದಿ ಅವರ ಮಾಸಿಕ ಮನದ ಮಾತಿಗೀಗ ಭರ್ತಿ 10ವರ್ಷ..!
ಈ ಅವಧಿಯಲ್ಲಿ ದೇಶದ ನೂರಾರು ಸಾಧಕರ ಸಾಧನಾಗಾಥೆ ಅವರ ಬಾಯಿಂದ ಭಾಷಣವಾಗಿ ಭೂಷಿತವಾಗಿದೆ. ಅದು ಈ ತಲೆಮಾರಿನ ಒಂದು ಪೀಳಿಗೆಯ ಎದೆಯಗೂಡಲ್ಲಿ ಆದರ್ಶದ ಪಂಜು ಬೆಳಗಿಸಿದೆ. ಈ ಬಾರಿಯ ನವರಾತ್ರಿಯ ಆರಂಭವೇ ಸಕಾರಾತ್ಮಕ ಸುದ್ದಿಗಾಥೆಯ ವಿಜಯಪಧದ ದಶಮಸಂಭ್ರಮ!!
ದೇಶದ ಪ್ರಧಾನಿ ನರೇಂದ್ರ ಮೋದಿ ಯವರ ಮನ್ ಕೀ ಬಾತ್ (ಮಾಸದ ಮನದ ಮಾತು) ಕಾರ್ಯಕ್ರಮದ 114 ನೇ ಸಂಚಿಕೆ ಇಂದು ಪ್ರಸಾರವಾಗಿದೆ. ಈ ವಿಶೇಷ ಕಾರ್ಯಕ್ರಮ ಈಗ ದಶಕದ ಸಂಭ್ರಮಾಚರಣೆಯಲ್ಲಿದ್ದು, ಈ ವಿಚಾರವನ್ನು ಪ್ರಸ್ತಾಪಿಸಿದ ಪ್ರಧಾನಿ ಮೋದಿ ಭಾವುಕರಾದರು. “ಇಂದಿನ ಸಂಚಿಕೆ ನನ್ನನ್ನು ಭಾವುಕನನ್ನಾಗಿಸುತ್ತಿದೆ, ಇದು ಅನೇಕ ಹಳೆಯ ನೆನಪುಗಳನ್ನು ನೆನಪಿಸುತ್ತಿದೆ” ಎಂದು ಹೇಳಿದರು.
ನಮ್ಮ ‘ಮನ್ ಕಿ ಬಾತ್’ ಪಯಣ 10 ವರ್ಷಗಳನ್ನು ಪೂರೈಸುತ್ತಿದೆ. 10 ವರ್ಷಗಳ ಹಿಂದೆ ಅಕ್ಟೋಬರ್ 3ರಂದು ವಿಜಯದಶಮಿಯಂದು ‘ಮನ್ ಕಿ ಬಾತ್’ ಆರಂಭವಾಗಿದ್ದು, ಈ ವರ್ಷ ಅಕ್ಟೋಬರ್ 3ರಂದು ‘ಮನ್ ಕಿ ಬಾತ್’ 10 ವರ್ಷ ಪೂರೈಸುತ್ತಿದೆ. ಅಂದೇ ನವರಾತ್ರಿಯ ಮೊದಲ ದಿನವೂ ಆಗಿದ್ದು, ಇದೊಂದು ಅತ್ಯಂತ ಪವಿತ್ರ ಕಾಕತಾಳೀಯ ಎಂದು ಪ್ರಧಾನಿ ಹೇಳಿದರು.
‘ಮನ್ ಕಿ ಬಾತ್’ ಕೇಳುಗರು ಈ ಕಾರ್ಯಕ್ರಮದ ನಿಜವಾದ ಶಿಲ್ಪಿಗಳು. ಸಾಮಾನ್ಯವಾಗಿ ಗಾಸಿಪ್, ನಕಾರಾತ್ಮಕ ವಿಚಾರಗಳು ಚರ್ಚೆಗಳು ಗಮನ ಸೆಳೆಯುವಷ್ಟು ಸಕಾರಾತ್ಮಕ ವಿಚಾರಗಳು ಜನರನ್ನು ಸೆಳೆಯುವುದಿಲ್ಲ. ಆದರೆ ಈ ಕಾರ್ಯಕ್ರಮ ಆ ಚಿಂತನೆಯನ್ನು ಸುಳ್ಳೆಂದು ಸಾಬೀತು ಮಾಡಿದೆ. ಜನರಿಗೆ ಸಾಕಾರಾತ್ಮಕ ವಿಚಾರಗಳ ಬಗ್ಗೆ ಎಷ್ಟು ಆಸಕ್ತಿ ಇದೆ ಎಂಬುದಕ್ಕೆ ಈ ಕಾರ್ಯಕ್ರಮವೇ ಉತ್ತಮ ಉದಾಹರಣೆ ಎಂದಿದ್ದಾರೆ. ಇನ್ನು ಮನ್ ಕೀ ಬಾತ್ ಕಾರ್ಯಕ್ರಮದ ಸುದೀರ್ಘ ಪ್ರಯಾಣದ ಬಗ್ಗೆ ಮೆಲುಕು ಹಾಕಿದ ಪ್ರಧಾನಿ ಮೋದಿ ಇನ್ನು ಹತ್ತು ಹಲವು ವಿಚಾರಗಳನ್ನು ಕೇಳುಗರೊಂದಿಗೆ ಹಂಚಿಕೊಂಡಿದ್ದಾರೆ.
ಮೋದಿ ಮನ್ ಕೀ ಬಾತ್ ಹೈಲೈಟ್ಸ್
ಜಲ ಸಂರಕ್ಷಣೆಯ ಪ್ರಾಮುಖ್ಯತೆಯನ್ನು ಎತ್ತಿ ಹಿಡಿದ ಪ್ರಧಾನಿ ಮೋದಿ, “ಕಳೆದ ಕೆಲವು ವಾರಗಳಿಂದ ದೇಶದ ವಿವಿಧ ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದೆ. ಈ ಮಳೆಗಾಲವು ನಮಗೆ ‘ಜಲ ಸಂರಕ್ಷಣೆ’ ಎಷ್ಟು ಮುಖ್ಯ ಎಂಬುದನ್ನು ನೆನಪಿಸುತ್ತದೆ.
“ಸ್ವಚ್ಛ ಭಾರತ್ ಮಿಷನ್” ಜನಪ್ರಿಯತೆಯ ಕುರಿತು ಮಾತನಾಡಿದ ಪ್ರಧಾನಿ ಮೋದಿ, “ಸ್ವಚ್ಛ ಭಾರತ್ ಮಿಷನ್” ಯಶಸ್ಸಿನಿಂದಾಗಿ ವೇಸ್ಟ್ ಟು ವೆಲ್ತ್ ಎಂಬ ಮಂತ್ರವು ಜನರಲ್ಲಿ ಜನಪ್ರಿಯವಾಗುತ್ತಿದೆ.
ಪ್ರಧಾನಿ ಮಧ್ಯಪ್ರದೇಶದ ಯಶೋಗಾಥೆಯೊಂದನ್ನು ಹಂಚಿಕೊಂಡರು. ಮಧ್ಯಪ್ರದೇಶದ ದಿಂಡೋರಿಯ ರಾಯ್‌ಪುರ ಗ್ರಾಮದಲ್ಲಿ ದೊಡ್ಡ ಕೊಳದ ನಿರ್ಮಾಣದಿಂದ ಅಂತರ್ಜಲ ಮಟ್ಟ ಗಣನೀಯವಾಗಿ ಹೆಚ್ಚಿದೆ. ಈ ಗ್ರಾಮದ ಮಹಿಳೆಯರು ಇದರಿಂದ ಪ್ರಯೋಜನ ಪಡೆದರು ಎಂದು ಹೇಳಿದರು.
ತಮ್ಮ ಭಾಷಣದಲ್ಲಿ, ಅಮೆರಿಕದ ಪುರಾತನ ಕಲಾಕೃತಿಗಳನ್ನು ಹಿಂದಿರುಗಿಸುವ ಕುರಿತು ಮಾತನಾಡಿದ ಪ್ರಧಾನಿ ಮೋದಿ, “ನಮ್ಮ ಪರಂಪರೆಯ ಬಗ್ಗೆ ನಾವೆಲ್ಲರೂ ತುಂಬಾ ಹೆಮ್ಮೆಪಡುತ್ತೇವೆ. ನಾನು ಯಾವಾಗಲೂ ‘ವಿಕಾಸ್ ಭಿ, ವಿರಾಸತ್ ಭಿ’ ಎಂದು ಹೇಳುತ್ತೇನೆ. ನಮ್ಮ ಪ್ರಾಚೀನ ಕಲಾಕೃತಿಗಳನ್ನು ಯುಎಸ್ ಹಿಂದಿರುಗಿಸುವ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ ಎಂದರು.
ಹಬ್ಬ ಹರಿದಿನಗಳಲ್ಲಿ ಮೇಡ್ ಇನ್ ಇಂಡಿಯಾ ಉತ್ಪನ್ನಗಳನ್ನು ಖರೀದಿಸುವಂತೆ ಪ್ರಧಾನಿ ಮೋದಿ ಮನವಿ ಮಾಡಿದರು.
ಮನ್ ಕಿ ಬಾತ್ ಕಾರ್ಯಕ್ರಮ ಅಕ್ಟೋಬರ್ 3, 2014 ರಂದು ಪ್ರಾರಂಭವಾಯಿತು. ಪ್ರಧಾನಿ ಪ್ರತಿ ತಿಂಗಳು ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡುತ್ತಾ, ಭಾರತದ ಅಭಿವೃದ್ಧಿ ಪಯಣದಲ್ಲಿ ಭಾಗವಹಿಸಲು ಲಕ್ಷಾಂತರ ಜನರನ್ನು ಪ್ರೇರೇಪಿಸುತ್ತಿದ್ದಾರೆ. ಪ್ರತಿ ತಿಂಗಳು ವಿವಿಧ ಕ್ಷೇತ್ರದ ಸಾಧನೆಗಳು, ಕಹಿಘಟನೆ, ಸಂತೋಷ ಮತ್ತು ಹೆಮ್ಮೆಯ ಕ್ಷಣಗಳನ್ನು ಮತ್ತು ನವ ಭಾರತಕ್ಕಾಗಿ ಸಲಹೆಗಳನ್ನು ಮೋದಿ ಈ ಕಾರ್ಯಕ್ರಮದ ಮೂಲಕ ಹಂಚಿಕೊಳ್ಳುತ್ತಿದ್ದಾರೆ.
22 ಭಾರತೀಯ ಭಾಷೆಗಳು ಮತ್ತು 29 ಉಪಭಾಷೆಗಳು ಸೇರಿದಂತೆ, ‘ಮನ್ ಕಿ ಬಾತ್’ ಅನ್ನು ಫ್ರೆಂಚ್, ಚೈನೀಸ್, ಇಂಡೋನೇಷಿಯನ್, ಟಿಬೆಟಿಯನ್, ಬರ್ಮೀಸ್, ಬಲೂಚಿ, ಅರೇಬಿಕ್, ಪಶ್ತು, ಪರ್ಷಿಯನ್, ಡಾರಿ ಮತ್ತು ಸ್ವಾಹಿಲಿ ಸೇರಿದಂತೆ 11 ವಿದೇಶಿ ಭಾಷೆಗಳಲ್ಲಿ ಪ್ರಸಾರ ಮಾಡಲಾಗುತ್ತದೆ. ಮನ್ ಕಿ ಬಾತ್ ಅನ್ನು ಆಲ್ ಇಂಡಿಯಾ ರೇಡಿಯೊದ 500 ಕ್ಕೂ ಹೆಚ್ಚು ಪ್ರಸಾರ ಕೇಂದ್ರಗಳು ಪ್ರಸಾರ ಮಾಡುತ್ತವೆ