ಕೇರಳದ ಮಲಯಾಳಂ ಸಿನಿಮಾ ಇಂಡಸ್ಟ್ರಿಯಲ್ಲಿ ನಡೆದ ಮಹಿಳಾ ದೌರ್ಜನ್ಯದ ಕುರಿತು ತನಿಖೆ ನಡೆಸಿದ ಜಸ್ಟೀಸ್ ಹೇಮಾ ಕಮಿಟಿ ಆಯೋಗದ ಮಾದರಿಯಲ್ಲಿ ದೇಶದ ಎಲ್ಲಾ ಭಾಷೆಗಳ ಸಿನಿಮಾದಲ್ಲೂ ತನಿಖಾ ಆಯೋಗ ರಚನೆಯಾಗಬೇಕು, ಪ್ರಾಮಾಣಿಕ ತನಿಖಾ ವರದಿ ನ್ಯಾಯಾಲಯಕ್ಕೆ ಸಲ್ಲಿಕೆಯಾಗಬೇಕೇಂದು ಪ್ರಸಿದ್ಧ ನಟಿ ಪ್ರಿಯಾಮಣಿ ಅಭಿಪ್ರಾಯಪಟ್ಟಿದ್ದಾರೆ.
ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಈ ಕುರಿತಾದ ಅಭಿಪ್ರಾಯ ಪ್ರಕಟಿಸಿದ ಅವರು ಮಹಿಳಾ ದೌರ್ಜನ್ಯಕ್ಕೆ ರಾಜ್ಯ,ಭಾಷೆ, ಉದ್ಯಮಗಳ ವ್ಯತ್ಯಾಸವಿಲ್ಲ. ಎಲ್ಲಾ ಕ್ಷೇತ್ರಗಳಲ್ಲಿ ನಡೆಯುತ್ತಿವೆ ಎಂದರೂ ಸಿನಿಮಾ ಕ್ಷೇತ್ರದ ಶೋಷಣೆಯ ರೀತಿಯೇಬೇರೆ. ಇದು ಗ್ಲಾಮರಸ್ ಜಗತ್ತು. ಅನೇಕರು ಅವಕಾಶ, ಭವಿಷ್ಯ, ದುಡ್ಡು ಇನ್ನಿತ್ಯಾದಿ ಕಾರಣಗಳಿಂದ ಬಾಯ್ಬಿಡುತ್ತಿಲ್ಲ. ಪ್ರತಿಭಟಿಸಿದ ಕೆಲವರಿಗೆ ಅವಕಾಶಗಳೇ ದಕ್ಕುವುದಿಲ್ಲ. ಆದ್ದರಿಂದ ಸಿನಿಮಾ ರಂಗದ ಮಹಿಳೆಯರೆಲ್ಲ ವ್ಯಭಿಚಾರಿಗಳೆಂಬಂತೆ ಪ್ರಚಾರವಾಗುತ್ತಿದೆ. ಆದರೆ ವಾಸ್ತವ ಹಾಗಲ್ಲ, ಇಲ್ಲಿ ಸಭ್ಯರೂ ಇದ್ದಾರೆ. ಆದ್ದರಿಂದಲೇ ಎಲ್ಲಾ ಭಾಷೆಯ ಸಿನಿಮಾ ರಂಗದಲ್ಲೂ ಮಹಿಳಾ ದೌರ್ಜನ್ಯದ ತನಿಖೆಗೆ ಆಯೋಗಗಳು ಅಗತ್ಯ ಎಂದಿದ್ದಾರೆ ದ.ಭಾರತದ ಖ್ಯಾತ ನಟಿ ಪ್ರಿಯಾಮಣಿ.
ಮಹಿಳೆಯರ ಉದ್ಯೋಗ ಸುರಕ್ಷಿತತೆ ಮತ್ತು ಗೌರವದ ವಿಷಯವಿದು. ಉದ್ಯಮವನ್ನು ಪುರುಷ ದಬ್ಬಾಳಿಕೆ ನಿಯಂತ್ರಿಸುವ ಕಾರಣ ಮಹಿಳೆಯರು ಕೆಲವೊಮ್ಮೆ ಬಲಿಪಶು ಆಗಿರಬಹುದು. ಆದರೆ ಈಗ ಕಾಲ ಬದಲಾಗಿದೆ. ಮಹಿಳೆಯರ ಕಲೋದ್ಯೋಗ ರಂಗದ ಗೌರವ, ಮಾನ,ಮರ್ಯಾದೆ ಕಾಪಾಡುವ ಹೊಣೆ ನ್ಯಾಯಾಂಗಕ್ಕಿದೆ. ಈ ದೃಷ್ಠಿಯಲ್ಲಿ ನ್ಯಾಯಾಂಗದ ಮೇಲುಸ್ತುವಾರಿಯಲ್ಲಿ ತನಿಖಾ ಆಯೋಗ ರೂಪಿಸಬೇಕು, ಉದ್ದಿಮೆಯನ್ನು ಸ್ಶಚ್ಛಗೊಳಿಸಿ ನವಾಗತ ಪ್ರತಿಭೆಗಳನ್ನು ಸ್ವಾಗತಿಸಬೇಕೆಂದು ಪ್ರಿಯಾಮಣಿ ಹೇಳಿದ್ದಾರೆ.