ಮನೆಯ ಆಸ್ತಿಯಾಗಿದ್ದವ ಅಸ್ಥಿಯಾಗಿ ದೊರೆತ!
ಕಣ್ಣಾಡಿಕಲ್ಲ್ ಗ್ರಾಮದಲ್ಲಿ ಕಣ್ಣೀರಕೋಡಿ….
ಕಣಿಪುರ ಸುದ್ದಿಜಾಲ(ಸೆ.28)
ಕಾರವಾರದ ಶಿರೂರು ಭೂಕುಸಿತದಲ್ಲಿ ಲಾರಿ ಸಹಿತ ಮಣ್ಣುಪಾಲಾಗಿ ಗಂಗಾವಳಿ ನದಿ ಆಹುತಿ ತೆಗೆದ ಕೇರಳದ ಲಾರಿ ಚಾಲಕ ಅರ್ಜುನ್ ಇನ್ನು ನೆನಪು...
ಕೇರಳದ ಕಲ್ಲಿಕೋಟೆಯ ಕಣ್ಣಾಡಿಕಲ್ ಗ್ರಾಮದಲ್ಲಿ ಸಾವಿರಾರು ಮಂದಿಯ ಅಂತಿಮದರ್ಶನದೊಂದಿಗೆ ಅರ್ಜುನ್ ಅಂತಿಮಕ್ರಿಯೆ ನಡೆಯಿತು. ಅರ್ಜುನ್ ಒಬ್ಬ ಸೆಲೆಬ್ರೆಟಿಯೇನಲ್ಲ, ಆತನೊಬ್ಬ ಲಾರಿ ಚಾಲಕ. ಆದರೆ ಭೂಕುಸಿತದಲ್ಲಿ ಮಣ್ಣುಪಾಲಾಗಿ ನದಿಯಲ್ಲಿ ಸಿಲುಕಿ ಕಾಣೆಯಾಗಿದ್ದ ಆತನ ಪತ್ತೆಗಾಗಿ ಮಾಧ್ಯಮಗಳೊಂದಿಗೆ ಮಾನವೀಯತೆಯಿಂದ ಕೇರಳಕ್ಕೆ ಕೇರಳವೇ ಕಾತರದ ಕಳಕಳಿಯಿಂದ ನಿರೀಕ್ಷೆ ಕೈ ಬಿಡದೇ ಕಾದಿತ್ತು. ಆದ್ದರಿಂದಲೇ ನಾಪತ್ತೆಯಾಗಿ 75ದಿನಗಳ ಬಳಿಕ ಪಾರ್ಥಿವ ಶರೀರವಾಗಿ ಮರಳಿ ಬಂದಾಗ ಆತನನ್ನು ಕಾಣಲು ನಾನಾ ದಿಕ್ಕುಗಳಿಂದ ಜನರಾಗಮಿಸಿದ್ದರು. ಜನದಟ್ಟಣೆಯಿಂದ ಆ ಗ್ರಾಮಕ್ಕೆ ಕಾಲೂರಲೂ ಆಗದಂತಹ ವಾತಾವರಣ ನಿರ್ಮಾಣವಾಯಿತು.
ಅವರೆಲ್ಲ ಅರ್ಜುನ್ ನ ಪರಿಚಿತರೇನಲ್ಲ, ಸಂಬಂಧಿಗಳೂ ಅಲ್ಲ, ಆದರೆ ಮಮತೆಯಿಂದ ನಾಡೇ ಜೊತೆಯಾಗಿ ಕಂಬನಿ ಮಿಡಿಯಿತು..!
ಅರ್ಜುನ್ ಸಿರಿವಂತನೇನಲ್ಲ. ಚಾರಿ ಚಾಲಕನಾಗಿ ದುಡಿದು ಮನೆ, ಕುಟುಂಬ ಪೋಷಿಸುತ್ತಿದ್ದ. ಪ್ರಾರಬ್ದಗಳ ನಡುವೆ ಮನೆ ಕಟ್ಟಿದ್ದ. ಆ ಮನೆಯಿಂದ ಜುಲೈ 8ರಂದು ಕೆಲಸಕ್ಕೆಂದು ಹೋದಾತ ಮರಳಿ ಹೊರಟಿದ್ದನಾದರೂ ಮನೆಗೆ ಜೀವಂತ ತಲುಪಲು ಶಿರೂರು ಗುಡ್ಡ, ಗಂಗಾವಳಿ ನದಿ ಬಿಡಲಿಲ್ಲ!
ಭೂಕುಸಿತದಲ್ಲಿ ಕೊಚ್ಚಿ ಹರಿಯುವ ನದಿಗೆ ಲಾರಿ ಸಹಿತ ಕೊಚ್ಚಿಹೋದ ಅರ್ಜುನ್ ಪತ್ತೆಗೆ ಮತ್ತೆ ನಡೆದದ್ದೇ ಮಹಾ ಕಾರ್ಯಾಚರಣೆ. ಸತತ 72ದಿನಗಳ ಹುಡುಕಾಟದ ಬಳಿಕ ನಜ್ಜುಗುಜ್ಜಾದ ಲಾರಿಯೊಂದಿಗೆ ಅದರ ಕ್ಯಾಬಿನ್ ನಲ್ಲಿ ಅರ್ಜುನ್ ಕಳೇಬರ ಮೊನ್ನೆ ಪತ್ತೆಯಾಗಿತ್ತು. ಅದರೊಂದಿಗೆ ಪ್ರೀತಿಯ ಮಗನಿಗೆ ಆಟವಾಡಲೆಂದು ತೆಗೆದ ಆಟಿಕೆ ಲಾರಿಯೂ ಇತ್ತು!
ನಿನ್ನೆ ಸಂಜೆ ಕಾರವಾರದಲ್ಲಿ ಡಿಎನ್ ಎ ಪರೀಕ್ಷೆ ನಡೆದು ಕುಟುಂಬದವರಿಗೆ ಹಸ್ತಾಂತರವಾದ ಕಳೇಬರವನ್ನು ಇಂದು ಬೆಳಿಗ್ಗೆ ಮನೆಗೆ ತಲುಪಿಸಲಾಯಿತು. ನಾನಾ ದಿಕ್ಕುಗಳಿಂದ ಬಂದವರೆಲ್ಲರ ಅಂತಿಮ ದರ್ಶನದೊಂದಿಗೆ ಮಧ್ಯಾಹ್ನದ ವೇಳೆ ಅಂತ್ಯಕ್ರಿಯೆ ನಡೆಯಿತು.
ಇನ್ನು ಅರ್ಜುನ್ ಮಾತ್ರವಲ್ಲ, ಶಿರೂರು ಭೂಕುಸಿತ, ಗಂಗಾವಳಿ ನದಿಯಲ್ಲಿ ನಡೆದ ಮಹಾ ಕಾರ್ಯಾಚರಣೆ ಎಲ್ಲವೂ ಮರೆಯಲಾಗದ ನೆನಪು ಮಾತ್ರ…