ನೀರ್ಚಾಲು: ಗಡಿನಾಡು ಕಾಸರಗೋಡಿನಲ್ಲಿ ಕನ್ನಡ ಭಾಷೆ, ಕಲೆ, ಸಂಸ್ಕೃತಿಯ ಅಭ್ಯುದಯಕ್ಕೆ ಕೊಡುಗೆ ನೀಡಿದ ಸಾಧಕರನ್ನು ಮತ್ತು ಪ್ರಾತಿನಿಧಿಕ, ಐತಿಹಾಸಿಕ ಸಂಸ್ಥೆಗಳನ್ನು ಜಗತ್ತಿಗೆ ಪರಿಚಯಿಸುವ ಕಾಸರಗೋಡು ಕನ್ನಡ ವಿಕಾಸ ಮಾಹಿತಿ ಅಭಿಯಾನದ ಎರಡನೇ ಹಂತಕ್ಕೆ ಚಾಲನೆಯಾಯಿತು.
ವಿಕಾಸ ಟ್ರಸ್ಟ್ ನೇತೃತ್ವದಲ್ಲಿ ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಹೈಸ್ಕೂಲಿನಲ್ಲಿ ಸೆ.28ರಂದು ನಡೆದ ಸಮಾರಂಭದಲ್ಲಿ ಖ್ಯಾತ ಕವಿ ಕೆ.ವಿ.ತಿರುಮಲೇಶರ ಮಾಹಿತಿಯೊಂದಿಗೆ 76ನೇ ಮಾಹಿತಿಪತ್ರ ಬಿಡುಗಡೆಗೊಂಡು ಅಭಿಯಾನಕ್ಕೆ ಪುನರ್ ಚಾಲನೆ ನೀಡಲಾಯಿತು.
ವಿಕಾಸ ಟ್ರಸ್ಟ್ ನೇತೃತ್ವದಲ್ಲಿ ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಹೈಸ್ಕೂಲಿನಲ್ಲಿ ಸೆ.28ರಂದು ನಡೆದ ಸಮಾರಂಭದಲ್ಲಿ ಖ್ಯಾತ ಕವಿ ಕೆ.ವಿ.ತಿರುಮಲೇಶರ ಮಾಹಿತಿಯೊಂದಿಗೆ 76ನೇ ಮಾಹಿತಿಪತ್ರ ಬಿಡುಗಡೆಗೊಂಡು ಅಭಿಯಾನಕ್ಕೆ ಪುನರ್ ಚಾಲನೆ ನೀಡಲಾಯಿತು.
ಶ್ರೀಮದೆಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಮತ್ತು ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಡಿ.ಶಿಲ್ಪ ದ್ಯಾವಯ್ಯ, ಬೇಳ ಇಗರ್ಜಿಯ ಧರ್ಮಗುರು ರೆ.ಫಾ. ಸ್ಟೇನಿ ಪಿರೇರಾ, ಪದ್ಮಶ್ರೀ ಸತ್ಯನಾರಾಯಣ ಬೆಳೇರಿ, ನೀರ್ಚಾಲು ಮಹಾಜನ ವಿದ್ಯಾಸಂಸ್ಥೆಗಳ ವ್ಯವಸ್ಥಾಪಕ ಜಯದೇವ ಖಂಡಿಗೆ, ವಿಕಾಸ ಟ್ರಸ್ಟ್ ಅಧ್ಯಕ್ಷ ರವಿನಾರಾಯಣ ಗುಣಾಜೆ ಉಪಸ್ಥಿತಿಯಲ್ಲಿ ಮಾಹಿತಿ ಅಭಿಯಾನ ಪತ್ರ ಬಿಡುಗಡೆಯಾಯಿತು.
ಕಾಸರಗೋಡಿನ ಸಾಂಸ್ಕೃತಿಕ ಚರಿತ್ರೆಗೆ ಕನ್ನಡಿ ಹಿಡಿಯುವ 75 ಮಾಹಿತಿ ಪತ್ರಗಳನ್ನು ಮೊದಲ ಹಂತದಲ್ಲಿ ಬಿಡುಗಡೆ ಮಾಡಲಾಗಿದೆ. ನೂರಾರು ಸಾಧಕರ ಮಾಹಿತಿ ಪ್ರಕಟಿಸಲು ಉಳಿದಿದ್ದು ಎರಡನೇ ಹಂತದಲ್ಲಿ ಇನ್ನಷ್ಟು ಮಂದಿಗಳ ಮಾಹಿತಿ ಪ್ರಕಟಿಸಲಾಗುವುದೆಂದು ಘೋಷಿಸಲಾಗಿದೆ.
ಕಾರ್ಯಕ್ರಮದಲ್ಲಿ ಪದ್ಮಶ್ರೀ ವಿಜೇತ, ತಳಿ ಸಂರಕ್ಷಕ ಸತ್ಯನಾರಾಯಣ ಬೆಳೇರಿ ಅವರನ್ನು ಗೌರವಿಸಿ, ಸನ್ಮಾನಿಸಲಾಯಿತು.
🔵 ಕನ್ನಡ ಕಾರ್ಯಕ್ರಮ: ತವರಿನ ಸಂಭ್ರಮವೆಂದ ಪೋಲೀಸ್ ವರಿಷ್ಠೆ
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಕನ್ನಡತಿ, ಶಿಲ್ಪಾ ದ್ಯಾವಯ್ಯ ಮಾತನಾಡಿ “ಕಾಸರಗೋಡಿನ ಕನ್ನಡ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳುವಾಗ ತವರಿಗೆ ಹೋದಂತಹ ಸಂಭ್ರಮವಾಗುತ್ತದೆ. ಈ ನೆಲದ ಸಾಂಸ್ಕೃತಿಕ ಇತಿಹಾಸ ಕಟ್ಟಿದವರನ್ನು ಮಾಹಿತಿ ಪತ್ರದ ಮೂಲಕ ಮುಂದಿನ ತಲೆಮಾರಿಗೂ, ಕಾಸರಗೋಡಿಗೆ ಬರುವ ಅನ್ಯ ರಾಜ್ಯದವರಿಗೂ ಪರಿಚಯಿಸುವ ಕೆಲಸ ಪ್ರಶಂಸನೀಯ. ಇದು ನೆಲದ ಮೇಲಣ ಕಾಳಜಿಯ ಕಾಯಕ” ಎಂದವರು ಅಭಿನಂಧಿಸಿದರು.
ಕಾಸರಗೋಡಲ್ಲಿ ಅನೇಕ ಕನ್ನಡಿಗರಿದ್ದು ಭಾಷೆಯನ್ನು ಬಳಸುವ ಮೂಲಕ ಬೆಳೆಸಬೇಕೇ ಹೊರತು, ಭಾಷೆಯನ್ನೇ ಹೋರಾಟ,ಧ್ವೇಷ ಮತ್ತು ವ್ಯವಹಾರದ ಆಯುಧವಾಗಿಸಬಾರದು. ಭಾಷೆ ನಮ್ಮ ಸಂಸ್ಕೃತಿ, ಸಂಸ್ಕಾರದ ಪ್ರತೀಕವಾಗಿ ಉಳಿಸಬೇಕೆಂದು ಅವರು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ದಿವ್ಯಾಗಟ್ಟಿ ಪರಕ್ಕಿಲ ನಿರೂಪಿಸಿ ವಂದಿಸಿದರು. ಗಾಯಕ ಕಿಶೋರ್ ಪೆರ್ಲ ನಾಡಗೀತೆ ಹಾಡಿದರು. ಟ್ರಸ್ಟ್ ಅಧ್ಯಕ್ಷ ರವಿನಾರಾಯಣ ಗುಣಾಜೆ ಪ್ರಾಸ್ತಾವಿಕ ಮಾತನಾಡಿ, ಈ ಮೊದಲಿನ 75 ಮಾಹಿತಿ ಪತ್ರಗಳ ವಿವರಣೆ ಇತ್ತರು.
ಸಮಾರಂಭದಲ್ಲಿ ನೂರಾರು ಗಣ್ಯರು ಪಾಲ್ಗೊಂಡರು.
ಚಿತ್ರ: ಹರೀಶ್ ಹಳೆಮನೆ