ಹಿರಿಯ ಹಾಸ್ಯಗಾರ ಬಂಟ್ವಾಳ ಜಯರಾಮ ಆಚಾರ್ಯರಿಗೆ ಕಡಬದ್ವಯ ಪ್ರಶಸ್ತಿ

by Narayan Chambaltimar

ಮಂಗಳೂರು: ತೆಂಕುತಿಟ್ಟಿನ ಹಿರಿಯ ಹಾಸ್ಯಗಾರ ಬಂಟ್ವಾಳ ಜಯರಾಮ ಆಚಾರ್ಯರಿಗೆ 2024ರ “ಕಡಬದ್ವಯ” ಪ್ರಶಸ್ತಿ ಘೋಷಿಸಲಾಗಿದೆ.

ತೆಂಕುತಿಟ್ಟು ಯಕ್ಷಗಾನದ ಮದ್ದಳೆವಾದಕರಾಗಿ ನುಡಿತ ವೈಶಿಷ್ಠ್ಯಗಳಿಂದಲೇ ಖ್ಯಾತರಾದ ದಿ. ಕಡಬ ನಾರಾಯಣ ಆಚಾರ್ಯ ಮತ್ತು ಅತ್ಯಂತ ಕಿರಿವಯಸ್ಸಿನಲ್ಲೇ ಖ್ಯಾತಿಯ ಉತ್ತುಂಗಕ್ಕೇರಿ ಅಗಲಿದ ಅವರ ಪುತ್ರ ದಿ. ಕಡಬ ವಿನಯ ಆಚಾರ್ಯರ ಹೆಸರನ್ನು ಶಾಶ್ವತ ನೆನಪಾಗಿಸುವ ದೃಷ್ಟಿಯಲ್ಲಿ ವರ್ಷಂಪ್ರತಿ ಈ ಪ್ರಶಸ್ತಿ ನೀಡಲಾಗುತ್ತಿದೆ. ಪ್ರಸ್ತುತ 5ನೇ ವರ್ಷದ ಪ್ರಶಸ್ತಿಯಾಗಿದ್ದು, ಮುಂಬರುವ ನವಂಬರ್ 27ರಂದು ಮಂಗಳೂರು ರಥಬೀದಿಯ ಕಾಳಿಕಾಂಬಾ ದೇವಾಲಯದಲ್ಲಿ ಅಪರಾಹ್ನ 2ರಿಂದ ಪ್ರಶಸ್ತಿ ಪ್ರದಾನ ಸಮಾರಂಭ ಜರಗಲಿದೆ.

ಬಂಟ್ವಾಳದ ದಿ.ಗಣಪತಿ ಆಚಾರ್ಯ – ಭವಾನಿ ದಂಪತಿಯ ಪುತ್ರನಾಗಿ ಜನಿಸಿದ ಜಯರಾಮ ಆಚಾರ್ಯರು 7ನೇ ತರಗತಿ ಕಲಿತು 13ರ ಹರೆಯದಲ್ಲೇ ಯಕ್ಷಗಾನಕ್ಕೆ ಪ್ರವೇಶಿಸಿದವರು. ದಿ.ಪಡ್ರೆ ಚಂದು ಮತ್ತು ನೆಲ್ಲಿಕಟ್ಟೆ ನಾರಾಯಣ ಹಾಸ್ಯಗಾರರ ಶಿಷ್ಯನಾಗಿ ಯಕ್ಷನಾಟ್ಯ ಕಲಿತು, ಬಾಲಕಲಾವಿದನಾಗಿ ರಂಗವನ್ನೇರಿದ ಅವರು ಅಮ್ಟಾಡಿ, ಸೋರ್ನಾಡು, ಸುಂಕದಕಟ್ಟೆ, ಕಟೀಲು, ಕದ್ರಿ, ಕುಂಬ್ಳೆ, ಸುರತ್ಕಲ್ ಮೇಳಗಳಲ್ಲಿ ಯಶಸ್ವಿ ಯಕ್ಷಪಯಣ ನಡೆಸಿ ಬಳಿಕ ಎಡನೀರು, ಹೊಸನಗರ, ಹನುಮಗಿರಿ ಮೇಳದಲ್ಲಿ ಹಾಸ್ಯಗಾರನಾಗಿ ಸಂತೃಪ್ತ ಮತ್ತು ಜನಪ್ರಿಯತೆಯ ಕಲಾಯಾನ ನಡೆಸಿದವರು. ಕಳೆದ ಐದು ದಶಕಕ್ಕೂ ದೀರ್ಘಕಾಲ ತುಳು, ಕನ್ನಡ ಪ್ರಸಂಗಗಳ ನೂರಾರು ಪಾತ್ರಕ್ಕೆ ತನ್ನ ಸ್ವತಸಿದ್ಧ ಶೈಲಿಯಿಂದ ಹಾಸ್ಯ ರಸ ಪೋಣಿಸಿದ ಅವರು ಒಂದು ತಲೆಮಾರಿನ ಯಕ್ಷಗಾನದ, ಕಲಾಭಿಮಾನಿಗಳ ಮೇಲೆ ಪ್ರಭಾವ ಬೀರಿದ,ಅನುಭವಿ ಕಲಾವಿದರು.
ಕಲಾಸಾಧನೆಗೆ ರಾಜ್ಯೋತ್ಸವ ಪ್ರಶಸ್ತಿ, ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಮುಡಿದಿರುವ ಇವರು ಸಭ್ಯ, ರಾಜಹಾಸ್ಯಕ್ಕೆ ಹೆಸರಾದವರು.

ಇವರಿಗೆ ಒಡನಾಡಿ ಕಲಾವಿದರಾದ ಕಡಬದ್ವಯರ ಸ್ಮೃತಿಯೊಂದಿಗೆ, ಉಭಯ ಸ್ವಾಮೀಜಿಗಳ ಉಪಸ್ಥಿತಿಯಲ್ಲಿ ಡಾ.ಟಿ. ಶಾಂಭಟ್ಟರ ಅಧ್ಯಕ್ಷತೆಯಲ್ಲಿ ಪ್ರಶಸ್ತಿ ಪ್ರದಾನವಾಗಲಿದೆ. ಬಳಿಕ ಪ್ರಸಿದ್ಧ ಕಲಾವಿದರಿಂದ ಯಕ್ಷಗಾನ ಬಯಲಾಟ ಜರಗಲಿದೆಯೆಂದು ಪ್ರಕಟಣೆ ತಿಳಿಸಿದೆ.

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00