Kanipura special
ಕನಿಷ್ಠ ಸೇವಾ ಕೈಂಕರ್ಯ, ಶ್ರಮದಾನಕ್ಕೂ ಕೂಡಾ ಊರ ಕಾರ್ಯಕರ್ತರ ಕೊರತೆಯಿದ್ದ ಹಳ್ಳಿಯ ಪುಟ್ಟ ದೇಗುಲವನ್ನು ಭಜನೆಯೇ ಬೆಳಗಿಸಿದ ಸ್ಪೂರ್ತಿಯ ಕತೆ ಇದು…
ಭಜನೆಯೇ ಕ್ಷೇತ್ರ ಶಕ್ತಿ ಸಂಚಯಿಸಿದ ಇಂಥದ್ದೊಂದು ಅಪೂರ್ವ ವಿದ್ಯಾಮಾನ ಘಟಿಸಿರುವುದು ಮತ್ತೆಲ್ಲೋ ಅಲ್ಲ.., ಇದು ಕಾಸರಗೋಡಿನ ಪುಟ್ಟ ಹಳ್ಳಿ ಪುತ್ತಿಗೆ ಪಂಚಾಯತಿನ ಕಂಬಾರಿನ ಕತೆ..
ಕಂಬಾರು ಶ್ರೀ ದುರ್ಗಾಪರಮೇಶ್ವರಿ , ಜಠಾಧಾರಿ ದೇವಾಲಯ ಗ್ರಾಮೀಣ ಹಳ್ಳಿಯೊಂದರ ಗ್ರಾಮದೇಗುಲ. ಇದು ಧರ್ಮತ್ತಡ್ಕ , ಪುತ್ತಿಗೆಯ ವಿಶಾಲ ಬಯಲಿನ ಕೃಷಿಭೂಮಿಯ ನಡುವೆ ಎತ್ತರದ ಗುಡ್ಡೆಯ ಮುಕುಟದಲ್ಲಿ ನಾಡಿಗೆ ಮುಗುಳಿ ಇಟ್ಟಂತೆ ಪ್ರಶೋಭಿಸುತ್ತದೆ.
ಕೃಷಿಕರು, ಕಾರ್ಮಿಕರು, ಗ್ರಾಮ್ಯ ಬಡವರಷ್ಟೇ ತುಂಬಿರುವ ಹಳ್ಳಿಯಲ್ಲಿ ನಿತ್ಯವೂ ಕಿ.ಮೀ.ನಡೆದು, ಗುಡ್ಡವನ್ನೇರಿ ಕ್ಷೇತ್ರ ದರ್ಶನ ಮಾಡುವ ಭಕ್ತರೇನೂ ಇಲ್ಲ. ವಿಶೇಷ ಕಾರ್ಯಕ್ರಮಗಳಿಗಷ್ಟೇ ಜನಜಮಾಯಿಸುತ್ತಿದ್ದರು. ಇಂಥ ದೇಗುಲವೊಂದು ಈಗ ಶಕ್ತಿ,ಸಾನ್ನಿಧ್ಯ ಕತೆಗಳೊಂದಿಗೆ ಪ್ರಕಾಶಮಾನವಾಗಿ ಅರಳತೊಡಗಿದೆ. ಬ್ರಹ್ಮಕಲಶೋತ್ಸವದ ಕಡೆಗೆ ಹೆಜ್ಜೆಯನ್ನೆತ್ತಿದೆ. ಈ ದೇಗುಲಕ್ಕೆ ಭಜನೆಯೇ ಶಕ್ತಿ ತಂದು ಪ್ರಸಿದ್ಧಿಯನ್ನಿತ್ತ ಕತೆ ಇದು..
2018ರಲ್ಲಿ ನವರಾತ್ರಿಯ ಕೊನೆಯ ದಿನ ಶ್ರೀಕ್ಷೇತ್ರದಲ್ಲಿ ದಾಸಸಂಕೀರ್ತನಕಾರ ರಾಮಕೃಷ್ಣ ಕಾಟುಕುಕ್ಕೆ ಬಳಗದ ದಾಸವಾಣಿ ನಡೆಯಿತು. ಈ ಸಂದರ್ಭ ಇಲ್ಲಿನ ಭಜನಾಸಕ್ತರಿಗೂ ತರಬೇತಿ ನೀಡುವಂತೆ ದೇವಳದ ಭಜನಾ ಮಂಡಳಿ ವಿನಂತಿಸಿತು. ಭಜನಾ ಪ್ರೇಮಿಗಳು ತರಗತಿಗೆ ಬರುವಾಗ ಅವರ ಮನೆಯವರೂ ಕ್ಷೇತ್ರಕ್ಕೆ ಬಂದರು. ಪ್ರತಿವಾರ ಕ್ಷೇತ್ರದಲ್ಲಿ ಜನಜಮಾಯಿಸತೊಡಗಿತು. ಅವರು ದೇಗುಲದ ಸಣ್ಣಪುಟ್ಟ ಕೆಲಸಗಳಿಗೆ ಕೈ ಜೋಡಿಸತೊಡಗಿದರು.
ಇದೇ ಆರಂಭ..
ಕನಿಷ್ಟ ಶ್ರಮದಾನ ಸೇವೆಗೂ ಜನಸಿಗದಿದ್ದ ಜಾಗದಲ್ಲಿ ಭಜನೆಯ ಮೂಲಕ ಶಕ್ತಿ ಸಂಚಯವಾಯಿತು. ಗ್ರಾಮ್ಯ ಮುಗ್ಧ ಜನರು ಭಜನೆಯಲ್ಲೂ ನಿಷ್ಠೆಯಿಂದ ತೊಡಗಿಸಿದ ಕಾರಣ ಮಂಡಳಿಯೂ ಅಭ್ಯುದಯ ಕಂಡಿತು..
ಭಜನೆಯ ಹೆಸರಲ್ಲಿ ಹೇಗೂ ಮನೆಮಂದಿಗಳೆಲ್ಲಾ ಬರುತ್ತಾರೆ. ಈ ಪೈಕಿ ಮಕ್ಕಳಿಗಾಗಿ ಕುಣಿತ ಭಜನೆ ಆರಂಭಿಸಿದರೆ ಹೇಗೆ?
ಭಜನಾ ಸಂಘದ ಮುಂದಾಳು ಕೃಷ್ಣ ಭಟ್ ಮರುವಳರಿಗೆ ಯೋಚನೆ ಬಂತು. ಅದು ಯೋಜನೆಯಾಯಿತು. ಸುಬ್ರಹ್ಮಣ್ಯ ಕಾಣಿಯೂರಿನ ಸದಾನಂದ ಆಚಾರ್ಯ ಗುರುಗಳಾಗಿ ಬಂದರು. ಮಕ್ಕಳೊಂದಿಗೆ ಹಿರಿಯರೂ ದೇವನಾಮ ಸಂಕೀರ್ತನೆ ಹಾಡಿ ಕುಣಿದರು. ತಾಳದ ಪೆಟ್ಟಿಗೆ ಭಕ್ತಿಯ ಹೆಜ್ಜೆಯನಿಟ್ಟರು. ಹೀಗೆ 2021 ಜನವರಿಯಲ್ಲಿ ಕಾಸರಗೋಡು ಜಿಲ್ಲೆಯ ಮೊದಲ ಕುಣಿತ ಭಜನಾ ತಂಡ ಕಂಬಾರಮ್ಮನ ಅಂಗಳದಿಂದ ಉದಯಿಸಿತು.
ಕಂಬಾರಿನ ಕುಣಿತ ಭಜನಾ ತಂಡಕ್ಕೆ ನೋಡು, ನೋಡುತ್ತಲೇ ಜನಪ್ರಿಯತೆಯ ಬೇಡಿಕೆ ಬಂತು. ಕಂಬಾರಿನ ಹೆಸರೂ ಹತ್ತೂರು ಹರಡಿತು. ದಣಿವಿಲ್ಲದೇ ದೇವನಾಮಕ್ಕೆ ಕುಣಿದು ಕುಪ್ಪಳಿಸುವ ಮಕ್ಕಳ ಪರಿಶ್ರಮಕ್ಕೆ ನಾಗರಿಕರ ಮೆಚ್ಚುಗೆಯ ಬೆಂಬಲ ಸಿಗುತ್ತಲೇ ಸಾಗಿತು. ಯಾವುದೇ ವಿಶೇಷ ಆಚರಣೆ, ಮೆರವಣಿಗೆಗಳಿದ್ದರೂ ಕಂಬಾರಿನ ಕುಣಿತ ಭಜನಾ ತಂಡಕ್ಕೆ ಕರೆ ಖಚಿತವಾಯಿತು. ಈ ಜನ ಬೆಂಬಲದಿಂದ ಕಳೆದ ಕೇವಲ ಮೂರ್ನಾಲ್ಕು ವರ್ಷದಲ್ಲಿ ಈ ತಂಡ 500ಕ್ಕೂ ಅಧಿಕ ಕಡೆಗಳಲ್ಲಿ ಪ್ರದರ್ಶನವಿತ್ತಿದೆ ಎಂದರೆ ಅಚ್ಚರಿಯಲ್ಲವೇ??!!
ಕುಣಿತ ಭಜನೆ ಊರ ಹೊರಗೆ ಪ್ರಪ್ರಥಮ ನಡೆದದ್ದೇ ಮಾಣಿಲ ಶ್ರೀಧಾಮದ ನವರಾತ್ರಿಗೆ. ಆ ಬಳಿಕ ಮಾಜಿ ಸಂಸದ ನಳಿನ್ ಕುಮಾರ್ ಕಟೀಲು ಅವರ ತರವಾಡಿನ ಅದ್ದೂರಿ ಬ್ರಹ್ಮಕಲಶದಲ್ಲೂ ಅವಕಾಶ ಒದಗಿ ಪ್ರಶಂಸೆ ಪಡೆಯಿತು. ಬಳಿಕ ತಿರುಪತಿ, ಗೋಕರ್ಣ, ಬಾನ್ಕುಳಿಮಠ, ಮುರ್ಡೇಶ್ವರ, ಪಂಡರಾಪುರ, ಹೊರನಾಡು ಸಹಿತ ದಕ್ಷಿಣ ಕನ್ನಡ, ಕಾಸರಗೋಡಿನಾದ್ಯಂತ ಪ್ರದರ್ಶನ ಸಹಿತ ಜನಮೆಚ್ಚುಗೆ ಗಳಿಸಿದ ತಂಡದಲ್ಲಿ ಒಟ್ಟು 70ಜನರಿದ್ದಾರೆ. ಇದರಲ್ಲಿ ಪುಟಾಣಿಗಳದ್ದೆಂದೇ ಪ್ರತ್ಯೇಕ ತಂಡವೂ ಇದೆ.
ಭಜನೆ ಹಾಡಿ ಕುಣಿದು ನರ್ತಿಸಿ ಗೀತೆಗೊಂದು ವಿನ್ಯಾಸ ನೀಡುವುದು ಕುಣಿತ ಭಜನೆಯ ಸಂಪ್ರದಾಯ. ಅದು ನಿರ್ದಿಷ್ಟ ಜಾಗದಲ್ಲಿ ಮಂಡಲಾಕೃತಿ ಮಾಡಿ ಪ್ರದರ್ಶಿಸುವುದಿದ್ದರೆ ಮಾತ್ರ ಸಾಧ್ಯ. ಆದರೆ ಅನೇಕರು ವಿವಿಧ ಧಾರ್ಮಿಕ ಮೆರವಣಿಗೆಯಲ್ಲಿ ಸಾಗಲು ಆಹ್ವಾನಿಸುತ್ತಾರೆ. ಆಗ ಹಾಡಿ, ಕುಣಿದು ಸಾಗಲು ಆಗದು. ಆದ್ದರಿಂದ ಅಂಥ ಸಂಧರ್ಭಗಳಲ್ಲಿ ರೆಕಾರ್ಡಿಂಗ್ ಹಾಡಿಗೆ ಕುಣಿತದ ನಡಿಗೆ ನಡೆಯುತ್ತದೆ. ಇದಕ್ಕೆಲ್ಲಾ ಸಾರಥ್ಯ ಭಜನಾಪ್ರೇಮಿ , ದೇವಳದ ಸೇವಾ ಸಂಘದ ಕಾರ್ಯದರ್ಶಿ ಮರುವಳ ಕೃಷ್ಣಭಟ್. ಅವರೇನೂ ಭಜನಾ ಪಟುವಲ್ಲ. ಆದರೆ ಕಂಬಾರು ದೇವಳದ ಉಭಯ ಭಜನಾ ಮಂಡಳಿಗಳ ಔನ್ನತ್ಯಕ್ಕೆ ತನ್ನನ್ನೇ ಸಮರ್ಪಿಸಿಕೊಂಡ ಅವರು ತನ್ನ ಸ್ವೋದ್ಯೋಗವನ್ನೂ ಬದಿಗಿಟ್ಟು ಭಜನೆಗಾಗಿ ಓಡಾಡುತ್ತಾ, ಸಂಘಟನೆ ನಡೆಸುತ್ತಾರೆ. ಭಜನಾ ತರಬೇತಿ ಮತ್ತು ಭಜನಾ ಓಡಾಟಕ್ಕೆಂದೇ ಸುಮಾರು 2ಲಕ್ಷಕ್ಕೂ ಅಧಿಕ ರೂ ವ್ಯಯಿಸಿದ ಇವರು ಕಂಬಾರು ಕ್ಷೇತ್ರದ ಭಜನಾ ಶಕ್ತಿಯ ಖ್ಯಾತಿಯ ಬಾವುಟಕ್ಕೆ ಕದಲದ ಕಂಬ!
ಭಜನೆಯನ್ನು ಪ್ರೀತಿಸಿ, ಪೋಷಿಸಿದ ಇವರ ಕೊಡುಗೆ ಮಾನಿಸಿ ಕಳೆದವರ್ಷ ಧರ್ಮಸ್ಥಳದ ಭಜನಾ ಕಮ್ಮಟದಲ್ಲಿ ಇವರನ್ನು ಭಜನಾ ಸಾಧಕ ಪ್ರಶಸ್ತಿಯನ್ನಿತ್ತು ಗೌರವಿಸಲಾಗಿದೆ.