ಮಂಗಳೂರಿನ ತೋಟಾಬೆಂಗ್ರೆಯ ಬೊಬ್ಬರ್ಯ ಪ್ರಕರಣದ ಕಾರಣ ಬಯಲಾಗಿಸುವಲ್ಲಿ ಪಣಂಬೂರು ಪೊಲೀಸರು ಯಶಸ್ವಿಯಾಗಿದ್ದಾರೆ. ಬೊಬ್ಬರ್ಯ ದೈವಸ್ಥಾನದ ಹಿಂಬದಿಯ ಸಮುದ್ರ ಕಿನಾರೆಯ ಬಳಿ ಬಾಗಲಕೋಟೆ ಮೂಲಕ 39 ವರ್ಷದ ಬಸವರಾಜ ವಡ್ಡರ್ ಅಲಿಯಾಸ್ ಮುದುಕಪ್ಪ ಎಂಬಾತನ ಮೃತದೇಹ ಪತ್ತೆಯಾಗಿತ್ತು. ಇದೊಂದು ಕೊಲೆಪ್ರಕರಣವೆಂದು ಈ ಬಗ್ಗೆ ಕೇಸು ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ನಡೆಸಿ ತೋಟಾ ಬೆಂಗ್ರೆಯ ನಿವಾಸಿಯಾಗಿರುವ ಧರ್ಮರಾಜ್ ಸುವರ್ಣ ಎಂಬಾತನನ್ನು ಕೇರಳದಿಂದ ಬಂಧಿಸಿದ್ದಾರೆ.
ಕೊಲೆ ನಡೆಸಿ ಪರಾರಿಯಾಗಿ ಕೇರಳದ ಕೊಝಿಕೋಡ್ ಜಿಲ್ಲೆಯ ಚೊಂಪಾಳ ಎಂಬಲ್ಲಿ ಆರೋಪಿ ತಲೆಮರೆಸಿಕೊಂಡಿದ್ದನು. ಈತನ ಜಾಡು ಹಿಡಿದು ಹೋದ ಪೊಲೀಸರು ಸೆಪ್ಟಂಬರ್ 26 ನಸುಕಿನ ಜಾವ 3 ಘಂಟೆಗೆ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿ ಕೊಲೆಯಾದ ಬಸವರಾಜ್ ವಡ್ಡರ್ ಜತೆ ಕೆಲ ಸಮಯದಿಂದ ಸ್ನೇಹಿತರಾಗಿದ್ದರು. ಇತ್ತೀಚೆಗೆ ಧರ್ಮರಾಜ್ ಹೊಸ ಮೊಬೈಲ್ ಖರೀದಿ ಮಾಡಿದ್ದು, ಅದನ್ನು ಬಸವರಾಜ್ ವಡ್ಡರ್ ಉಪಯೋಗಕ್ಕೆ ಪಡೆದುಕೊಂಡಿದ್ದ. ಆದರೆ ಬಳಿಕ ಹಿಂತಿರುಗಿಸದೆ ಸತಾಯಿಸಿದ್ದು, ಮೊಬೈಲ್ ಹಾಳು ಮಾಡಿದ್ದ ಎಂಬುವುದು ಧರ್ಮರಾಜ್ ಕೋಪಕ್ಕೆ ಕಾರಣವಾಗಿತ್ತು. ಈ ವಿಚಾರವಾಗಿ ಇವರಿಬ್ಬರ ನಡುವೆ ವೈಮನಸು ಮೂಡಿತ್ತು. ಬಳಿಕ ಜಗಳ ಏರ್ಪಟ್ಟು ಧರ್ಮರಾಜ್ ಕೋಪದಿಂದ ಮರದ ಸಲಾಕೆಯಿಂದ ಬಸವರಾಜ್ ವಡ್ಡರ್ ಮೇಲೆ ಹಲ್ಲೆ ನಡೆಸಿದ್ದು,ಈ ವೇಳೆ ಗಂಭೀರ ಗಾಯಗೊಂಡ ಬಸವರಾಜ್ ವಡ್ಡರ್ ರಕ್ತಸ್ರಾವದಿಂದ ಮೃತನಾದನೆಂದು ಪೋಲೀಸರು ತಿಳಿಸಿದ್ದಾರೆ.