ವಿಕಾಸ ಟ್ರಸ್ಟ್ ನಡೆಸುವ “ಕಾಸರಗೋಡು ಕನ್ನಡ ವಿಕಾಸ ಮಾಹಿತಿ ಅಭಿಯಾನ” 2ನೇ ಹಂತದ ಉದ್ಘಾಟನಾ ಸಮಾರಂಭವು ನಾಳೆ (ಸೆ.28) ಶನಿವಾರ ಅಪರಾಹ್ನ 4.00 ಗಂಟೆಗೆ ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಪ್ರೌಢ ಶಾಲೆಯ ಸಭಾಂಗಣದಲ್ಲಿ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು, ಕಾಸರಗೋಡು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿಲ್ಪಾ ದ್ಯಾವಯ್ಯ ಐಪಿಎಸ್, ಬೇಳ ಚರ್ಚ್ ಧರ್ಮಗುರುಗಳಾದ ಸ್ಟೇನಿ ಪಿರೇರಾ, ಪದ್ಮಶ್ರೀ ಪುರಸ್ಕೃತ ಸತ್ಯನಾರಾಯಣ ಬೆಳೇರಿ ಭಾಗವಹಿಸಲಿದ್ದು ನೀರ್ಚಾಲು ಶಾಲಾ ವ್ಯವಸ್ಥಾಪಕ ಜಯದೇವ ಖಂಡಿಗೆ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಕಾಸರಗೋಡು ಜಿಲ್ಲೆಯ ವಿವಿಧ ಕ್ಷೇತ್ರಗಳ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದು ವಿಕಾಸ ಟ್ರಸ್ಟ್ ಅಧ್ಯಕ್ಷ ರವಿನಾರಾಯಣ ಗುಣಾಜೆ ಅವರು ತಿಳಿಸಿದ್ದಾರೆ.
ಕಾಸರಗೋಡಿನ ಕಲಾ, ಸಾಂಸ್ಕೃತಿಕ, ಸಾಹಿತ್ಯಕ ಐತಿಹಾಸಿಕ ಮೌಲ್ಯಗಳ ಸಂಕೇತಗಳನ್ನು ದಾಖಲಿಸುತ್ತಿರುವ ವಿಕಾಸ ಟ್ರಸ್ಟ್ ಬೆಂಗಳೂರಲ್ಲಿರುವ ಕಾಸರಗೋಡು ಕನ್ನಡಿಗರನ್ನು ಸಂಘಟಿಸುತ್ತಿದೆ. ಅಲ್ಲದೇ ಕನ್ನಡನಾಡಿಂದ ಕಾಸರಗೋಡಿಗೆ ಬರುವವರಿಗೆಂದೇ ಕಾಸರಗೋಡಿನ ಪರಿಚಯಾತ್ಮಕ ಚಿತ್ರಣ ಒದಗಿಸುವ ಪ್ರಕ್ರಿಯೆಯಲ್ಲೂ ನಿರತವಾಗಿದೆ. ಇದರ ಚಟುವಟಿಕೆಗಳ ಎರಡನೇ ಹಂತದ ಅಭಿಯಾನಕ್ಕೆ ನೀರ್ಚಾಲಿನಲ್ಲಿ ನಾಳೆ ಚಾಲನೆಯಾಗಲಿದೆ.