ಕಣಿಪುರ ಸುದ್ದಿಜಾಲ(ಸೆ.25)
ಕೇರಳದ ಮಲಯಾಳಂ ಚಿತ್ರರಂಗದಲ್ಲಿ ನಟಿಯರ ಮೇಲೆ ನಡೆಯಿತೆನ್ನಲಾದ ಲೈಂಗಿಕ ದೌರ್ಜನ್ಯದ ದೂರಿನಂತೆ ಇಂದು ಮತ್ತೋರ್ವ ನಟನ ಬಂಧನವಾಗಿದೆ. ನಟ ಇಡವೇಳ ಬಾಬು ಅವರನ್ನು ವಿಚಾರಣೆಗೆ ಕರೆಸಿದ ಪ್ರತ್ಯೇಕ ತನಿಖಾ ದಳ ವಿಚಾರಣೆಯೊಂದಿಗೆ ಬಂಧಿಸಿದೆ. ಆದರೆ ಈ ಮೊದಲೇ ಕೇಸಲ್ಲಿ ಜಾಮೀನು ಪಡೆದಿರುವ ಕಾರಣ ಬಂಧಿತರ ಆರೋಗ್ಯ ಮತ್ತು ಲೈಂಗಿಕ ಸಾಮರ್ಥ್ಯದ ವೈದ್ಯಕೀಯ ಪರೀಕ್ಷೆ ನಡೆಸಿ ಬಿಡುಗಡೆಯಾಗಲಿದೆ.
ನಟಿಯ ಮೇಲೆ ಲೈಂಗಿಕ ದೌರ್ಜನ್ಯ ಆರೋಪದಂತೆ ಕೇರಳದ ಆಡಳಿತ ಪಕ್ಷ ಶಾಸಕರೂ ಆದ ನಟ ಮುಖೇಶ್ ನನ್ನು ನಿನ್ನೆ ಬಂಧಿಸಿ, ಬಿಡುಗಡೆ ಮಾಡಲಾಗಿದೆ. ಇನ್ನೋರ್ವ ಪ್ರಮುಖ ನಟ ಸಿದ್ದೀಖ್ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಹೈಕೋರ್ಟು ತಿರಸ್ಕರಿಸಿದ ಹಿನ್ನೆಲೆಯಲ್ಲಿ ತನಿಖಾಧಿಕಾರಿಗಳು ಹುಡುಕಾಡುತ್ತಿದ್ದರೂ ನಟ ತಲೆಮರೆಸಿಕೊಂಡಿದ್ದಾರೆಂದು ವರದಿಯಾಗಿದೆ. ನಟನ ಪತ್ತೆಗಾಗಿ ಕಾರ್ಯಾಚರಣೆ ನಡೆಯುತ್ತಿದ್ದರೂ ಯಾವುದೇ ಸುಳಿವು ಸಿಕ್ಕಿಲ್ಲ. ಬಂಧನಕ್ಕಾಗಿ ಏರ್ಪೋರ್ಟ್ ಗಳಲ್ಲಿ ಕೂಡಾ ಕಾರ್ಯಾಚರಣೆ ನಡೆಯುತ್ತಿದೆ.
ಹೇಮಾ ಕಮೀಷನ್ ವರದಿಯಂತೆ ರಾಜ್ಯ ಸರಕಾರದ ಮೌನವನ್ನು ಹೈಕೋರ್ಟು ಪ್ರಶ್ನಿಸಿತ್ತು. ಈ ಹಿನ್ನೆಲೆಯಲ್ಲಿ ಪ್ರತ್ಯೇಕ ತನಿಖಾದಳ ಈಗ ತನಿಖೆ ಚುರುಕುಗೊಳಿಸಿದೆ. ಬಂಧಿತ ನಟರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪಗಳಿರುವುದರಿಂದ ನಟರ ಲೈಂಗಿಕ ಸಾಮರ್ಥ್ಯದ ಪರಿಶೋಧನೆಗಾಗಿ ಆರೋಗ್ಯ ತಪಾಸಣೆ ನಡೆಯುತ್ತಿದೆ.
ಕಲಾವಿದರ ಸಂಘಟನೆಯಾದ “ಅಮ್ಮ” ಸದಸ್ಯತ್ವ ನೀಡುವ ನೆಪದಲ್ಲಿ ನಟಿಯೊಬ್ಬರನ್ನು ಮತ್ತು ಜೂನಿಯರ್ ಕಲಾವಿದೆಯೊಬ್ಬರನ್ನು ನಟ ಇಡವೇಳ ಬಾಬು ಲೈಂಗಿಕ ಸಂಜ್ಞೆಗಳಿಂದ ಮಾತಾಡಿ , ಉಪಟಳ ನೀಡಿ ದೌರ್ಜನ್ಯ ಎಸಗಿದ್ದಾರೆಂದು ನಟಿಯರಿಬ್ಬರೂ ದೂರಿದ ಹಿನ್ನೆಲೆಯಲ್ಲಿ ಆಲುವಾ ಪೋಲೀಸರು ಕೇಸು ದಾಖಲಿಸಿದ್ದರು. ಈ ಕೇಸಿನಲ್ಲಿ ನಟನಿಗೆ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಷರತ್ತುಬದ್ಧ ಜಾಮೀನು ನೀಡಿದೆ.