ಚೆರುಕುನ್ನ್ ಶ್ರೀ ಅನ್ನಪೂರ್ಣೇಶ್ವರಿ ದೇಗುಲ
Kanipura specia
ಯಕ್ಷಗಾನಾಚಾರ್ಯ ಪಾರ್ತಿಸುಬ್ಬನ ಸಭಾಲಕ್ಷಣದ ಸ್ತುತಿ ಪದ್ಯಗಳಲ್ಲಿ “ಶರಣು ತಿರುವಗ್ರ ಶಾಲಿವಾಸಿನಿ” ಎಂದೇ ಆರಂಭವಾಗುವ ದೇವಿಸ್ತುತಿ ಕೆಲವು ದಶಕಗಳಿಂದ ತೆಂಕುತಿಟ್ಟು ಯಕ್ಷಗಾನದಲ್ಲಿ ವಾಸಿನಿಯ ಬದಲು ವಾಹಿನಿಯಾಗಿ ಹರಿದಿದೆ!
ಈ ದೇವಿ ಸ್ತುತಿ ತೆಂಕಣ ಯಕ್ಷಸೀಮೆಯ ವ್ಯಾಪ್ತಿ, ವಿಸ್ತಾರ, ಆಳ,ಅಗಲದ ದೃಷ್ಟಿಯಲ್ಲಿ ಮಹತ್ವದ್ದು…
ತೆಂಕಣ ಯಕ್ಷಗಾನದ ಪೂರ್ವರಂಗದ ದೇವಿಸ್ತುತಿಯಾದ ಶರಣು ತಿರುವಗ್ರ ಶಾಲ(ಲಿ)ವಾಸಿನಿ ಪದ್ಯವು ಕೇರಳದ ಪಯ್ಯನ್ನೂರು ಬಳಿಯ ಚೆರುಕುನ್ನ್ ಅಗ್ರಶಾಲಾ ದೇವಿಯ ಸ್ತುತಿ ಎಂಬುದನ್ನು ಈಗಾಗಲೇ ಅನೇಕ ಯಕ್ಷಗಾನ ವಿದ್ವಾಂಸರು ತಮ್ಮ ಕೃತಿಗಳಲ್ಲಿ ಉಲ್ಲೇಖಿಸಿದ್ದಾರೆ. ಆದರೆ ಈ ಪದ್ಯಕ್ಕೆ ಬೇರೆಯೇ ಅರ್ಥ ವ್ಯಾಖ್ಯಾನ ನೀಡುತ್ತಾ, ಪದವನ್ನು ವಾಹಿನಿ ಎಂದೇ ಹಾಡುವ ಪ್ರಕ್ರಿಯೆ ಮುಂದುವರಿಯುತ್ತಿದೆ. ಇದು ಶಬ್ದಾರ್ಥವನ್ನಷ್ಟೇ ಅಲ್ಲ ತೆಂಕಣ ಯಕ್ಷಗಾನದ ವಿಸ್ತಾರದ ಚರಿತ್ರೆಗೂ ಲೋಪವನ್ನುಂಟುಮಾಡುತ್ತಿಲ್ಲವೇ..?
ಕುಂಬ್ಳೆ ಕಣಿಪುರದ ಪಾರ್ತಿಸುಬ್ಬನು ಕಡುಬಡವನಾಗಿದ್ದು, ಬಾಲ್ಯದಲ್ಲಿ ಪಯ್ಯನ್ನೂರಿನ ಚೆರುಕುನ್ನ್ ದೇವಾಲಯದಲ್ಲಿ ವಾಸಿಸಿದ್ದನೆಂಬ ಉಲ್ಲೇಖಗಳಿವೆ. ಅದು ಭಕ್ತರಿಗೆ, ಅಶರಣರಿಗೆ ಯಾವುದೇ ಕೊರತೆ ಇಲ್ಲದೇ ಅನ್ನ ಉಣಿಸುತ್ತಿದ್ದ ಶ್ರೀ ಅನ್ನಪೂರ್ಣೇಶ್ವರಿ ಕ್ಷೇತ್ರ. ಈ ಹಿನ್ನೆಲೆಯಲ್ಲಿ ಪಾರ್ತಿಸುಬ್ಬ ಬರೆದ ಈ ಕಂದಪದ್ಯ ಚೆರುಕುನ್ನ್ ದೇವಾಲಯದ ಕುರಿತೇ ಆಗಿದೆಯೆಂದು ವಿದ್ವಾಂಸರಾದ ಕುಕ್ಕಿಲ ಕೃಷ್ಣ ಭಟ್, ಪುಂಡೂರು ಗೋಪಾಲಕೃಷ್ಣ ಪುಣಿಂಚಿತ್ತಾಯ, ಪ್ರೊ. ಅಮೃತ ಸೋಮೇಶ್ವರ, ಡಾ. ಕೆ.ಕಮಲಾಕ್ಷ ಮೊದಲಾದವರು ವಿಸ್ತೃತವಾಗಿ ತಮ್ಮ ಕೃತಿಗಳಲ್ಲಿ ಉಲ್ಲೇಖಿಸಿದ್ದಾರೆ. ಆದರೂ ಹಾಡುವುದೇಕೆ ಬದಲಾಗಲಿಲ್ಲ..?
ಹಿಂದೆ ಕಥಕ್ಕಳಿ ಮೇಳವನ್ನು ನಡೆಸುತ್ತಿದ್ದ ಚಿರಯ್ಕಲ್ ಅರಮನೆಯ ಸಮೀಪವೇ ಚೆರುಕುನ್ನ್ ದೇವಾಲಯವಿದೆ. ಈ ದೇವಾಲಯ ಮತ್ತು ಪರಿಸರದಲ್ಲಿ ಬಾಲ್ಯ ಕಳೆದುದರಿಂದ ಸಹಜವಾಗಿ ಪರಿಸರದ ಪ್ರಭಾವ ಪಾರ್ತಿಸುಬ್ಬನಲ್ಲಾಗಿದೆ. ಆದ್ದರಿಂದಲೇ ಯಕ್ಷಗಾನದ ನಾಂದೀಪುರುಷ ಪಾರ್ತಿಸುಬ್ಬ ಹೀಗೆ ಬರೆದನೆಂದು ದಿ. ಗೋಪಾಲಕೃಷ್ಣ ಪುಣಿಂಚಿತ್ತಾಯರು ತಮ್ಮ ಪುಂಡೂರು ಕೃತಿಯಲ್ಲಿ ಹಿಂದೆಯೇ (ಪು. 58, 59,60 ಗಮನಿಸಿ) ಉಲ್ಲೇಖಿಸಿದ್ದಾರೆ.
ಹಿರಿಯ ಬಲಿಪರೆಂದು ಖ್ಯಾತರಾದ ಅಜ್ಜ, ದೊಡ್ಡ ಬಲಿಪರು ಕೂಡ್ಳು ಮೇಳದಲ್ಲಿದ್ದಾಗ ಈ ಪದ್ಯವನ್ನು “ಶರಣು ತಿರುವಗ್ರ ಶಾಲ ವಾಸಿನಿ” ಎಂದೇ ಹಾಡುತ್ತಿದ್ದರೆಂದು ಪ್ರತೀತಿ ಇದ್ದುವು. ಪಾರ್ತಿಸುಬ್ಬನಿಗೆ ಎಳವೆಯಿಂದಲೇ ಕೇರಳ ಸಂಸರ್ಗ ಬೆಳೆದಿತ್ತು. ಈ ಕಾರಣದಿಂದಲೇ ಕಥಕಳಿ ಮತ್ತದರ ಸಾಹಿತ್ಯ ಪ್ರಭಾವ ಆತನ ಯಕ್ಷಗಾನದ ಮೇಲಾಗಿದೆ ಎಂಬುದಕ್ಕೆ ಅನೇಕ ಉದಾಹರಣೆಗಳಿವೆ.
ಚೆರುಕುನ್ನ್ ದೇವಾಲಯವು ಕಣ್ಣೂರು ಜಿಲ್ಲೆಯಲ್ಲಿದೆ. ಸುಮಾರು 1500ಕ್ಕೂ ಅಧಿಕ ವರ್ಷಗಳ ಹಿನ್ನೆಲೆಯಿರುವ ಪ್ರಾಚೀನ ಭಾರತದ ನಾಲ್ಕು ಪ್ರಧಾನ ಅನ್ನಪೂರ್ಣೇಶ್ವರಿ ದೇವಾಲಯಗಳಲ್ಲಿ ಇದೂ ಒಂದಾಗಿದೆಯೆಂದು ಉಲ್ಲೇಖಿಸಲಾಗಿದೆ. ಕೇರಳ ಮಹಾತ್ಮ್ಯಂ ಎಂಬ ಪ್ರಾಚೀನ ಕೇರಳ ಐತಿಹ್ಯ ಗ್ರಂಥದಲ್ಲೂ ದೇಗುಲದ ಉಲ್ಲೇಖವಿದೆ.