ಕಣಿಪುರ ಸುದ್ದಿಜಾಲ
ಮಂಗಳೂರು- ಕಾಸರಗೋಡು ನಡುವಣ ಉಪ್ಪಳ ಕೇಂದ್ರೀಕರಿಸಿ ಕಾರ್ಯಾಚರಿಸುತ್ತಿದ್ದ ಭೂಗತ ವ್ಯವಹಾರದ ನಾಯಕನೆಂದೇ ಗುರುತಿಸಿದ್ದ ಕಾಲಿಯಾ ರಫೀಖ್ (45)ನನ್ನು ಕೊಲೆಗೈದ ಕೇಸಿನ ನಾಲ್ವರು ಆರೋಪಿಗಳನ್ನು ಮಂಗಳೂರು ನ್ಯಾಯಾಲಯ ಖುಲಾಸೆಗೊಳಿಸಿದೆ. ಉಪ್ಪಳ ನಿವಾಸಿ ಕಾಲಿಯಾ ರಫೀಖ್ 2 ಕೊಲೆ ಪ್ರಕರಣ ಸಹಿತ 30ಕ್ಕೂ ಅಧಿಕ ಕ್ರಿಮಿನಲ್ ಕೇಸುಗಳಲ್ಲಿ ಅಂತರ್ ರಾಜ್ಯ ಪೋಲೀಸರಿಗೆ ಬೇಕಾಗಿದ್ದ ಕುಖ್ಯಾತ ಭೂಗತ ಪಾತಕಿಯಾಗಿದ್ದನು.
2014ರಲ್ಲಿ ನಡೆದ ಉಪ್ಪಳ ಮಣಿಮುಂಡ ನಿವಾಸಿ, ಮತ್ತೋರ್ವ ಭೂಗತ ಕಾರ್ಯಕರ್ತ ಮುತ್ತಲೀಬ್ ಎಂಬಾತನ ಕೊಲೆಯ ಪೂರ್ವಧ್ವೇಷದಿಂದ ವ್ಯವಸ್ಥಿತ ಸಂಚು ಹೂಡಿ ಕಾಲಿಯಾ ರಫೀಖ್ ನನ್ನು ಅಪಘಾತದ ನೆಪವೊಡ್ಡಿ, ವಾಹನ ತಡೆದಿರಿಸಿ, ಮಾರಕಾಯುಧಗಳಿಂದ ಕೊಚ್ಚಿ,ಕಡಿದು ಮತ್ತು ಗುಂಡಿಟ್ಟು ಬರ್ಬರವಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೊಲೆಗೆಯ್ಯಲಾಗಿತ್ತು.
ಈ ಪ್ರಕರಣದ ಒಂದನೇ ಆರೋಪಿ ಉಪ್ಪಳದ ನೂರ್ ಆಲಿ, ಎರಡನೇ ಆರೋಪಿ ಯೂಸುಫ್, 5ನೇ ಆರೋಪಿ ರಾಜಪುರಂ ನಿವಾಸಿ ರಾಷೀದ್, 6ನೇ ಆರೋಪಿ ಕಾಸರಗೋಡಿನ ನಜೀಬ್ ಎಂಬೀ ನಾಲ್ವರನ್ನು ಮಂಗಳೂರಿನ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ನಿರ್ದೋಷಿಗಳೆಂದು ಕೇಸುಮುಕ್ತಗೊಳಿಸಿ ಬಿಡುಗಡೆಮಾಡಿದೆ.
2017ರಂದು ರಾತ್ರಿ ತಲಪಾಡಿ ಸಮೀಪದ ಕೋಟೆಕಾರು-ಬೀರಿ ರಾ.ಹೆದ್ದಾರಿಯಲ್ಲಿ ರಾತ್ರಿ ವೇಳೆ ಘಟನೆ ನಡೆದಿತ್ತು. ಕಾರೊಂದರಲ್ಲಿ ಖಾಲಿಯಾ ರಫೀಖ್ ಬರುತ್ತಿರುವ ಖಚಿತ ಸುಳಿವಿನ ಹಿನ್ನೆಲೆಯಲ್ಲಿ ರಾಂಗ್ ಸೈಡಿಂದ ಬಂದ ಟಿಪ್ಪರ್ ಲಾರಿಯೊಂದು ಕಾರಿಗೆ ಡಿಕ್ಕಿಯಾಯಿತು. ಈ ವಿಚಾರದಲ್ಲಿ ತಗಾದೆ ಎಬ್ಬಿಸಿ ಮಾತಿನ ಜಗಳ ನಡೆಯುವಾಗ ಮತ್ತೊಂದು ಕಾರಲ್ಲಿ ಬಂದವರು ನೇರವಾಗಿ ಕಾಲಿಯಾ ರಫೀಖ್ ನನ್ನು ಕೊಚ್ಚಿ ಕೆಡವಿ, ಗುಂಡೇಟಿಟ್ಟು ಕೊಲೆ ಖಾತರಿಪಡಿಸಿ ಮರಳಿದ್ದರು. ಈ ಆಕ್ರಮಣದಲ್ಲಿ ರಫೀಖ್ ಜತೆಗಿದ್ದ ಉಪ್ಪಳ ಮಣಿಮುಂಡ ನಿವಾಸಿ ಮುತ್ತಲೀಬ್ ಎಂಬಾತನೂ ಗಾಯಗೊಂಡಿದ್ದನು.
ಈ ಹಿಂದೆ ಉಪ್ಪಳ ಕೇಂದ್ರೀಕರಿಸಿ ಭೂಗತ ವ್ಯವಹಾರದ ಪಾತಕಿಗಳ ಜಗಳ ಪದೇ ಪದೇ ನಡೆಯುತಿತ್ತು. ರಫೀಖ್ ಕೊಲೆಯಾದ ಬಳಿಕ ಅದು ತಣ್ಣಗಾಯಿತು. ಪ್ರಸ್ತುತ ಕೇಸಿನಲ್ಲಿ ಖುಲಾಸೆಗೊಂಡ ಆಪಾದಿತರ ಪರವಾಗಿ ನ್ಯಾಯವಾದಿಗಳಾದ ಅಝೀಜ್ ಬಾಯಾರು, ವಿಕ್ರಂ ಹೆಗ್ಡೆ, ರಾಜೇಶ ಎಂಬಿವರು ಸೆಷನ್ಸ್ ನ್ಯಾಯಾಲಯದಲ್ಲಿ ವಾದಿಸಿದ್ದರು.