ಕಣಿಪುರ ಸುದ್ದಿಜಾಲ (ಸೆ.24)
ನಾನು ಸುರತ್ಕಲ್ ಮೇಳದಲ್ಲಿದ್ದಾಗ 75-80ರ ದಶಕದಲ್ಲಿ ಕುಡ್ತಡ್ಕ ಬಾಬು ಅವರೊಂದಿಗೆ ಒಡನಾಡಿಯಾಗಿ ತಿರುಗಾಟ ನಡೆಸಿದ್ದೆ. ಆ ದಿನಗಳಲ್ಲೇ ನನಗೆ ಯಕ್ಷಗಾನದ ಪದ್ಯ ಬರೆಯುವ ಆಸಕ್ತಿ ಚಿಗುರೊಡೆದಿತ್ತು. ಪ್ರಾರಂಭದಲ್ಲಿ ನಾನು ಬರೆದ ತಪ್ಪುಗಳನ್ನೆಲ್ಲಾ ತಿದ್ದಿ, ಪದ್ಯರಚನೆಯ ನನ್ನ ದಾರಿ ಸುಗಮಗೊಳಿಸಿ ಕೊಟ್ಟವರೇ ದಿ. ಕುಡ್ತಡ್ಕ ಬಾಬು ಅವರು. ಈಗ ಅವರ ಹೆಸರಿನ ಸ್ಮೃತಿ ಪ್ರಶಸ್ತಿ ನನಗೆ ಒಲಿದಿರುವುದು ಖುಷಿಯೇನೋ ಹೌದು. ಅದರ ಜತೆಯಲ್ಲೇ ಸುರತ್ಕಲ್ ಮೇಳದಲ್ಲಿ ಬಾಬಣ್ಣನ ಜೊತೆ ತಿರುಗಾಟ ಮಾಡಿದ ಗತಕಾಲದ ಬಾಂಧವ್ಯಗಳ ಮೆಲುಕುಗಳೂ ಮೂಡಿಬರುತ್ತದೆ. ಹನಿ ಮಳೆಯೊಂದಿಗೆ ತೀರ್ಥಹಳ್ಳಿಯ ಹಳ್ಳಿಯಲ್ಲಿ ಕುಳಿತಿರುವ ನನಗಿದು ಮುದನೀಡುತ್ತಿವೆ ಎಂದು ಸಂಭ್ರಮಪಟ್ಟರು ಹಿರಿಯ ಕಲಾವಿದವ ಎಂ.ಕೆ. ರಮೇಶಾಚಾರ್ಯರು.
2024ನೇ ಸಾಲಿನ ಕುಡ್ತಡ್ಕ ಬಾಬು ಪ್ರಶಸ್ತಿಗೆ ಆಯ್ಕೆಯಾದ ಹಿನ್ನೆಲೆಯಲ್ಲಿ “ಕಣಿಪುರ ಡಿಜಿಟಲ್ ಮೀಡಿಯ” ಜತೆ ಸಂತಸ ಹಂಚಿದ ಅವರು ಕುಡ್ತಡ್ಕ ಬಾಬು ಜತೆಗಿನ ಕಳೆದಕಾಲವನ್ನು ಸ್ಮರಿಸಿ ವಾಚಾಲರಾದರು.
ಕನ್ನಡ, ತುಳು ಭಾಷೆಯಲ್ಲಿ ಅನೇಕ ರುಚಿಶುದ್ಧ ಪ್ರಸಂಗಗಳನ್ನು ರಚಿಸಿದ ಎಂ.ಕೆ. ರಮೇಶಾಚಾರ್ಯರು ಸುರತ್ಕಲ್ ಮೇಳ ಮೆರೆದ ಗತಕಾಲದ ರಸ, ಭಾವಪ್ರಚೋದಕ ಸ್ತ್ರೀ ಪಾತ್ರಧಾರಿ. ತೆಂಕು, ಬಡಗು ತಿಟ್ಟಿನ ಸವ್ಯಸಾಚಿ. ಪೌರಾಣಿಕ ಗರತಿ ಪಾತ್ರಗಳ ಮಾರ್ಗದರ್ಶಕ ಕಲಾವಿದ. ಅವರಿಗೆ ಸ್ವಸ್ತಿಕ್ ಕಲಾಕೇಂದ್ರ ಜಲ್ಲಿಗುಡ್ಡೆ ಮತ್ತು ದಿ. ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನ ಮಂಗಳೂರು ಜಂಟಿಯಾಗಿ ನೀಡುವ ಕುಡ್ತಡ್ಕ ಬಾಬು ಪ್ರಶಸ್ತಿ-2024 ಘೋಷಿಸಲಾಗಿದೆ. ಪ್ರಶಸ್ತಿಯು 10ಸಾವಿರ ರೂ ನಗದು ಮತ್ತು ಪ್ರಮಾಣಪತ್ರ, ಸನ್ಮಾನಗಳನ್ನು ಒಳಗೊಂಡಿದೆ. ಸೆ.29ರಂದು ಸಂಜೆ 4ರಿಂದ ಮಂಗಳೂರು ಪುರಭವನದಲ್ಲಿ ಗಣ್ಯರ ಸಮಕ್ಷಮ ಪ್ರಶಸ್ತಿಪ್ರದಾನ ನಡೆಯಲಿದೆ.
ಕುಡ್ತಡ್ಕ ಬಾಬು ಅವರನ್ನು ನೆನಪಿಸಿಕೊಂಡು ಮಾತಾಡಿದ ಎಂ.ಕೆ. ರಮೇಶಾಚಾರ್ಯರು “ಆ ಕಾಲದಲ್ಲವರು ಸ್ವತಃ ಪದ್ಯ ಬರೆದು ಅನೇಕ ಕ್ಯಾಸೆಟ್ ಪ್ರಸಂಗಗಳನ್ನು ನಿರ್ಮಿಸಿದ್ದರು. ಇದರಲ್ಲಿ ಬಹುತೇಕ ಪ್ರಸಂಗಗಳೂ ರಂಗದಲ್ಲಿ ಪ್ರದರ್ಶನ ಕಾಣದ ವಿನೂತನ ಪೌರಾಣಿಕ ಪ್ರಸಂಗಗಳೇ ಆಗಿದ್ದುವು. ಆರಂಭ ಕಾಲದಲ್ಲಿ ನಾನೂ ಕೆಲವು ಕಥೆಗಳನ್ನು ಅವರಿಗೆ ನೀಡಿದ್ದೆ. ಅವರದನ್ನು ಪ್ರಸಂಗವಾಗಿಸಿದ್ದರು. ಶೇಣಿ,ಸಾಮಗರಿಂದ ಮೊದಲ್ಗೊಂಡು ಸುರತ್ಕಲ್ ಮೇಳದಲ್ಲಿದ್ದ ಎಲ್ಲಾ ಪ್ರಮುಖ ಕಲಾವಿದರೂ ಬಾಬಣ್ಣನ ಕೇಸೆಟ್ ತಾಳಮದ್ದಳೆಗೆ ಅರ್ಥ ಹೇಳಿದವರೇ ಹೌದು. ಈ ಕೇಸೆಟ್ಟ್ ಗಳ ಸಂಗ್ರಹ ಎಲ್ಲಾದರೂ ಇದ್ದರೆ ಅದೊಂದು ಅನನ್ಯ ನಿಧಿಯೇ ಹೌದು. ಅದರಲ್ಲಿ ಅರ್ಥ ವೈವಿಧ್ಯತೆ, ಪದ್ಯ ರಚನಾ ವೈವಿಧ್ಯತೆಗಳ ಅನೇಕ ಮಾದರಿಗಳಿದ್ದುವು” ಎಂದರು.
ಕುಡ್ತಡ್ಕ ಬಾಬು ಅವರ ಇನ್ನೊಂದು ವೈಶಿಷ್ಟ್ಯ ಎಂದರೆ ಮೇಳದಲ್ಲಿ ಅವರು ಮಾಡುವ ಎಲ್ಲಾ ಪಾತ್ರಗಳ ಸಮಗ್ರ ಪದ್ಯಗಳು ಅವರಿಗೆ ಕಂಠಸ್ಥ. ಆದ್ದರಿಂದಲೇ ಅವರ ಅರ್ಥದ ಸೊಗಸೇ ಭಿನ್ನ. ಪದ್ಯ ತೆಗೆದುಕೊಟ್ಟು ಮತ್ತಿನ ಪದ್ಯ ಎತ್ತುಗಡೆ ಮಾಡಿಸಿ ಕೊಡುತ್ತಿದ್ದ ಅವರು ರಂಗದಲ್ಲೆಂದೂ ದಾರಿ ತಪ್ಪದ ಕಲಾವಿದ. ಕಿರಿಯರಿಗೆ ದಾರಿದೀಪ ಬೆಳಗಿಸಿದ ಕಲಾವಿದ ಎಂದು ಸ್ಮರಿಸಿಕೊಂಡರು ಎಂ.ಕೆ.ರಮೇಶಾಚಾರ್.