ಕಣಿಪುರ ಸುದ್ದಿಜಾಲ
ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮಲಯಾಳದ ಹಿರಿಯ ನಟ ಸಿದ್ದೀಖ್ ಗೆ ನಿರೀಕ್ಷಣಾ ಜಾಮೀನು ನೀಡದಿರಲು ಹೈಕೋರ್ಟು ನಿರ್ಧರಿಸಿದೆ. ತನ್ನ ವಿರುದ್ದ ಮಹಿಳೆಯೊಬ್ಬರು ಮಾಡಿದ ಆರೋಪ ನಿರಾಧಾರವೆಂದು ನಿರೀಕ್ಷಣಾ ಜಾಮೀನು ಕೋರಿ ಅವರು ಹೈ ಕೋರ್ಟಿನ ಮೊರೆ ಹೋಗಿದ್ದರು. ಜಾಮೀನು ಅರ್ಜಿಯನ್ನು ಪರಿಗಣಿಸಿದ ನ್ಯಾಯಾಧೀಶ ಡಿ.ಎಸ್. ಡೇಯ್ಸ್ ಅವರು ತಿರಸ್ಕರಿಸಿದರು.
ಇದರೊಂದಿಗೆ ನಟನ ಬಂಧನ ನಿರೀಕ್ಷಿತವಾಗಿದೆ. ನಟನ ವಿರುದ್ಧ ಬಲವಾದ ಸಾಕ್ಷಿ ಹೇಳಿಕೆ, ಪುರಾವೆಗಳಿದ್ದರೂ ಹೈಕೋರ್ಟಿನಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಕೆಯಾಗಿದ್ದರಿಂದ ಚಾರ್ಜ್ ಶೀಟ್ ಸಲ್ಲಿಸಲಾಗಿರಲಿಲ್ಲ.
2016 ಜ.28ರಂದು ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆಯೆಂದು ಯುವತಿಯೋರ್ವಳು ಸಿದ್ದೀಖ್ ವಿರುದ್ಧ ದೂರು ನೀಡಿದ್ದಳು. ಈ ಕುರಿತು ತಿರುವನಂತಪುರ ಮ್ಯೂಸಿಯಂ ಪೋಲೀಸರು ಒಂದೂವರೆ ತಿಂಗಳು ನಡೆಸಿದ ತನಿಖೆಯಲ್ಲಿ ದೂರಿಗೆ ಪೂರಕ ಪುರಾವೆಗಳು ಲಭ್ಯವಾಗಿತ್ತು. ಸಿನಿಮಾ ಒಂದರಲ್ಲಿ ಅವಕಾಶ ಕೊಡುವ ನೆಪದಲ್ಲಿ ತಿರುವನಂತಪುರದ ಮಸ್ಕತ್ ಹೋಟೆಲ್ ಕೊಠಡಿಯಲ್ಲಿ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಮಾಡೆಲಿಂಗ್ ವಲಯದ ಯುವತಿ ದೂರಿದ್ದಳು.