ಕಾಸರಗೋಡು: ಸೆ. 24
ತಿರುಪತಿ ತಿಮ್ಮಪ್ಪನ ಲಡ್ಡಿನಲ್ಲಿ ಪ್ರಾಣಿ ಕೊಬ್ಬು ಅಳವಡಿಸಿದ್ದಾರೆಂಬ ಹಿನ್ನೆಲೆಯಲ್ಲಿ ದೇಶಾದ್ಯಂತ ಗುಲ್ಲೆದ್ದ ಕಾರಣ ಎಲ್ಲಾರಾಜ್ಯಗಳಲ್ಲೂ ತುಪ್ಪದ ಮಾದರಿ ಸಂಗ್ರಹಿಸಿ ಗುಣಮಟ್ಟ ತಪಾಸಿಸುವ ಪ್ರಕ್ರಿಯೆ ಆರಂಭವಾಗಿದೆ.
ಇದರಂತೆ ಕಾಸರಗೋಡು ವಾಣಿಜ್ಯ ಮಾರುಕಟ್ಟೆಯಿಂದ ಸಂಗ್ರಹಿಸಿದ ತುಪ್ಪಗಳ ಪೈಕಿ 3 ಬ್ರಾಂಡ್ ಗಳನ್ನು ಕೇರಳ ಆಹಾರ ಸುರಕ್ಷಾ ಆಯೋಗ ನಿಷೇಧಿಸಿದೆ.
ಚೋಯ್ಸ್, ಮೇನ್ಮ, ಎಸ್ ಆರ್ ಎಸ್ ಬ್ರಾಂಡಿನ ತುಪ್ಪ ಮತ್ತು ಅನುಬಂಧ ಉತ್ಪನ್ನಗಳನ್ನು ಮಾದರಿ ಪರೀಕ್ಷೆಗೆ ಒಳಪಡಿಸಿ, ಗುಣಮಟ್ಟದ ಕೊರತೆ ಮತ್ತು ಮೋಸ ಬಯಲಾದ ಕಾರಣ ಮಾರಾಟ ನಿಷೇಧಿಸಿ ಆದೇಶಿಸಲಾಗಿದೆ.
ಕರ್ನಾಟಕದಲ್ಲಿ ನಂದಿನಿ ಉತ್ಪನ್ನದ ಹೊರತು ಇತರೆಲ್ಲಾ ತುಪ್ಪಗಳ ಮಾದರಿ ವಶಪಡಿಸಿ ಪರೀಕ್ಷೆಗೆ ಒಳಪಡಿಸುವ ಪ್ರಕ್ರಿಯೆ ನಡೆಯುತ್ತಿದೆ.
ಇದೇ ವೇಳೆ ತಿರುಪತಿಯ ಲಡ್ಡುವಿನಲ್ಲಿ ಪ್ರಾಣಿಜನ್ಯ ಕೊಬ್ಬಿನಂಶ ಪತ್ತೆಯಾದ ಹಿನ್ನೆಲೆಯಲ್ಲಿ ಸೋಮವಾರ ಕ್ಷೇತ್ರದಲ್ಲಿ ಶುದ್ಧಿಕಲಶಗಳು ನಡೆದರೂ ಈ ಕುರಿತಾದ ದೂರು ಸುಪ್ರೀಂ ಕೋರ್ಟಿನ ಬಾಗಿಲು ತಟ್ಟಿದೆ. ವಿ.ಹಿಂ.ಪ ಸಹಿತ ಮೂರು ದೂರುಗಳು ಸಲ್ಲಿಕೆಯಾಗಿದ್ದು ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಲು ಆಗ್ರಹಿಸಲಾಗಿದೆ. ಪ್ರಕರಣದ ಹಿನ್ನೆಲೆಯಲ್ಲಿ ದೇವಳಗಳನ್ನು ಸರಕಾರಿ ಸ್ವಾಯತ್ತ ಆಡಳಿತದಿಂದ ಮುಕ್ತಗೊಳಿಸಬೇಕೆಂಬ ಬೇಡಿಕೆ ಒಂದೆಡೆ ಬಲಗೊಂಡರೆ ಇನ್ನೊಂದೆಡೆ ಎಲ್ಲ ದೇವಾಲಯಗಳಲ್ಲಿ ಪ್ರಸಾದ ರೂಪದಲ್ಲಿ ನೀಡುವ ಭಕ್ಷ್ಯ ವಸ್ತುಗಳನ್ನು ತಪಾಸಿಸಬೇಕೆಂದೂ ಆಗ್ರಹ ಉಂಟಾಗಿದೆ.