ಮುಗ್ಧ ಆಮೆಗಳನ್ನೂ ಹಿಡಿದು ತಿಂದು ಮುಕ್ಕುವಿರಾ ಜೋಕೆ...!! ಇಲ್ಲಿ ಆಮೆಗಳಿಗೂ ಕೇಳೋ ಕಾವಲುಭಟರಿದ್ದಾರೆ ಎಚ್ಚರ!!!

by Narayan Chambaltimar

Kanipura special

ಆಮೆಗಳು ಪರಂಪರಾಗತವಾಗಿ ಸಂತಾನೋತ್ಪತ್ತಿ ಮಾಡುವ ಕಾಂಡ್ಲಾವನದೊಳಗೂ ಕಾಲಿಟ್ಟು ಪ್ರಪಂಚದ ಆದಿ ಜೀವವನ್ನೂ ತಿಂದು ತೇಗುವವರಿದ್ದಾರೆ..! ಅಂಥವರ ಉಪಟಳದ ಕಪಿಮುಷ್ಠಿಯಿಂದ ಮುಗ್ಧ ಆಮೆಗಳನ್ನು ಕಾಪಾಡಲು ಹೊರಟಿದ್ದಾರೆ ಗಡಿನಾಡಿನ ಪುಟ್ಟ ಮಕ್ಕಳು! ಇಂಥ ಅಪರೂಪದ ಜೀವಕಾರುಣ್ಯದ ಘಟನೆ ಕಾಸರಗೋಡು ಜಿಲ್ಲೆಯ ನೀಲೇಶ್ವರ ತಾಲೂಕಿನ ತ್ರಿಕರಿಪುರದ ಇಡಯಿಲಕ್ಕಾಡ್ ದ್ವೀಪದಿಂದ ವರದಿಯಾಗಿದೆ..
ಈ ಕುರಿತಾದ ಮಾನುಷಿಕ ವರದಿ ಚಿತ್ರಣ ಇಲ್ಲಿದೆ…

ಕಾಸರಗೋಡು ಜಿಲ್ಲೆಯ ತ್ರಿಕರಿಪುರದ ಇಡಯಿಲಕ್ಕಾಡ್ ದ್ವೀಪ ಪರಿಸರವೊಂದು ಜೈವಿಕ ಜೀವವೈವಿಧ್ಯಗಳ ಸಂರಕ್ಷಿತ ತಾಣ. ಇಲ್ಲಿ ದ್ವೀಪದೊಳಗೆ ವಾನರಗಳ ಸಹಿತ ಅಪೂರ್ವ ಮೃಗ,ಪಕ್ಷಿ,ಜಂತುಗಳಿವೆ. ಹಾಗೆಯೇ ದ್ವೀಪದ ಸುತ್ತಲಿನ ಕಾಂಡ್ಳಾವನದ ನಡುವೆ ಜಲಾವಲಂಬಿ ಜೀವಜಾಲಗಳೂ ಇವೆ. ಈ ಪೈಕಿ ಕಾಂಡ್ಳಾವನದ ನಡುವೆ ಹಿಂಡು, ಹಿಂಡು ಆಮೆಗಳು ನೆಲೆಸಿ ಸಂತಾನೋತ್ಪತ್ತಿ ಮಾಡುವುದು ಸಾಂಪ್ರದಾಯಿಕ ರೂಢಿ. ಆದರೆ ಈ ಮಾಹಿತಿಯನ್ನರಿತು ಇತ್ತೀಚಿಗೆ ವಾಹನಗಳಲ್ಲಿ ಬಂದವರು ಕಾಂಡ್ಲಾ ಕಾಡಿಗೆ ನುಗ್ಗಿ ಗೋಣಿಲೆಕ್ಕದಲ್ಲಿ ಇಲ್ಲಿಂದ ಗರ್ಭಿಣಿ, ಬಾಣಂತಿ ಆಮೆಗಳನ್ನು ಹಿಡಿದು ಕೊಂಡೊಯ್ಯವ ದಂಧೆ ವಿಪರೀತವಾಗಿದೆ.
ಕೊಂಡೊಯ್ದು ಬೇಯಿಸಿ ತಿನ್ನುವವರ ಉಪಟಳ ಮುಗ್ಧ ಜೀವಜಾಲಕ್ಕೆ ಕಂಟಕವಾಗಿದೆ!

ಊರೇ ಮಲಗಿರುವ ಹೊತ್ತು , ಕಡಲತೀರದ ದ್ವೀಪದ ಕಾಡೊಳಗೆ ನಟ್ಟನಡುರಾತ್ರಿ ಬೆಳಕು ಕಾಣುವುದು, ಆಗಂತುಕ ವಾಹನಗಳು ರಾತ್ರಿ ದ್ವೀಪದ ಬಳಿಗೆ ಬರುವುದು, ಮದ್ಯದ ಅಮಲಿನ ಕೇಕೆ, ಉನ್ಮಾದಗಳನ್ನೆಲ್ಲಾ ಗಮನಿಸಿದ ಊರವರು ಈ ಕುರಿತಾದ ದೂರನ್ನು ಸ್ಥಾನೀಯ ನವೋದಯ ಗ್ರಂಥಶಾಲ (ವಾಚನಾಲಯ) ಕಾರ್ಯಕರ್ತರಿಗೆ ನೀಡಿದರು. ವಿಷಯವನ್ನರಿತ ಅವರು ಮಕ್ಕಳ ಮೂಲಕ ಇದಕ್ಕೆ ಪ್ರತಿರೋಧ, ಜನಜಾಗೃತಿ, ಕಾನೂನುಕ್ರಮಕ್ಕೆ ಮುಂದಾದರು. ಪ್ರತಿಭಟನೆ ಎಂದರೆ ಘರ್ಷಣೆಯಲ್ಲ, ಜನಜಾಗೃತಿಯ ಕಾಳಜಿ ಎಂದೇ ನಿರ್ಧರಿಸಿದ ಅವರು ಆಮೆಗೆ ಮಕ್ಕಳನ್ನೇ ಕಾವಲಾಳಾಗಿಸಿದ್ದಾರೆ!

ಈ ನಿಟ್ಟಿನಲ್ಲಿ ಗ್ರಂಥಶಾಲೆಯ ಆಧೀನದ ಬಾಲವೇದಿ (ಮಕ್ಕಳವೇದಿಕೆ) ಯ ಮಕ್ಕಳು ಆಮೆಗಳನ್ನಾದರೂ ಕಾಪಾಡಿ ಎಂಬ ಕರೆಯ ಪ್ಲೇಕಾರ್ಡ್ ಹಿಡಿದು ದ್ವೀಪದ ಕಾಂಡ್ಳಾಕಾಡಿನ ಸನಿಹ ಎಚ್ಚರಿಕೆಯ ಪ್ರತಿಭಟನೆ ನಡೆಸಿದರು. ಈಗಾಗಲೇ ಅಲ್ಲಿಗೆ ಬಂದು ಹೋಗುವ, ಗೋಣಿ,ಗೋಣಿ ಆಮೆಗಳನ್ನು ಕೊಂಡೊಯ್ಯುವ ಜನರ ವಾಹನ ನಂಬ್ರಗಳನ್ನು ಸ್ಥಳೀಯರು ದೃಶ್ಯ ಸಹಿತ ದಾಖಲಿಸಿದ್ದಾರೆ. ಇವನ್ನು ವನ್ಯ, ಪ್ರಾಣಿ ಸಂರಕ್ಷಣಾ ಇಲಾಖೆಗೆ ಒಪ್ಪಿಸಿ ಕ್ರಮ ಕೈಗೊಳ್ಳುವಂತೆ ಮಾಡುವುದೊಂದೇ ಇನ್ನುಳಿದ ಕೆಲಸ. ಅದರ ಪೂರ್ವಭಾವಿಯಾಗಿ ಮಕ್ಕಳ ಮೂಲಕ ಈ ಪ್ರತಿಭಟನೆ ಏಕೆ ಮಾಡಿಸಿದ್ದಾರೆ ಗೊತ್ತೇ..?

ಆಮೆಗಳು ಜೀವಜಾಲದ ಅತ್ಯಂತ ಪ್ರಾಕೃತ, ಮುಗ್ಧ ಮತ್ತು ಚಿಪ್ಪಿನಲ್ಲಿ ಬಲಿಷ್ಠತೆ ಹೊಂದಿದ ಪ್ರಾಚೀನ ಪ್ರಾಣಿ. ಅದು ಸರೀಸೃಪ ವರ್ಗಕ್ಕೆ ಸೇರಿವೆ. ಆಮೆಗಳಲ್ಲಿ ಉಪ್ಪುನೀರು, ಸಿಹಿನೀರು ಎಂಬ ವ್ಯತ್ಯಾಸಗಳಿದ್ದರೂ ಸುಮಾರು 55ಲಕ್ಷ ವರ್ಷ ಹಿಂದಿನ ಪ್ರಾಚೀನ ಕೂರ್ಮಾವತಾರದ ಪ್ರಾಣಿ ತಾನೇ ಇದು?

ತನ್ನ ಚಿಪ್ಪಿನಲ್ಲೇ ಭೂಜಗದ ಭಾರವನ್ನು ಹೊತ್ತ ಆಮೆಗಳನ್ನು ಭೂಜಗದ ಪರಿಸರಕ್ಕಾಗಿ ಕಾಪಾಡಬೇಕಿದೆ. ಎಲ್ಲ ಜೀವಜಾಲಗಳೂ ಬದುಕುವ ನೈತಿಕ ಹಕ್ಕು ಹೊಂದಿವೆ. ನಿರುಪದ್ರವಿ ಆಮೆಯನ್ನಾದರೂ ಬದುಕಲು ಬಿಡಿ ಎಂಬುದೇ ಮಕ್ಕಳ ಸಂದೇಶ..!
ಮೊನ್ನೆ,ಮೊನ್ನೆ ಓಣಂ ದಿವಸ ಕಾಡಿನ ವಾನರಗಳಿಗೆ ಔತಣವಿತ್ತು ಪರಿಸರ ಪ್ರೀತಿಯೊಂದಿಗೆ, ಸಹಜೀವಿ ಸ್ನೇಹದ ಕತೆ ಹೇಳಿದ ಅದೇ ಇಡಯಿಲಕ್ಕಾಡ್ ದ್ವೀಪದಿಂದ ಅದೇ ಮಕ್ಕಳು ಈಗ ಜಗತ್ತಿಗೆ ಮತ್ತೊಂದು ಪಾಠ ಮಾಡಿದ್ದಾರೆ. ಮಕ್ಕಳನ್ನು ಹೀಗೆ ರೂಪಿಸುವುದಲ್ಲವೇ ಭವಿಷ್ಯದ ನಿರ್ಮಾಣ???
ಹೀಗೆ ಮಕ್ಕಳನ್ನು ರೂಪಿಸಿದವರೇ ಕೇರಳ ಗ್ರಂಥಶಾಲಾ ಕಾರ್ಯಕರ್ತರು.
ಅವರಿಗಿರಲಿ ನಿಮ್ಮ ಪ್ರಶಂಸೆ..

ಚಿತ್ರ ಕೃಪೆ: ಶ್ಯಾಂಬಾಬು ವೆಳ್ಳಿಕೋತ್ತ್

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00