ಕಣಿಪುರ ಸುದ್ದಿಜಾಲ
ಮಂಗಳೂರು ಕಾಸರಗೋಡು ನಡುವೆ ಅತಿವೇಗದಲ್ಲಿ ಬೆಳೆಯುತ್ತಿರುವ ಪಟ್ಟಣವಾದ ಉಪ್ಪಳ ಅಂತರ್ರಾಜ್ಯ ಮಾದಕವಸ್ತು ಪೂರೈಕೆಯ ಹಬ್ ಆಗಿ ಮಾರ್ಪಟ್ಟಿದೆ. ಇಲ್ಲಿಂದ ಬೇಡಿಕೆದಾರರಿಗೆ ಎಂಡಿಎಂಎ ಸಹಿತ ಮಾದಕವಸ್ತುಗಳ ಸಾಗಾಟ,ಪೂರೈಕೆ ನಡೆಯುತ್ತಿದ್ದು ಕಳೆದ ಕೇವಲ (ಆಗಸ್ಟ್) ಒಂದು ತಿಂಗಳಲ್ಲಿ ಕಾಸರಗೋಡು ಜಿಲ್ಲೆಯಲ್ಲಿ 136 ಕೇಸು ದಾಖಲಾಗಿದ್ದು, ಮಾದಕ ವಸ್ತು ಸಹಿತ 140 ಮಂದಿಗಳನ್ನು ಬಂಧಿಸಲಾಗಿದೆ.
ಜಿಲ್ಲೆಯ ಮಂಜೇಶ್ವರ, ಕುಂಬಳೆ, ಬದಿಯಡ್ಕ, ಆದೂರು, ವಿದ್ಯಾನಗರ, ಹೊಸದುರ್ಗ, ಚಂದೇರ ಪೋಲೀಸ್ ಠಾಣಾ ವ್ಯಾಪ್ತಿಯ ಪ್ರಕರಣಗಳು ಇದಾಗಿವೆ. ಈ ಪೈಕಿ ಗಡಿಭಾಗದ ಮಂಜೇಶ್ವರ ಠಾಣೆಯಲ್ಲಿ ಅತ್ಯಧಿಕ ಕೇಸುಗಳು ದಾಖಲಾಗಿವೆ.
ದಕ್ಷಿಣ ಕನ್ನಡ ಜಿಲ್ಲೆಯ ಗಡಿಪ್ರದೇಶ ಸಹಿತ ಕಾಸರಗೋಡಿನ ಹಲವು ಪ್ರದೇಶದ ಬೇಡಿಕೆಯ ಗಿರಾಕಿಗಳಿಗೆ ಉಪ್ಪಳದಿಂದಲೇ ಗಾಂಜಾ, ಎಂಡಿಎಂಎ ಪೂರೈಕೆಯಾಗುತ್ತಿದ್ದು, ಪೂರೈಕೆಗೆಂದೇ ನಿರ್ದಿಷ್ಟ ಏಜೆಂಟರಿದ್ದಾರೆ. ನಿಶ್ಚಿತ ತೂಕದ ಮಾದಕ ವಸ್ತು ಗಿರಾಕಿಗೆ ತಲುಪಿಸಿದರೆ ಏಜೆಂಟರಿಗೆ ಕನಿಷ್ಠ 5ಸಾವಿರ ರೂ ಕಮೀಷನ್ ದೊರೆಯುತ್ತಿತ್ತೆಂದು ತನಿಗಾದಳ ತಿಳಿಸಿದೆ.
ಪ್ರಸ್ತುತ ಈ ದಂಧೆಯ ಮುಖ್ಯಸ್ಥರನ್ನು ಪತ್ತೆ ಮಾಡಿ ಬಂಧಿಸುವ ದೃಷ್ಠಿಯಲ್ಲಿ ತನಿಖೆ ನಡೆಯುತ್ತಿದ್ದು ಹೆಚ್ಚಿನ ಮಾಹಿತಿಗಳನ್ನು ಸೋರಿಕೆಯಾಗದಂತೆ ಗೌಪ್ಯವಾಗಿರಿಸಲಾಗಿದೆ.
ಮೊನ್ನೆ ಶುಕ್ರವಾರ ಉಪ್ಪಳ ಕೊಂಡೆವೂರು ಬಳಿಯ ಪತ್ವಾಡಿಯ ಮನೆಯೊಂದಕ್ಕೆ ಧಾಳಿ ನಡೆಸಿದ ಪೋಲೀಸರು 3ಕೋಟಿಗೂ ಅಧಿಕ ಬೆಲೆಬಾಳುವ ಮಾದಕ ವಸ್ತು ಸಹಿತ ಆಸ್ಕರ್ ಆಲಿ(26) ಎಂಬಾತನನ್ನು ಬಂಧಿಸಿದ್ದರು.
ಈತನ ಮೂಲಕ ಉಪ್ಪಳದಲ್ಲಿ ಮಾದಕ ವಸ್ತು ಮಾರಾಟ ನಡೆಯುತಿತ್ತು. ಆದರೆ ಇದಕ್ಕೆ ಹಣ ಹೂಡಿದ ಮುಖ್ಯಸ್ಥರು ಬೇರೆಯೇ ಇದ್ದು, ಅವರ ಬಂಧನಕ್ಕಾಗಿ ತನಿಖೆ ಮುಂದುವರಿಯುತ್ತಿದೆ.
ಬೆಂಗಳೂರು ಮಹಾನಗರದಿಂದ ಮಾದಕ ವಸ್ತು ತರಿಸಿ ಗಡಿನಾಡಿನ ಉಭಯ ರಾಜ್ಯದಲ್ಲಿ ದಂಧೆ ನಡೆಸುವ ಜಾಲವಿದ್ದು, ಇವರು ಉಪ್ಪಳ ಕೇಂದ್ರೀಕರಿಸಿರುವವರೆಂದು ಅಂದಾಜಿಸಲಾಗಿದೆ. ಆದರೆ ಮಾದಕ ವಸ್ತು ಸಾಗಾಟ ಪ್ರಕರಣದಲ್ಲಿ ಜಿಲ್ಲೆಯಲ್ಲಿ ಕಳೆದ ಒಂದು ತಿಂಗಳಲ್ಲಿ ಬಂಧಿತರಾದ 140ಮಂದಿಯನ್ನು ವಿಚಾರಣೆಗೊಳಪಡಿಸಿದರೂ ಈ ಜಾಲದ ಮುಖ್ಯಸ್ಥರ ಮಾಹಿತಿ ಬೆಳಕಿಗೆ ಬಂದಿಲ್ಲ ಎಂದು ತನಿಖಾಧಿಕಾರಿಗಳು ಹೇಳುತ್ತಾರೆ. ಎಂಡಿಎಂಎ ಸಹಿತ ಗಾಂಜಾ ದಂಧೆಗೆ ಯುವ ಪೀಳಿಗೆ ಬಲಿಯಾಗುತ್ತಿದ್ದು, ವಿದ್ಯಾರ್ಥಿಗಳು ಕೂಡಾ ಇದಕ್ಕೆ ದಾಸರಾಗುತ್ತಿದ್ದಾರೆ. ಇತ್ತೀಚಿಗೆ ಕುಂಬಳೆ ಪೋಲೀಸ್ ಠಾಣಾ ಮಂಭಾಗದಲ್ಲಿ ನಿಲ್ಲಿಸಿದ್ದ ವಾಹನಗಳ ಮರೆಯಲ್ಲಿ ನಿಂತು ಕುಂಬಳೆ ಹಯರ್ ಸೆಕೆಂಡರಿ ಶಾಲಾ ಮಕ್ಕಳಿಬ್ಬರು ಗಾಂಜಾ ಬೀಡಿ ಸೇದುವುದನ್ನು ಪತ್ತೆ ಹಚ್ಚಲಾಗಿತ್ತು.
ಈ ಹಿನ್ನೆಲೆಯಲ್ಲಿ ತನಿಖೆಯಷ್ಟೇ ಮಹತ್ವದಿಂದ ಜನಜಾಗೃತಿಯೂ ನಡೆಯಬೇಕಾಗಿದೆ. ಎಂಡಿಎಂಎ ಪಿಡುಗಿಗೆ ಬಲಿಯಾದರೆ ಅದರಿಂದ ಮುಕ್ತರಾಗುವುದು ಸುಲಭವೇನಿಲ್ಲ. ಸಂಪೂರ್ಣ ಆರೋಗ್ಯವನ್ನೇ ಕಬಳಿಸುವ ಈ ಮಾದಕ ವಸ್ತು ಅತ್ಯಂತ ಅಪಾಯಕಾರಿಯಾಗಿದೆ.