Kanipura special
ಇದು ನಿಜಕ್ಕೂ ಚಿಕ್ಕ ವಿಷಯವಲ್ಲ, ಚಿಕ್ಕಮೇಳ ನಡೆಸಿದವರ ಸಾಲಲ್ಲೇ ಪ್ರಶಂಸನೀಯ, ಸ್ತುತ್ಯರ್ಹ ಅಪೂರ್ವ ಸಾಧನಾಗಾಥೆ!
ರಾತ್ರಿ ವೇಳೆ ಹಳ್ಳಿಯ ಮನೆ,ಮನೆಗೆ ಚಿಕ್ಕಮೇಳ(ಸಿರಿವೇಷ) ತಿರುಗಾಟ ನಡೆಸಿ, ನೂರಾರು ಮನೆಯೊಳಗೆ ಯಕ್ಷನಾದವನ್ನೆಬ್ಬಿಸಿ ಅಲ್ಲಿಂದ ಸಿಕ್ಕಿದ ಧನ,ಧಾನ್ಯ,ಫಲಗಳನ್ನು ತಾವೇ ತಿಂದುಂಡು ತೇಗದೇ , ಪ್ರತೀ ತಿಂಗಳೂ ಅವೆಲ್ಲವನ್ನೂ ಭಾವುಕ ಭಕ್ತಿಯ ನಿಷ್ಠೆಯಿಂದ ಪೆರ್ಮುದೆಯ ಕಂಬಾರು ಶ್ರೀ ದುರ್ಗಾಪರಮೇಶ್ವರಿ ದೇವಿ ಸನ್ನಿಧಿಗೆ ಕೈಮುಗಿದು ಒಪ್ಪಿಸಿ ಕೃತಾರ್ಥರಾಗುವ ಚಿಕ್ಕಮೇಳವೊಂದರ ಬಲುದೊಡ್ಡ ಸಾಧನೆ ನಾಡಿನ ಶ್ರೀಮಂತ ಗಣ್ಯರನ್ನೂ ನಾಚಿಸುವಂಥಾದ್ದು..! ಆದ್ದರಿಂದಲೇ ಈ ಚಿಕ್ಕಮೇಳ ಬಳಗಕ್ಕೆ ನಿಂದೆ, ಟೀಕೆಗಳಿಲ್ಲದ ಪ್ರೀತಿಪೂರ್ವಕ ಸ್ವಾಗತ ಸ್ವತಃ ತೆಂಕಣ ಯಕ್ಷಗಾನ ತವರಿನ ಮನೆ,ಮನಗಳಲ್ಲಿ ಸಿಕ್ಕಿದೆ. ಜನತೆ ಭಲೇ,ಭೇಷ್ ಎಂದೇ ಕೊಂಡಾಡಿ, ಬರಮಾಡುತ್ತಾರೆ.
ಇಂಥ ಸಾರ್ವಜನಿಕ ಶ್ಲಾಘನೆಗೆ ಪಾತ್ರರಾಗಿರುವುದು ತೆಂಕಣ ಯಕ್ಷ ತವರು ಕುಂಬ್ಳೆಯ ಯಕ್ಷಗಾನ ಕಲಾವಿದ ಕೃಷ್ಣ ರೈ ನೀರ್ಚಾಲು ಸಾರಥ್ಯದ ಯಕ್ಷಗಾನ ಚಿಕ್ಕಮೇಳ ಮಂಡಳಿ. ಬೆಂಕಿನಾಥೇಶ್ವರ ಮೇಳದ ಕಲಾವಿದರಾದ ಕೃಷ್ಣ ರೈ ಕಳೆದ ಐದು ವರ್ಷಗಳಿಂದ ಮಳೆಗಾಲದಲ್ಲಿ ಸ್ವತಃ ಚಿಕ್ಕಮೇಳ ನಡೆಸುತ್ತಿದ್ದಾರೆ. ಕುಂಬಳೆ ಸೀಮೆಯಲ್ಲಿ ಪ್ರಸಿದ್ಧ ದೇವಾಲಯಗಳಿದ್ದರೂ, ಅಲ್ಲೆಲ್ಲಿಂದಲೂ ಸಿಗದ ಬೆಂಬಲದ ಹಿನ್ನೆಲೆಯಲ್ಲವರು ಗ್ರಾಮೀಣ ಪ್ರದೇಶದ, ದೈನಿಕ ಭಕ್ತರೇ ಬಾರದ ಕಂಬಾರು ದೇವಸ್ಥಾನದ ಬೆಂಬಲದಿಂದ ಆ ಹೆಸರಲ್ಲೇ ಚಿಕ್ಕಮೇಳ ಮಾಡಿದರು. ಅಲ್ಲಿಂದಾಚೆಗೆ ಅವರ ಬದುಕಿನ ನೆಲೆಯೇ ಬದಲಾಯಿತು..!
ಈ ಕಾರಣದಿಂದಲೇ ಕೃಷ್ಣ ರೈ ನೀರ್ಚಾಲು ಕಂಬಾರು ಕ್ಷೇತ್ರಕ್ಕೆ, ದೇವಿ ದಾಸನಂತೆ ವಿನಮ್ರರು. ಅಲ್ಲಿನ ಹೆಸರಲ್ಲಿ ಚಿಕ್ಕಮೇಳ ನಡೆಸಿ ಗಡಿನಾಡಿನಾದ್ಯಂತ ದೇವಾಲಯದ ಪ್ರಚಾರ ಮಾಡಿದ್ದಷ್ಟೇ ಅಲ್ಲ, ಕಳೆದ ಐದು ವರ್ಷದಲ್ಲಿ ಅಂದಾಜು ಬರೋಬ್ಬರಿ 10ಲಕ್ಷದಷ್ಟು ರೂಗಳ ಕಾಣಿಕೆಯನ್ನು ಅಕ್ಷರಶಃ ದೇವಾಲಯಕ್ಕೊಪ್ಪಿಸಿದ್ದಾರೆ.! ಈ ಮೂಲಕ ಸಂಭ್ರಮ,ಸಾರ್ಥಕ್ಯ, ತೃಪ್ತಿ ಕಂಡಿದ್ದಾರೆ.
ಅವರ ತಂಡದ ಈ ವರ್ಷದ ಚಿಕ್ಕಮೇಳ ತಿರುಗಾಟ ಕಳೆದ 2024ರ ಜುಲೈ ನಲ್ಲಿ ಆರಂಭಗೊಂಡಿದೆ. ಜುಲೈ ತಿಂಗಳೊಂದರಲ್ಲೇ ಅವರು ದೇವಾಲಯಕ್ಕೆ 350 ಕಿಲೋ ಅಕ್ಕಿ, 200 ತೆಂಗಿನ ಕಾಯಿ, 13, 234ರೂ ಕಾಣಿಕೆ ಹಣ ಸಮರ್ಪಿಸಿದ್ದಾರೆ. ಬಳಿಕ ಜುಲೈಯಲ್ಲಿ 4 ಕ್ವಿಂಟಾಲ್ ಅಕ್ಕಿ, 300ಕಾಯಿ, 16,700ರೂ ಕಾಣಿಕೆ ಒಪ್ಪಿಸಿದ್ದಾರೆ. ಆಗಸ್ಟಲ್ಲಿ 4 ಕ್ವಿಂಟಲ್ ಅಕ್ಕಿ, 200ಕಾಯಿ, 17,820ರೂ ಕಾಣಿಕೆ ನೀಡಿದ್ದಾರೆ. ಸೆಪ್ಟೆಂಬರಲ್ಲಿ ಈಗಾಗಲೇ 4ಕ್ವಿಂಟಾಲ್ ಅಕ್ಕಿ, 210 ಕಾಯಿ, 22ಸಾವಿರ ಕಾಣಿಕೆಯನ್ನೂ ದೇಗುಲಕ್ಕೆ ಕೊಟ್ಟಿದ್ದಾರೆ. ಒಟ್ಟು ನಾಲ್ಕು ತಿಂಗಳ ಚಿಕ್ಕಮೇಳ ಪರ್ಯಟನೆಯಲ್ಲಿ 550 ಕೇಜಿ ಅಕ್ಕಿ, 910 ತೆಂಗಿನಕಾಯಿ, 69 ಸಾವಿರಕ್ಕೂ ಮಿಕ್ಕ ಕಾಣಿಕೆ ದೇಗುಲಕ್ಕೆ ಆದಾಯವಾಗಿ ಬಂದಿದೆ. ಪ್ರತಿ ತಿಂಗಳ 20ನೇ ತಾರೀಕಿನಂದಾಜಿಗೆ ಅವರು ತಪ್ಪದೇ ಕ್ಷೇತ್ರಕ್ಕಾಗಮಿಸಿ ಕಾಣಿಕೆ ಒಪ್ಪಿಸುವುದು ರೂಢಿ.
ಇದು ತೆಂಕಣ ಯಕ್ಷಗಾನದ ತವರೂರಲ್ಲಿ ಮನೆ,ಮನೆ ತೆರಳುವ ಪುಟ್ಟ ಚಿಕ್ಕಮೇಳ ತಂಡವೊಂದು ಗ್ರಾಮ್ಯ ದೇವಾಲಯಕ್ಕೆ ಕೊಟ್ಟ ದೊಡ್ಡ ವಿಶೇಷ ಕೊಡುಗೆ. ಕಳೆದ ವರ್ಷ ಇದೇ ರೀತಿಯ ತಿರುಗಾಟದಲ್ಲಿ ದೇಗುಲಕ್ಕವರು 35 ಕ್ವಿಂಟಾಲ್ ಅಕ್ಕಿ, 2100 ತೆಂಗಿನ ಕಾಯಿ, 96 ಸಾವಿರ ರೂ ಭಂಡಾದ ಕಾಣಿಕೆ ಹಣವನ್ನೊಪ್ಪಿಸಿ ದೇವಿಗೆ ಕೈ ಮುಗಿದಿದ್ದರು.
ನಿತ್ಯ ವಿಶೇಷ ಆದಾಯವಿಲ್ಲದ ಗ್ರಾಮ್ಯ ದೇಗುಲವೊಂದರ ದೇವರನ್ನು ಮನೆ,ಮನೆ ಒಯ್ಯುತ್ತಾ, ಅಲ್ಲಿ ಯಕ್ಷನಾದವನ್ನೆಬ್ಬಿಸಿ , ಸಂಗ್ರಹದ ಒಂದುಭಾಗವಾದ ಇಷ್ಟೊಂದು ಪ್ರಮಾಣದ ನಿಧಿಯನ್ನು ದೇಗುಲಕ್ಕೆ ಮರಳಿಸಿದ ಮತ್ತೊಂದು ಚಿಕ್ಕಮೇಳದ ಮಾಹಿತಿಯೇ ಇಲ್ಲ. ಆದ್ದರಿಂದಲೇ ಕಲಾವಿದ ಕೃಷ್ಣ ರೈ ಜನತಾ ಬೆಂಬಲದ ಆಶೀರ್ವಾದ ಪಡೆಯುತ್ತಿದ್ದಾರೆ. ಕರಾವಳಿಯಲ್ಲೀಗ ಅನೇಕ ಚಿಕ್ಕಮೇಳ ತಂಡಗಳಿವೆ. ಈ ಕುರಿತು ಜನತಾ ಆಕ್ಷೇಪಗಳಿದ್ದರೂ ಕುಂಬ್ಳೆ ಸೀಮೆಯಲ್ಲೊಂದು ತಂಡ ಜನತಾ ಆಶೀರ್ವಾದ ಪಡೆಯುತ್ತಿದೆ ಎಂಬುದೇ ವೈಶಿಷ್ಟ್ಯ.
ಮಳೆಗಾಲದ ತಿರುಗಾಟಕ್ಕೆ ಸೀಮಿತವಾದ ಈ ತಂಡದಲ್ಲಿ ಸುರೇಶ ಆಚಾರ್ಯ ನೀರ್ಚಾಲು(ಭಾಗವತರು), ಪ್ರಕಾಶ್ ವಿಟ್ಲ(ಚೆಂಡೆ) ಕೃಷ್ಣ ರೈ(ಮದ್ಲೆ) ಮತ್ತು ವೇಷಧಾರಿಗಳಾಗಿ ಕಟೀಲು ಮೇಳದ ಶಿವಾನಂದ ಬಜಕೂಡ್ಲು, ಮಂದಾರ್ತಿಮೇಳದ ಕಲಾವಿದ ಮತ್ತು ಸಹಾಯಕರಾಗಿ ರಾಜೇಶ್ ಮುಗೇರು ಮತ್ತಿತರಿದ್ದಾರೆ.
ಚಿಕ್ಕಮೇಳ ಎಂದರೇನು?
ಇದು ಸಂಪೂರ್ಣ ಯಕ್ಷಗಾನ ಪ್ರದರ್ಶನವಲ್ಲ. ಆದರೂ ಚಿಕ್ಕಮೇಳ ಮನೆಗೆ ಬಂದರೆ ನಮ್ಮಲ್ಲಿಗೆ ಯಕ್ಷಗಾನ ಬಂದಿದೆ ಎನ್ನುವುದೇ ಜನರ ರೂಢಿ.
ಚಿಕ್ಕಮೇಳ ಎಂದರೆ ಯಕ್ಷಗಾನದ ಸತಿ,ಪತಿ ವೇಷಗಳೆರಡು(ರಾಧಾ ಕೃಷ್ಣ) ಮನೆ,ಮನೆಗೆ ಬಂದು ಎರಡ್ಮೂರು ಪದ್ಯಕ್ಕೆ ಕುಣಿದು, ಅರ್ಥ ಹೇಳಿ ಹೋಗುವ ವಿದ್ಯಮಾನ. ಹಿಂದೆ ಇದನ್ನು ಸಿರಿವೇಷ ಎನ್ನುತ್ತಿದ್ದರು. ಈಗ ಇದೂ ಒಂದು ಮೇಳವಾಗಿದೆ!ಇದರಲ್ಲಿ ಭಾಗವತ, ಚೆಂಡೆ,ಮದ್ಲೆ ಸಹಿತ ಐವರು ಕಲಾವಿದರು ಮತ್ತು ಇನ್ನಿಬ್ಬರು ಸಹಾಯಕರಿರುವುದು ಈಗಿನ ರೂಢಿ. ಇದು ಸ್ವಾತಂತ್ರ್ಯ ಲಭಿಸಿದ ಕಾಲದಲ್ಲಿ ಗಡಿನಾಡು ಕಾಸರಗೋಡಿನ ಬಾಯಾರು ಪರಿಸರದಿಂದ ಆರಂಭಗೊಂಡ ಪರಂಪರೆ. ಆ ಕಾಲಕ್ಕೆ ಸ್ತ್ರೀವೇಷದ ಹೆಸರಾಂತ ಕಲಾವಿದರಾಗಿದ್ದ ಪೈವಳಿಕೆ ಐತ್ತಪ್ಪ ಶೆಟ್ಟರು ಮಳೆಗಾಲದ ಉದ್ಯೋಗ ರಹಿತ ಬಡತನದ ಬವಣೆ ನೀಗಿಸಲೆಂದೇ ಇಂಥ ಅಭಿಯಾನ ಆರಂಭಿಸಿದ್ದರು. ಬಳಿಕ ಇದು ಜನಪ್ರಿಯವಾಗಿ, ಬೇಡಿಕೆ ರಹಿತ ಕಲಾವಿದರಿಗೆ ಮಳೆಗಾಲದ ಆದಾಯದ ದಾರಿಯಾಗಿ ಪರಿವರ್ತನೆಗೊಂಡಿತು.