Kanipura special
✍️ಎಂ. ನಾ. ಚಂಬಲ್ತಿಮಾರ್
ನಿನ್ನೆ ಅಗಲಿದ ಮಲಯಾಳಂ ಬೆಳ್ಳಿತೆರೆಯ ಮಮತಾಮಯಿ ಅಮ್ಮ ಪೊನ್ನಮ್ಮ(80) ಎಳೆಹರೆಯದಿಂದಲೇ ಸಂಗೀತ ಸ್ವರನಿಧಿ ಎಂ.ಎಸ್. ಸುಬ್ಬಲಕ್ಷ್ಮಿಯಂತ ಗಾಯಕಿಯಾಗಬೇಕೆಂದು ಬಯಸಿ ಕನಸು ಕಂಡವರು. ಅವರ ಮೇಲಿನ ಆಕರ್ಷಣೆಯ ಅಭಿಮಾನದಿಂದ ಅವರನ್ನೇ ಅನುಕರಿಸಿದವರು. ಆದರೆ ಸಂಗೀತ ಸಾಧಕಿಯಾಗಲು ಹೊರಟ ಪೊನ್ನಮ್ಮ ಆದದ್ದು ಅನನ್ಯ ಅಭಿನೇತ್ರಿ. ಹಾಡಲೆಂದು ಹೋದವರು ನಟಿಯಾಗಿ ಇತಿಹಾಸ ವಿರಚಿಸಿದ ಬೆಳ್ಳಿತೆರೆಯ ಅಪೂರ್ವ ಕತೆಯಿದು...
ಕವಿಯೂರ್ ಪೊನ್ನಮ್ಮರ ಬದುಕೇ ಇತಿಹಾಸವಾಗಿದೆ. ಆರೂವರೆ ದಶಕದಲ್ಲಿ 800ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ ಅವರು ಕಾಲದ ಜತೆ ಬೇಡಿಕೆಯಿಂದಲೇ ಬದುಕಿದವರು. ಕವಿಯೂರಿನ ಗ್ರಾಮದಲ್ಲಿ ಗಾಯಕ ಟಿ.ಪಿ. ದಾಮೋದರನ್ ರ ಏಕೈಕ ಮಗಳಾಗಿ 1944 ಜನವರಿ 6ರಂದು ಜನಿಸಿದ್ದ ಪೊನ್ನಮ್ಮ ನಿಗೆ 1ವರ್ಷವಾಗುವಾಗಲೇ ಅಪ್ಪ ಸಪ್ತಸ್ವರ ಕಲಿಸಿದ್ದರು.
ಮಗಳನ್ನು ಗಾಯಕಿಯಾಗಿ ಕಾಣಬೇಕೆಂಬುದೇ ಅಪ್ಪನಾಸೆ. ಇದರಂತೆ ಮಗುವನ್ನು ತಜ್ಞ ಸಂಗೀತ ಗುರುಗಳಿಗೊಪ್ಪಿಸಿದ್ದರು. ತಾನು ಎಲ್ಲೆಲ್ಲಾ ಸಂಗೀತ ಕೇಳಲು ಹೋಗುತ್ತೇನೋ ಅಲ್ಲಿಗೆಲ್ಲಾ ಮಗಳನ್ನೂ ಜತೆ ಕರೆದೊಯ್ದರು. ಒಂದು ದಿನ ಕೋಟ್ಟಯಂ ತಿರುನಕ್ಕರ ಮೈದಾನದಲ್ಲಿ ಸಂಗೀತ ಕಛೇರಿ. ವೇದಿಕೆಯಲ್ಲಿ ಪಟ್ಟೆ ಸೀರೆಯನುಟ್ಟು, ಹಣೆಗೆ ದೊಡ್ಡ ಕುಂಕುಮದ ಬೊಟ್ಟಿಟ್ಟು, ಚಿತ್ತಾಕರ್ಷಕ ಮೂಗುತಿಯನಿಟ್ಟು ಸಾಕ್ಷಾತ್ ದೇವಿಯಂತೆಯೇ ಸೌಂದರ್ಯ. ರೂಪಿಣಿಯೊಬ್ಬರು ಹಾಡುತ್ತಿದ್ದರು. ಆ ಗಾನಮಾಧುರ್ಯದ ಸೌಂದರ್ಯದೇವತೆಯನ್ನು ಕಂಡು ಪೊನ್ನಮ್ಮ ಅಕ್ಷರಶಃ ಮೈಮರೆತರು, ಮನಸೋತರು.
ಭವಿಷ್ಯದಲ್ಲಿ ತಾನೂ ಅವರಂತೆ ಹಾಡಿ ಶೋಭಿಸಬೇಕೆಂದು ನಿರ್ಧರಿಸಿಯೇ ಬಿಟ್ಟರು. ಆಗಿನ್ನೂ ಪೊನ್ನಮ್ಮನಿಗೆ 11ರ ಹರೆಯ..
ಮನೆಗೆ ಮರಳಿ ಅಪ್ಪ ಹೇಳಿದ ಬಳಿಕವಷ್ಟೇ ಅದು ಭಾರತದ ಸ್ವರ ಸಾಮ್ರಾಜ್ಞಿ ಸುಬ್ಬುಲಕ್ಷ್ಮಿ ಎಂದು ಬಾಲಕಿಗೆ ಗೊತ್ತಾದದ್ದು. ಮತ್ತೆ ಇವರೂ ಅವರಂತೆ ಹಣೆಗೆ ಕುಂಕುಮದ ದೊಡ್ಡ ಬೊಟ್ಟಿಟ್ಟರು.ಖಾಯಂ ಪಟ್ಟೆ ಸೀರೆಯನ್ನೇ ಉಟ್ಟರು. ಸತತ 12 ವರ್ಷ ಸಂಗೀತವನ್ನೂ ಕಲಿತರು. ಅಕ್ಷರಶಃ ಸುಬ್ಬುಲಕ್ಷ್ಮಿಯ ಅನುಸರಣೆಯ ಅಭಿಮಾನಿಯಾದರು. ಆದರೆ ಬಯಸಿದ್ದೆಲ್ಲಾ ಬಾಳಲ್ಲಿ ಸಿಗದು ತಾನೇ…??
ಒಂದು ದಿನ ಶಾಲೆ ಬಿಟ್ಟು ಮರಳುವಾಗ ಪೊನ್ನಮ್ಮರನ್ನು ಹಿಂಬಾಲಿಸಿ ಕಾರೊಂದು ಬಂತು. ಆ ಕಾರು ಇವರ ಮನೆಗೂ ಬಂತು. ಅದರಿಂದಿಳಿದ ಮೂವರು ಗಣ್ಯರು ಮನೆಯೊಳಗೆ ಬಂದು ಎಲ್ಲರ ಸಮ್ಮುಖ ಹಾಡೊಂದು ಹಾಡಲು ಹೇಳಿದರು. ಅದು ಮಲಯಾಳದ ಪ್ರಖ್ಯಾತ ಸಂಗೀತ ನಿರ್ದೇಶಕ ದೇವರಾಜನ್ ಮಾಸ್ತರ್, ನಟ ಶಂಕರಾಡಿ, ತೋಪ್ಪಿಲ್ ಭಾಸಿ ಎಂಬವರೆಂದು ಮತ್ತಷ್ಟೇ ಅವರಿಗೆ ತಿಳಿಯಿತು. ಅದು ಸಿನಿಮಾ ರಂಗದ ಆರಂಭಕಾಲ. ನಾಟಕಗಳು ಮೆರೆಯುತ್ತಿದ್ದ ದಿನಗಳು.
ಆಗ ಕೇರಳದ ಅತ್ಯಂತ ಪ್ರಸಿದ್ಧ ರಂಗಭೂಮಿ ತಂಡವಾಗಿದ್ದ ಕೆಪಿಎಸ್ಸಿ ಗೆ ಮಧುರ ಕಂಠದ ಗಾಯಕಿಯ ಅಗತ್ಯವಿತ್ತು. ಮಗಳು ಗಾಯಕಿಯಾಗಿ ಶ್ರೇಷ್ಠ ತಂಡಕ್ಕೆ ಆಯ್ಕೆಯಾದಳೆಂದು ಅಪ್ಪನ ಸಂಭ್ರಮಕ್ಕೆ ಎಣೆಯಿಲ್ಲ. ಅದು ಖ್ಯಾತ ನಾಟಕಕಾರ ತೋಪ್ಪಿಲ್ ಭಾಸಿಯವರ “ಮೂಲಧನ” ನಾಟಕ. ನಾಟಕ ಪ್ರದರ್ಶನಾರಂಭಕ್ಕೆ ಕೊನೆಯ 15ದಿನಗಳಿದ್ದರೂ ನಾಯಕಿ ನಟಿಯ ಆಯ್ಕೆ ಆಗಿರಲಿಲ್ಲ. ಕೊನೆಗೆ ಹಾಡಲೆಂದು ಬಂದ ಪೊನ್ನಮ್ಮ ನಾಯಕಿಯಾದರು. ಈ ಶ್ರೀಮುಖ ಮಲಯಾಳದ ಅಭಿನಯಕ್ಕಿರುವುದೆಂದು ಭಾಸಿಯವರೇ ಅನುಗ್ರಹಿಸಿದರು. ಹೀಗೆ 1959ರಲ್ಲಿ ನಟನೆಗೆ ಕಾಲೂರಿ, ಮುಖಕ್ಕೆ ಬಣ್ಣ ಮೆತ್ತಿದ ಅವರು ಒಂದೇ ವರ್ಷದಲ್ಲಿ ಜನಪ್ರಿಯ ನಟಿಯಾದರು. ಒಂದು ವರ್ಷದಲ್ಲಿ 400ರಷ್ಟು ವೇದಿಕೆ ಪಡೆಯುವ ಬೇಡಿಕೆಯ ಕಲಾವಿದೆಯಾದರು.
ಈ ಜನಪ್ರಿಯತೆಯಿಂದಲೇ 1962ರಲ್ಲಿ ಅವರನ್ನು ಬೆಳ್ಳಿತೆರೆ ಕೈ ಬೀಸಿ ಕರೆಯಿತು. “ಶ್ರೀರಾಮ ಪಟ್ಟಾಭಿಷೇಕಂ” ಸಿನಿಮದಲ್ಲಿ ರಾವಣನ ಪತ್ನಿ ಮಂಡೋದರಿಯಾಗಿ ನಟಿಸಿದರು. ಆಗಿನ್ನೂ ಅವರಿಗೆ 18ರ ಹರೆಯ. ಆದರೆ ಮೊದಲ ಸಿನಿಮಾದ ಪಾತ್ರ ಗಮನಿಸಲ್ಪಡಲೇ ಇಲ್ಲ. ಅವರು ಮರಳಿ ರಂಗಭೂಮಿಯಲ್ಲೇ ಸಕ್ರಿಯರಾದರು. ಈ ನಡುವೆ 1964ರಲ್ಲಿ “ಕುಟುಂಬಿನಿ” ಸಿನಿಮಾದಲ್ಲಿ ಹಾಡುವ ಅವಕಾಶ ಒದಗಿ ಬಂತು.
ಆಗ ಮದ್ರಾಸಿನಲ್ಲಿ ರೆಕಾರ್ಡಿಂಗ್. ರೆಕಾರ್ಡಿಂಗ್ ಗೆ ಹೋದವರ ಮಾಹಿತಿ ತಿಳಿದ ನಿರ್ದೇಶಕರು ಹಾಡಿದರಷ್ಟೇ ಸಾಲದು, ಈ ಚಿತ್ರದಲ್ಲಿ ನಟಿಸಬೇಕೆಂದೂ ಒತ್ತಾಯಿಸಿದರು. ಅದು ಎರಡು ಮಕ್ಕಳ ಅಮ್ಮನ ಪಾತ್ರ. ಇವರಿಗೆ 19ರ ಹರೆಯ. ಹೀಗೆ ಶುರುವಾದ ಅಮ್ಮನ ಪಾತ್ರದ ಪಯಣಕ್ಕೆ ಆರೂವರೆ ದಶಕದ ವರ್ಣರಂಜಿತ ಕಥನಗಳ ಇತಿಹಾಸವಿದೆ.
ಆರಂಭ ಕಾಲದಲ್ಲಿ ಜನಪ್ರಿಯ ನಟ ಪ್ರೇಂನಸೀರ್ ಜತೆ ಪೊನ್ನಮ್ಮ ಕಾಂಬಿನೇಷನ್ ಖ್ಯಾತಿ ಪಡೆದರೆ ಬಳಿಕ ಮೋಹನ್ ಲಾಲ್, ಪೊನ್ನಮ್ಮ ಕಾಂಬಿನೇಷನ್ ಪ್ರಖ್ಯಾತಿ ಪಡೆಯಿತು. ಇವರದ್ದು ನಟನೆಯಲ್ಲ, ನಿಜ ಬದುಕಿನ ಅಮ್ಮ,ಮಗನೆಂಬಷ್ಟು ಸಹಜ ವಾತ್ಸಲ್ಯದ ಬದುಕು ಬೆಳ್ಳಿತೆರೆಯನ್ನಷ್ಟೇ ಅಲ್ಲ, ಮಲಯಾಳಿ ಮನಸ್ಸನ್ನೇ ಪ್ರಭಾವಿಸಿದೆ. ಸುಮಾರು 50ಕ್ಕೂ ಅಧಿಕ ಸಿನಿಮಗಳಲ್ಲಿ ಮೋಹನ್ ಲಾಲ್ ಗೆ ಪೊನ್ನಮ್ಮ ಅಮ್ಮನಾಗಿದ್ದಾರೆ.
ಜನಿಸಿದ್ದೇ ನಟಿಸಲೆಂಬಂತೆ 800 ಸಿನಿಮಗಳಲ್ಲಿ ನಟಿಸಿದ ಪೊನ್ನಮ್ಮ ತನ್ನ ಜನಪ್ರಿಯತೆಯ ಆರಂಭಕಾಲದಲ್ಲೇ , 20ರ ಹರೆಯದಲ್ಲಿ ಮದುವೆಯಾಗಿದ್ದರು. ನಿರ್ಮಾಪಕ ಎ.ಕೆ.ಮಣಿಸ್ವಾಮಿಯನ್ನು ವರಿಸಿದ್ದರೂ ದಾಂಪತ್ಯವೇನೂ ಸುಮಧುರವಲ್ಲ. ಬಳಿಕ ಅವರವರು ಅವರ ಪಾಡಿಗೆ ಪ್ರತ್ಯೇಕ ವಾಸಿಸಿದ್ದರು. ಆದರೆ ವಿಚ್ಛೇದಿತರಲ್ಲ. ಕೊನೆಗಾಲದಲ್ಲಿ ಮಣಿಸ್ವಾಮಿ ಅನಾರೋಗ್ಯಕೆ ತುತ್ತಾಗಿದ್ದರು. ಆಗ ಜನ ಕಳಿಸಿ ತನ್ನ ಮನೆಗೆ ಮಣಿಸ್ವಾಮಿಯನ್ನು ಬರಮಾಡಿಸಿಕೊಂಡು ಕೊನೆಗಾಲದ ಉಪಚಾರವನ್ನೂ ಮಾಡಿದ್ದರು.
ಇದು ನಟನೆಯಲ್ಲ, ಬದುಕು.
ಬೆಳ್ಳಿತೆರೆಯಂತೆ ಬದುಕಿನಲ್ಲೂ ಅವರು ಅಮ್ಮನ ವಾತ್ಸಲ್ಯ ಹಂಚಿದ್ದರು. ಅನೇಕರಿಗೆ ಮಮತೆಯಿತ್ತು ನೆರವಾಗಿದ್ದರು.