ಕಣಿಪುರ ಸುದ್ದಿಜಾಲ
ಫೇಸ್ಬುಕ್ ನಲ್ಲಿ ಶಾಸಕರ ವಿರುದ್ಧವೇ ಬರೆದ ಡೆಪ್ಯೂಟಿ ತಹಶೀಲ್ದಾರ್ ಇದೀಗ ತನ್ನ ಸರಕಾರಿ ಉದ್ಯೋಗದಿಂದಲೇ ಅಮಾನತುಗೊಂಡಿದ್ದಾರೆ.
ಕಾಸರಗೋಡು ಜಿಲ್ಲೆಯ ಹೊಸದುರ್ಗ ಶಾಸಕ, ಮಾಜಿಸಚಿವ , ಸಿಪಿಐ ನಾಯಕ ಇ.ಚಂದ್ರಶೇಖರನ್ ಅವರ ವಿರುದ್ಧ ಮಾನಹಾನಿಕಾರಕವಾಗಿ ಫೇಸ್ಬುಕ್ ನಲ್ಲಿ ಬರೆದ ದೂರಿನಂತೆ ಕಾಞಂಗಾಡ್ ನಿವಾಸಿ, ಡೆಪ್ಯೂಟಿ ತಹಶೀಲ್ದಾರ್ ಎ.ಪವಿತ್ರನ್ ಅವರನ್ನು ಅಮಾನತು ಮಾಡಲಾಗಿದೆ.
ಸೆ.12ರಂದು ಅವರು ಶಾಸಕರ ವಿರುದ್ಧ ಫೇಸ್ಬುಕ್ ಪೋಸ್ಟ್ ಹಾಕಿದ್ದರು. ಈ ಕುರಿತು ಶಾಸಕರು ಜಿಲ್ಲಾಧಿಕಾರಿಗಳವರಿಗೆ ದೂರು ನೀಡಿದ್ದರು. ತಕ್ಷಣವೇ ಜಿಲ್ಲಾಧಿಕಾರಿ ಇಂಬುಶೇಖರನ್ ಅವರು ಡೆಪ್ಯೂಟಿ ತಹಶೀಲ್ದಾರ್ ಅವರನ್ನು ವಿಚೋರಣೆಗೊಳಪಡಿಸಿ, ಉದ್ಯೋಗದಿಂದಲೇ ಅಮಾನತುಗೈದರು. ಕಂದಾಯ ಇಲಾಖೆಯ ಉನ್ನತ ಹುದ್ದೆಯಲ್ಲಿದ್ದು ಇಲಾಖೆಗೆ ಕಳಂಕವನ್ನುಂಟು ಮಾಡಿದ ಅಪರಾಧದಂತೆ ಅಮಾನತು ಮಾಡಲಾಯಿತೆಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಫೇಸ್ಬುಕ್ ಬರಹ ವಿವಾದವಾಗುತ್ತಿದ್ದಂತೆಯೇ ಡೆಪ್ಯೂಟಿ ತಹಶೀಲ್ದಾರ್ ಅದನ್ನು ಅಳಿಸಿದ್ದರು. ಬಳಿಕ ಕ್ಷಮೆ ಕೋರಿದ್ದರು.
ಫೇಸ್ಬುಕ್ನಲ್ಲಿ ಸರಕಾರಿ ನೌಕರರು ಸರಕಾರವನ್ನಾಗಲೀ, ಇಲಾಖೆಗಳನ್ನಾಗಲೀ ಟೀಕಿಸಿ, ಮಾನಹಾನಿಕಾರಕವಾಗಿ ಬರೆಯುವಂತಿಲ್ಲ ಎಂಬುದನ್ನುಲ್ಲಂಘಿಸಿ ಪವಿತ್ರನ್ ಪೋಸ್ಟ್ ಹಾಕಿದ್ದರು.