ಕಣಿಪುರ ಸುದ್ದಿಜಾಲ
ಮಲಯಾಳಂ ಚಿತ್ರರಂಗದಲ್ಲಿ ಮಮತಾಮಯಿಯಾದ ಒಲವಿನ ವಾತ್ಸಲ್ಯವೇ ಮೈವೆತ್ತ ಅಮ್ಮನ ಪಾತ್ರಗಳಿಂದಲೇ ಜನಪ್ರಿಯರಾದ ಹಿರಿಯ ನಟಿ ಕವಿಯೂರ್ ಪೊನ್ನಮ್ಮ(79 ) ಇಂದು ನಿಧನರಾದರು ಇದರೊಂದಿಗೆ ಆರೂವರೆ ದಶಕದಲ್ಲಿ 700ರಷ್ಟು ಸಿನಿಮಾಗಳಲ್ಲಿ ವೈವಿಧ್ಯ ಪಾತ್ರ ನಿಭಾಯಿಸಿ,ಅಮ್ಮ ಪಾತ್ರಗಳಿಂದ ಎಲ್ಲರ ಅಮ್ಮನಾಗಿ ಮಲಯಾಳದ ಮನಗೆದ್ದ ಬದುಕೊಂದು ಇತಿಶ್ರೀಯಾಗಿದೆ.
ಕಳೆದ ಕೆಲದಿನಗಳಿಂದ ಕೊಚ್ಚಿಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಅವರು ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆಯಲ್ಲಿದ್ದರು. ಆರೋಗ್ಯ ತೀವ್ರ ಹದಗೆಟ್ಟು ಇಂದು ಸಂಜೆ ನಿಧನರಾದರು. ಅವರ ಅಗಲುವಿಕೆ ವರದಿಯಾಗುತ್ತಿದ್ದಂತೆಯೇ ಇಡೀ ಚಿತ್ರರಂಗವಷ್ಟೇ ಅಲ್ಲ,ಕೇರಳೀಯ ಮನಸುಗಳೆಲ್ಲ ಕಂಬನಿ ಮಿಡಿದಿವೆ.
ಕೊಚ್ಚಿನ್ ವಡಕ್ಕೇ ಪರವೂರಿನ ವಸತಿಯಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದ ಅವರನ್ನು ಆರೋಗ್ಯ ಸಮಸ್ಯೆಗಳಿಂದಾಗಿ ಕೆಲದಿನಗಳ ಹಿಂದೆಯಷ್ಟೇ ಆಸ್ಪತ್ರೆಗೆ ಸೇರಿಸಲಾಗಿತ್ತು. ವಯೋ ಸಹಜ ಕಾಯಿಲೆಯಿಂದ ಚಿಕಿತ್ಸೆಗೆ ಸ್ಪಂದಿಸದೇ ಮರಣ ಸಂಭವಿಸಿದೆಯೆಂದು ವೈದ್ಯರು ತಿಳಿಸಿದ್ದಾರೆ.
1945ರಲ್ಲಿ ಜನಿಸಿದ ಪೊನ್ನಮ್ಮ ಅವರಿಗೆ 79ವರ್ಷ ವಯಸ್ಸಾಗಿದ್ದು, ಭಾರತೀಯ ಬೆಳ್ಳಿತೆರೆಯ ಹಿರಿಯ ನಟಿಯಲ್ಲೊಬ್ಬರಾಗಿದ್ದಾರೆ.
ಮಲಯಾಳಂ ಸಿನಿಮಗಳ ಉತ್ಕರ್ಷದೊಂದಿಗೆ ಬೆಳೆದ ಅವರು ಅನೇಕ ಅತ್ಯುತ್ತಮ ಚಿತ್ರಗಳಲ್ಲಿ ನಟಿಸಿದ್ದರು. ಹಿರಿಯರಿಂದ ಕಿರಿಯರ ತನಕ ಎಲ್ಲಾ ಕಾಲಘಟ್ಟದ ನಿರ್ದೇಶಕರ ಪಾತ್ರನಿರ್ದೇಶನಗಳಲ್ಲಿ ಕಲಾವಿದೆಯಾಗಿ ಶೋಭಿಸಿದ ಅವರು ಅಮ್ಮ ಪಾತ್ರಗಳಿಂದ ಬೆಳ್ಳಿತೆರೆಯನ್ನಷ್ಟೇ ಅಲ್ಲ ಇಡೀ ಸಮಾಜವನ್ನು ಗಾಢವಾಗಿ ಪ್ರಭಾವಿಸಿದವರು.
ರಂಗಭೂಮಿ ನಟಿಯಾಗಿ ಕಲಾಜೀವನ ಆರಂಭಿಸಿದ್ದ ಪೊನ್ನಮ್ಮ 15ರ ಹರೆಯದಲ್ಲೇ ಸಿನಿಮಾ ರಂಗಕ್ಕೆ ಕಾಲೂರಿದ್ದರು. ಸುದೀರ್ಘ 65ವರ್ಷಕ್ಕೂ ಅಧಿಕ ಎಲ್ಲಾ ತಲೆಮಾರಿನ ನಟ,ನಟಿಯರೊಂದಿಗೆ ನಟಿಸಿದ ಅವರು ಸುಮಾರು 700ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ ದಾಖಲೆ ಹೊಂದಿದ್ದಾರೆ. ನಾಯಕ ನಟನ ಅಮ್ಮ ಪಾತ್ರಗಳನ್ನು ಲೀಲಾಜಾಲ ನಿರ್ವಹಿಸಿದ ಅವರು ಸೂಪರ್ ಸ್ಟಾರ್ ಮೋಹನ್ ಲಾಲ್ ರ ಹಿಟ್ ಸಿನಿಮಾಗಳಲ್ಲಿ ಖಾಯಂ ಅಮ್ಮ ಪಾತ್ರಗಳಿಂದ ಪ್ರೇಕ್ಷಕ ಮನಸೂರೆಗೊಂಡಿದ್ದರು. ಈ ಜೋಡಿ ಅನುರೂಪದ ಸಹಜ ತಾಯಿ,ಮಗನೆಂಬಷ್ಟು ಜನಪ್ರಿಯವಾಗಿತ್ತು. ನನಗವರು ಜನ್ಮ ನೀಡಿದ ಅಮ್ಮನಲ್ಲದಿದ್ದರೂ, ಅಮ್ಮನಷ್ಟೇ ಒಲವಿತ್ತ ಮಮತೆಯ ಮಾತೆ ಎಂದು ನಟ ಮೋಹನ್ ಲಾಲ್ ಪ್ರತಿಕ್ರಿಯಿಸಿದ್ದಾರೆ. ಸ್ವತಃ ಪೊನ್ನಮ್ಮ ಕೂಡಾ ಆತನಲ್ಲಿ ನಾನು ನನಗೆ ಹುಟ್ಟದೇ ಹೋದ ಮಗನನ್ನು ಕಾಣುತ್ತಿದ್ದೆ ಎಂದು ಸಂದರ್ಶನದಲ್ಲಿ ಹೇಳಿದ್ದರು.
70ರ ದಶಕದ ನಿರ್ಮಾಪಕ ಮಣಿ ಸ್ವಾಮಿ ಅವರನ್ನು ವಿವಾಹವಾಗಿದ್ದ ಪೊನ್ನಮ್ಮ ಇಬ್ಬರು ಮಕ್ಕಳನ್ನು ಹೊಂದಿದ್ದು, ಅವರಿಬ್ಬರೂ ಅಮೇರಿಕಾದಲ್ಲಿ ನೆಲೆಸಿದ್ದಾರೆ.
ದಾಂಪತ್ಯ ಸಮಸ್ಯೆಯಿಂದ ದಶಕಗಳಿಂದ ಏಕಾಂಗಿ ವಾಸಿಸುತ್ತಿದ್ದರು.
ನಾಲ್ಕು ಬಾರಿ ಶ್ರೇಷ್ಠ ಸಹನಟಿ ರಾಜ್ಯ ಪ್ರಶಸ್ತಿ ಪಡೆದ ಅವರು 2021ರಲ್ಲಿ ತೆರೆಕಂಡ “ಆಣುಂ ಪೆಣ್ಣುಂ” ಸಿನಿಮದಲ್ಲಿ ಕೊನೆಯ ಬಾರಿ ನಟಿಸಿದ್ದರು.
ಮಲಯಾಳಂ ಸಿನಿಮಾದ ಭರತಕಾಲದಲ್ಲಿ ಬೆಳೆದು, ಹೇಮಾ ಕಮೀಷನ್ ವರದಿಯ ಇಳಿತ ಕಾಲದಲ್ಲಿ ಅಸುನೀಗಿದ ಪೊನ್ನಮ್ಮನ ಕಲಾಯಾನ ಪೊನ್ನಿನಷ್ಟೇ ಹೊಳಪಿನ ಇತಿಹಾಸ.