ಗಡಿನಾಡು ಕಾಸರಗೋಡಿನ ಪುಟಾಣಿ ಪಕ್ಷಿ ನಿರೀಕ್ಷಕಿ ನಿಹಾರಿಕಾಳಿಗೀಗ ಬೇರೆಂಥದ್ದಕ್ಕೂ ಪುರುಸೊತ್ತಿಲ್ಲ..
ಬಿಡುವಿದ್ದರೆ ಮೊಬೈಲ್ ಕೈಗೆತ್ತದೇ, ವೃಥಾ ಸಮಯಕೊಲ್ಲದೇ, ಕೆಮರಾ ಹೆಗಲೇರಿಸಿಕೊಂಡು ಊರ ಸುತ್ತಮುತ್ತ ಪಕ್ಷಿ ಸಂಕೇತಗಳ ಜಾಡುಹಿಡಿದು ನಡೆವ ಈ ಬಾಲೆ ಪಕ್ಷಿಲೋಕದ ಪುಟಾಣಿ ನಿರೀಕ್ಷಕಿಯಷ್ಟೇ ಅಲ್ಲ, ಬಾನಾಡಿಗಳ ಪುಟ್ಟ ಸಂಶೋಧಕಿ ಎಂದರೆ ನಾಡಿಗೇ..ಅಚ್ಚರಿ!!
ಬೇಳ ಸಂತ ಬಾರ್ತಲೋಮಯ ಹಿರಿಯ ಬುನಾದಿ ಶಾಲೆಯ 6ನೇ ತರಗತಿ ವಿದ್ಯಾರ್ಥಿನಿಯಾದ 11ರ ಹರೆಯದ ಕು. ನಿಹಾರಿಕ ಡಿ. ಕೇವಲ ಎರಡೇ ವರ್ಷದ ಪಕ್ಷಿ ಸಾಂಗತ್ಯದಿಂದ 120ರಷ್ಟು ವೈವಿಧ್ಯ ಪ್ರಭೇಧದ ಪಕ್ಷಿಗಳನ್ನು ತನ್ನೂರಿಂದಲೇ ಗುರುತಿಸಿದ್ದಾಳೆ. ಅವುಗಳ ಚಿತ್ರ ತೆಗೆದು ಜನ್ಮ ವೃತ್ತಾಂತ ಸಹಿತ ಬಾನಾಡಿ ಬದುಕನ್ನೂ ದಾಖಲಿಸಿದ್ದಾಳೆ. ಬೇಕಿದ್ದರೆ ಅವುಗಳೆಲ್ಲದರ ಬಗ್ಗೆ ಯಾರೇ ಕೇಳಿದರೂ ಅಳುಕಿಲ್ಲದೇ ಟಪಟಪನೇ ಮಾತಾಡುತ್ತಾ ಜೀವಪ್ರೀತಿ ಜಿನುಗುತ್ತಾಳೆ!!
ಕಾಳಜಿ ಮೂಡಿಸುತ್ತಾಳೆ..
ಪಕ್ಷಿಲೋಕದಲ್ಲೊಂದು ಕೌತುಕದ ಕಣ್ಣಿರಿಸಿ ನಡೆಯುವ ಈ ಪುಟ್ಟ ಬಾಲೆಯ ಆಸಕ್ತಿ, ಪ್ರತಿಭೆ, ಕಾಳಜಿಗೆ ಕೇರಳದ ಜೈವಿಕ ಸಂರಕ್ಷಣಾ ಪರಿಸರ ಸಂಸ್ಥೆಗಳಿಂದ ಪ್ರಶಂಸೆಯ ಅಂಗೀಕಾರಗಳು ಈಗ ತಣ್ಣಗೆ ಬರಲಾರಂಭಿಸಿವೆ. ಇದೇ ಸೆ.21ರಂದು (ಇಂದು)ಪಯ್ಯನ್ನೂರಿನ ಲಲಿತಕಲಾ ಅಕಾಡೆಮಿಯಲ್ಲಿ ನಡೆಯುವ
Walk with vc ಎಂಬ ಪಕ್ಷಿ,ಪರಿಸರ ಮಮತೆಯ ಸಂಸ್ಥೆಯ ದ್ವಿದಿನ ಕಾರ್ಯಕ್ರಮದಲ್ಲಿ ನಮ್ಮ ಗಡಿನಾಡಿನ ಈ ಪುಟ್ಟ ಬಾಲೆಗೂ ಅವಕಾಶ ದಕ್ಕಿದೆ. ಇದೊಂದು ಪ್ರಶಂಸನೀಯ ಅಂಗೀಕಾರ. ಮುನ್ನಡೆಗೆ ಕೈಹಿಡಿವ ಪ್ರೋತ್ಸಾಹ..
ದ್ವಿದಿನ ಕಾರ್ಯಕ್ರಮದಲ್ಲಿ ಮೊದಲ ದಿನ “ಎಳೇ ಚಿಗುರು”ಎಂಬುದು 15ರ ಕೆಳ ಹರೆಯದ ಪುಟಾಣಿಗಳದ್ದೇ ವೇದಿಕೆ. ಇಲ್ಲಿ ನಿಹಾರಿಕಾಳ ಅನನ್ಯ, ಅಪೂರ್ವ ಚಿತ್ರಗಳ ಪ್ರದರ್ಶನವಿದೆ. ಜತೆಗೆ ಅವುಗಳ ಕುರಿತಾದ ಮಾಹಿತಿ ಮಂಡನೆ ಇದೆ. ಇಷ್ಟೇ ಅಲ್ಲ, ಸಮಾರಂಭದ ವರದಿ ಮಂಡನೆಯೇ ಈ ಪುಟ್ಟ ಪೋರಿಯದ್ದು!!
ಪಕ್ಷಿ ಪ್ರೀತಿಯ ನಾಂದಿ ಇಲ್ಲಿಂದ..
ಮಗು ನಿಹಾರಿಕಾ ಆಗ ನಾಲ್ಕನೇ ತರಗತಿಯಲ್ಲಿದ್ದಳು. ಬೇಳ ಸಂತ ಬಾರ್ತಲೋಮಯ ಶಾಲೆಯಲ್ಲೊಂದು ಪರಿಸರ,ಜೀವ ವೈವಿಧ್ಯ ಕಾಳಜಿಯ ತರಗತಿ. ಈ ತರಗತಿ ನಿರ್ವಹಿಸಲು ಬಂದವರು ಕಿದೂರಿನ ರಾಜು ಮಾಸ್ತರ್. ಅವರು ಅಧ್ಯಾಪಕರು, ಪರಿಸರ,ಪ್ರಾಣಿಪಕ್ಷಿ ಜೀವಜಾಲಗಳ ಪ್ರೇಮಿ. ಅವರ ಒಂದೇ ಒಂದು ತರಗತಿಯಿಂದ ಪ್ರೇರಿತಳಾದ 4ನೇ ತರಗತಿ ಹುಡುಗಿಯೊಳಗೆ ಅದೆಲ್ಲಿಂದ ಜೀವಪ್ರೀತಿಯ ಮಮತೆ ಮೊಳೆಕೆಯೊಡೆಯಿತೋ ಗೊತ್ತಿಲ್ಲ…!!
ಅವಳು ಪರಿಸರ ವೀಕ್ಷಿಸಿದಳು. ಜೀವಜಾಲ ನಿರೀಕ್ಷಿಸಿದಳು. ಪಕ್ಷಿ ನಿರೀಕ್ಷಣೆಯೆಂಬ ಅಪರೂಪದ ಮಮತೆಯ ಕಡೆಗೆ ದೃಢ ಹೆಜ್ಜೆ ಎತ್ತಿದಳು. ಮನಸ್ಸು ಚಾಂಚಲ್ಯವಾಗದೇ ಗಮನವಿಟ್ಟು ಅಧ್ಯಯನ ನಿರತಳಾದಳು.!
ಈಗ 6ನೇ ತರಗತಿಯ ಪುಟ್ಟ ಹುಡುಗಿಯೊಬ್ಬಳು ಕೇವಲ ಎರಡೇ ವರ್ಷದಲ್ಲಿ ಹೀಗೆ ರೂಪುಗೊಂಡ ಬಗೆಯ ಹಿಂದೆ ರಾಜು ಮಾಸ್ತರರ ಕಾಳಜಿ, ಮಾರ್ಗದರ್ಶನ, ಸ್ಪೂರ್ತಿ ಇದೆ. ಹೊರತಾಗಿ ಪರಿಸರ, ಜೀವಜಾಲದ ಜೈವಿಕ ಭೂಪ್ರಕೃತಿ ಪ್ರೀತಿಸಿ, ಪೋಷಿಸುವ ಸಂಘಟನೆಗಳ ಮಾರ್ಗದರ್ಶನವೂ ಒಲಿದಿದೆ. ಒಮ್ಮೆ ಕಣ್ಣೂರು ಜಿಲ್ಲೆಯ ಮಾಡಾಯಿಕ್ಕಾವ್ ಗುಡ್ಡದಲ್ಲಿ walk with vc ಸಂಸ್ಥೆಯ ಕಾರ್ಯಕ್ರಮ. ಅಲ್ಲಿ ಕೇರಳದ ಅನೇಕ ಪರಿಸರ, ಜೀವಜಾಲ ತಜ್ಞರು ಸೇರಿದ್ದರು. ಗಡಿನಾಡಿನ ಪುಟ್ಟ ಬಾಲೆ ಎರಡೇ ವರ್ಷದಲ್ಲಿ 120 ಪಕ್ಷಿಗಳನ್ನು ಗುರುತಿಸಿ, ಅದರ ಸಮಗ್ರ ಮಾಹಿತಿಯ ಚಿತ್ರಗಾಥೆಯನ್ನು ಆಲ್ಬಂ ಮಾದರಿಯಲ್ಲಿ ತಯಾರಿಸಿ, ಪಕ್ಷಿಗಾಥೆ ಮಂಡಿಸಿದ್ದು ಕಂಡು ಅವರೆಲ್ಲರೂ ಬೆರಗಾದರು. ಈ ಕಾರಣದಿಂದಲೇ ಈಕೆಗೆ walk with vc
ದ್ವಿತೀಯ ವಾರ್ಷಿಕೋತ್ಸವದಲ್ಲಿ ಇಂಥದ್ದೊಂದು ಪ್ರೋತ್ಸಾಹದ ಅವಕಾಶ ಸಿಕ್ಕಿದೆ.
ಗಡಿನಾಡ ಕಾಸರಗೋಡಿನ ಹಿಂದುಳಿದ ಬಡಪಾಯಿ ಬಾಲೆ ಹೀಗೊಂದು ಗೌರವ ಪಡೆಯುವುದು ಇದೇ ಮೊದಲು!!
ಭವಿಷ್ಯದಲ್ಲಿ ಬಾನಾಡಿಗಳ ಜಗತ್ತಲ್ಲಿ ಮತ್ತೆಲ್ಲಿಗೋ ದಾಟುವ ಭರವಸೆಯ ಹೆಜ್ಜೆ ಎತ್ತಿರುವ ಈ ಬಾಲೆ ಕೇರಳದ ಚೆರುಗುನ್ನ್ ಹಯರ್ ಸೆಕಂಡರಿ ಶಾಲಾಧ್ಯಾಪಕಿ ಆಶಾಕಿರಣ ಮತ್ತು ಬೇಳ ದರ್ಭೆತ್ತಡ್ಕದ ನಿವಾಸಿ ಗೋಪಾಲಕೃಷ್ಣರ ಏಕೈಕ ಪುತ್ರಿ. ಪಕ್ಷಿಲೋಕವನ್ನು ಆರಾಧಿಸಿ, ಅಧ್ಯಯನ ನಿರತಳಾದ ಈಕೆ ರಾಜು ಮಾಸ್ತರ್ ಕಿದೂರು ಎಂಬ ಅಧ್ಯಾಪಕ ಬಿತ್ತಿದ ಚಿಗುರುಮೊಗ್ಗು…!
ಎಳೆ ಮೊಗ್ಗು ಪರಿಮಳ ಭರಿತ ಹೂವಾಗುವುದನ್ನು ನೋಡುವುದೇ ಚಂದ. ಅದಕ್ಕಿಂತಾಚೆ ಹೀಗೆ ಯಶಸ್ಸು ಪಡೆಯಬೇಕಿದ್ದರೆ ಗುರಿಯೆಡೆಗೆ ತ್ಯಾಗ ಬದ್ಧ ನಡಿಗೆಯೇ ಮುಖ್ಯ ಎಂಬ ಬಾಲಪಾಠ ಇಲ್ಲಿದೆ..