✍️ * ದಾಮೋದರ ಶೆಟ್ಟಿ
ಇರುವೈಲು, ಮುಂಬಯಿ
ಚಿಂತನ ಲೇಖನ
ಕರಾವಳಿಯ ಪ್ರಬಲ, ಬಲಿಷ್ಟ ಜನಾಂಗವಾದ ಬಂಟರು ಆರ್ಥಿಕವಾಗಿ ಬಲಿಷ್ಟರಾಗುತ್ತಿದ್ದಂತೆಯೇ ಪಾರಂಪರಿಕವಾದ ತಮ್ಮ ಜನಾಂಗಿಕ ಪದ್ದತಿ, ಸಂಪ್ರದಾಯಕ್ಕೆ ನಿಧಾನವಾಗಿ ಎಳ್ಳುನೀರು ಬಿಡುತ್ತಿದ್ದಾರೆ ಅಲ್ಲವೇ?
ಇದು ಬಂಟರ ಕೂಡುಕಟ್ಟಿನ ಹಿರಿಯರ ನಡುವೆ ಆಗುತ್ತಿರುವ ಸಮಕಾಲಿಕ ಸಂವಾದ.
ಯಾಕೋ.. ನಾಗಾರಾಧನೆಯಲ್ಲಾಗಲೀ, ಭೂತಾರಾಧನೆಯಲ್ಲಾಗಲೀ, ವಿವಾಹ, ಅಪರಕ್ರಿಯೆಯಂತಹ ಕಾರ್ಯಕ್ರಮಗಳಲ್ಲಾಗಲೀ ನಮ್ಮವರಿಗೆ ತೌಳವ ಸಂಪ್ರದಾಯವೆಂದರೆ ಒಂದು ರೀತಿಯ ಅಸಡ್ಡೆಯ ತಾತ್ಸಾರ ಬಂದಿದೆ!
ವೈದಿಕ ಸಂಪ್ರದಾಯವೇ ಶ್ರೇಷ್ಟ , ತೌಳವತೆ ಕನಿಷ್ಟ ಎಂಬ ಭಾವನೆ ಮೂಡಿದೆ, ಮೂಡಿಸಲಾಗಿದೆ. ಯಾಕೆ ಹೀಗಾಯಿತು? ಹಿರಿಯರೇಕೆ ಮೌನ??
ತೌಳವ ಸಂಪ್ರದಾಯ ಮಹತ್ವದ ಭೂಮಿಯಾರಾಧನೆ. ಅದು ಕೃಷಿ ಸಂಸ್ಕೃತಿಯನ್ನು ಅವಲಂಬಿಸಿದೆ.
ಅದು ನೆಲಮೂಲ ಆರಾಧನೆ, ಅನುಷ್ಟಾನ, ಆಚರಣೆಗಳನ್ನು ಅವಲಂಬಿಸಿದೆ. ಇಂಥ ಸನಾತನ ಸಂಪ್ರದಾಯದ ಬಗ್ಗೆ ಮಾರ್ಗದರ್ಶನ ಮಾಡಬಲ್ಲ ಹಿರಿಯರ ಕೊರತೆಯೂ ನಮ್ಮಲ್ಲಿದೆ ಎಂಬುದೇ ವರ್ತಮಾನದ ಸಮಸ್ಯೆ.!!
ನಮ್ಮ ತರವಾಡು ಮನೆಗಳ ಭೂತ, ದೈವ್ವಗಳಿಗೆ ಬ್ರಹ್ಮಕಲಶ ಮಾಡಿಸುವ, ನಾಗನ ಪ್ರಾಕೃತಿಕ ಆವಾಸ ಸ್ಥಾನವನ್ನು ಕಡಿದು ಕಾಂಕ್ರೀಟ್ ಗುಡಿಯಲ್ಲಿ ಕುಳ್ಳಿರಿಸಲು ಪ್ರಯತ್ನಿಸುವವರ ಒತ್ತಾಸೆಗೆ ಮಣಿವ ನಮಗೆ ವಿವಾಹ ಸಂಸ್ಕಾರಗಳೇನು ಮಹಾ? ವೈದಿಕ ಸಂಪ್ರದಾಯದಂತೆ ಹೋಮ, ಸಪ್ತಪದಿ, ಕನ್ಯಾದಾನ ಮಾಂಗಲ್ಯಧಾರಣೆ ಇದ್ದರೇನೆ ಅದು ಮದುವೆ ಎಂಬಂತಾಗಿದೆ ಈಗ ಅಲ್ಲವೇ?
ತೌಳವನ ಮದುವೆ ಹಿಂದೆ ಹೀಗಿತ್ತೇ??
ಈಗ ಹೀಗಾಗಲು ಅನುಭವಿ ಹಿರಿಯರ ಮೌನ ಕಾರಣ ತಾನೇ??
ಸದ್ಯಕೆ ಬಂಟರ ಮದುವೆಯಲ್ಲಿ ವರಪೂಜೆ., ಕಾಶೀಯಾತ್ರೆ, ಉರುಟಣೆ ಇತ್ಯಾದಿಗಳು ಪ್ರಾಂಭವಾಗಿಲ್ಲ. ಕ್ರಮೇಣ ಪ್ರಾರಂಭವಾಗಲೂ ಬಹುದು.!ಅದೇ ಆತಂಕದ ವಿಷಯ!
ಬಂಟರು ಮೂಲತಃ ಕ್ಷತ್ರಿಯರು. ನೆಲಮೂಲದ ಕೃಷಿಯನ್ನು ನಂಬಿ ಬದುಕಿದವರು. ನಮ್ಮಲ್ಲಿ ಭೂಮಿಸಾಕ್ಷಿಯಾಗಿ ಹಿರಿಯರ ಸಮ್ಮುಖದಲ್ಲಿ ಮದುವೆಯಾಗುವುದೇ ಪ್ರಾಚೀನ ಸಂಪ್ರದಾಯ. ಹಿಂದೆ ಅಂದರೆ ಸುಮಾರು ಅರುವತ್ತು ಎಪ್ಪತ್ತು ವರ್ಷಗಳ ಹಿಂದೆ ಮಾಂಗಲ್ಯಧಾರಣೆಯೂ ನಮ್ಮಲ್ಲಿ ಇರಲಿಲ್ಲವಂತೆ.!!
ವಧುವನ್ನು ಅಲಂಕರಿಸುವಾಗ ಮುತ್ತೈದೆಯರೇ ಅವಳ ಕೊರಳಿಗೆ ಕರಿಮಣಿ ಕಟ್ಟಿ, ಕಾಲುಂಗುರ ತೊಡಿಸುತ್ತಿದ್ದರಂತೆ.
“ಕನ್ಯಾದಾನ” ನಮ್ಮ ಪಾಲಿಗೆ ಒಂದು ಅರ್ಥಹೀನ ಸಂಪ್ರದಾಯ. ಬಂಟರು ಮಾತೃಪ್ರಧಾನ ಪದ್ದತಿಯನ್ನು ನಂಬುವವರು. ನಮ್ಮಲ್ಲಿ “ಕೊಟ್ಟ ಹೆಣ್ಣು ಕುಲದಿಂದ ಹೊರಗೆ” ಅನ್ನುವ ಕ್ರಮ ಇಲ್ಲ. ಹೆಣ್ಣಿಗೆ “ಅಮೆಸೂತಕ” ತಾಯಿ ಮನೆಯದೇ ಹೊರತು ಗಂಡನ ಮನೆಯದಲ್ಲ. ಗಂಡನ ಮರಣ ಸಂಭವಿಸಿದರೆ ಅವಳಿಗೆ ಆಶ್ರಯ ತಾಯಿ ಮನೆ. ಅವಳು ವೈದಿಕರ ಹೆಂಗಸರಂತೆ ತಲೆ ಬೋಳಿಸಿ ಗಂಡನ ಮನೆಯಲ್ಲಿ ಕೂಲಿಯಾಳಿಗಿಂತ ಕಡೆಯಾಗಿ ಬದುಕಬೇಕಾಗಿಲ್ಲ. ಹಾಗಿರುವಾಗ ಕನ್ಯಾದಾನ ಎಲ್ಲಿ ಬಂತು? ತಾಯಿಮನೆಯಲ್ಲಿ ಗೌರವದ ಬದುಕು ಅವಳದು. ಸಪ್ತಪದಿಯೂ ನಮ್ಮ ಪದ್ದತಿಯಲ್ಲ, ಅಕ್ಕಿ ಹಾಗೂ ನಾಣ್ಯದ ಮೇಲೆ ಪಾದವೂರಿ ನಡೆಸುವ ಸಪ್ತಪದಿಯ ಔಚಿತ್ಯ ನನಗೆ ಅರ್ಥವಾಗಿಲ್ಲ. ಕೃಷಿಕರಾದ ನಾವು ಅನ್ನ(ಅಕ್ಕಿ) ವನ್ನು ಹಾಗೂ ಲಕ್ಷ್ಮಿಯನ್ನು ಕಾಲಿನಿಂದ ಮೆಟ್ಟಬಹುದೇ?
ನಮ್ಮದು ಒಂದು ರೀತಿಯ ಎಡೆಬಿಡಂಗಿತನದ ಬದುಕು. ಅತ್ತ ವೈದಿಕವೂ ಅಲ್ಲದ ಇತ್ತ ತೌಳವವೂ ಅಲ್ಲದ ಕಲಸುಮೇಲೋಗರ. ವೈದಿಕ ರೀತಿಯಲ್ಲಿ ವಿವಾಹವಾದ ಬಳಿಕ ಬಂಟರ ಪದ್ದತಿಯ ‘ತೊಡಮನೆ’ ಎಂಬ ಸಂಪ್ರದಾಯವೂ ಇದೆ. ಉತ್ತರಕ್ರಿಯೆ ಮಾಡಿ ಮೃತರನ್ನು ವೈಕುಂಟಕ್ಕೆ ಕಳುಹಿಸಿದ ಬಳಿಕ ತಿಂದು ಕುಡಿದು “ಉಲಾಯಿ ಲೆಪ್ಪುನ” ಕಾರ್ಯಕ್ರಮವೂ ಇದೆ. ಈಗ ನಾವು ಬಂಟರು ಬ್ಯಾರಿ ಸಾಕಿದ ನಾಯಿಯ ಹಾಗಾಗಿದ್ದೇವೆ. ಟೋಪಿ ಹಾಕಿಕೊಂಡವನ ಹಿಂದೆ ಓಡೋದು. ನಾವು ಹದಿಮೂರನೆ ದಿನ ‘ಉಲಾಯಿ ಲೆಪ್ಪುನ’ ಕಾರ್ಯಕ್ರಮ ಮಾಡಿ ಹದಿನಾರನೇ ದಿನ ವೈಕುಂಠ ಸಮಾರಾಧನೆ ಮಾಡುತ್ತೇವೆ.
ಮೃತರು ವೈಕುಂಟ ಸೇರಬೇಕೋ ಅಥವಾ ಸತ್ತ ನಮ್ಮ “ಪದಿನಾಜಿ” ಹಿರಿಯರೊಂದಿಗೆ ನಮ್ಮ ಮನೆಯೊಳಗೆ ಇರಬೇಕೇ ಎನ್ನುವುದನ್ನು ತೀರ್ಮಾನಿಸಲಾಗದ ಅಯೋಮಯ ಸ್ಥಿತಿ ನಮ್ಮದು.
ಇತ್ತೀಚೆಗೆ ಬಂಟರಲ್ಲಿಯೂ ಕೊಂಕಣಿಗರಲ್ಲಿ ಬ್ರಾಹ್ಮಣರಲ್ಲಿ ಇರುವಂತೆ ಒಬ್ಬ ಗುರು ಬೇಕೆಂಬ ಕೇಳಿಕೆಯೂ ಇದೆ. ಇಬ್ಬರು ಗುರುಗಳು ತಾವೇ ಬಂಟರ ಗುರುಗಳೆಂದು ಬಿಂಬಿಸಲು ಪ್ರಯತ್ನಿಸಿದ್ದೂ ಗುಟ್ಟಾಗಿ ಉಳಿದಿಲ್ಲ. ನಿಮ್ಮ ಮನೆಯ ದೈವಗಳನ್ನು, ನಾಗನನ್ನು ನನ್ನಲ್ಲಿ ತಂದು ಇಡಿ, ನಿಮಗೆ ಪುರುಸೊತ್ತು ಇಲ್ಲದಿದ್ದರೆ ನಾನೇ ಪೂಜೆ ಮಾಡುತ್ತೇನೆ ಅಂತ ಪೂಜೆಯನ್ನೂ outsource ಗೆ ಗುತ್ತಿಗೆ ಪಡೆಯಲು ಒಬ್ಬ ಗುರು ಪ್ರಯತ್ನಿಸುತ್ತಿದ್ದನೆಂದು ಕೇಳಿದ ನೆನಪು.
(ಲೇಖಕರು ಯಕ್ಷಗಾನ ಕಲಾವಿದರು ಮತ್ತು ಪೌರಾಣಿಕ ಜಿಜ್ಞಾಸು. ಮುಂಬೈಯಲ್ಲಿ ನೆಲೆಸಿರುವ ಅವರು ಪೌರಾಣಿಕ ಚಿಂತನೀಯ ಬರಹಗಳಿಂದ ಪ್ರಸಿದ್ಧರು.)