ಕಣಿಪುರ ಸುದ್ದಿಜಾಲ
ಮಲಯಾಳಂ ಚಿತ್ರರಂಗದಲ್ಲಿ ಮಮತಾಮಯಿ ಅಮ್ಮನ ಪಾತ್ರಗಳಿಂದಲೇ ಜನಪ್ರಿಯರಾದ ಹಿರಿಯ ನಟಿ ಕವಿಯೂರ್ ಪೊನ್ನಮ್ಮ ಅವರ ಆರೋಗ್ಯ ಪರಿಸ್ಥಿತಿ ಹದಗೆಟ್ಟು, ಗಂಭೀರ ಸ್ಥಿತಿಯಲ್ಲಿರುವುದು ವರದಿಯಾಗಿದೆ.
ಕೊಚ್ಚಿಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಅವರು ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆಯಲ್ಲಿದ್ದು, ಆರೋಗ್ಯ ತೀವ್ರ ಹದಗೆಟ್ಟಿದೆಯೆಂದು ತಿಳಿದುಬಂದಿದೆ.
ಕೊಚ್ಚಿನ್ ವಡಕ್ಕೇ ಪರವೂರಿನ ವಸತಿಯಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದ ಅವರನ್ನು ಆರೋಗ್ಯ ಸಮಸ್ಯೆಗಳಿಂದಾಗಿ ಕೆಲದಿನಗಳ ಹಿಂದೆಯಷ್ಟೇ ಆಸ್ಪತ್ರೆಗೆ ಸೇರಿಸಲಾಗಿತ್ತು.
1945ರಲ್ಲಿ ಜನಿಸಿದ ಪೊನ್ನಮ್ಮ ಅವರಿಗೆ 79ವರ್ಷ ವಯಸಾಗಿದ್ದು, ಭಾರತೀಯ ಬೆಳ್ಳಿತೆರೆಯ ಹಿರಿಯ ನಟಿಯಲ್ಲೊಬ್ಬರಾಗಿದ್ದಾರೆ.
ಮಲಯಾಳಂ ಸಿನಿಮಗಳ ಉತ್ಕರ್ಷದೊಂದಿಗೆ ಬೆಳೆದ ನಟಿ ಅನೇಕ ಅತ್ಯುತ್ತಮ ಚಿತ್ರಗಳಲ್ಲಿ ನಟಿಸಿದ್ದರು.
ರಂಗಭೂಮಿ ನಟಿಯಾಗಿ ಕಲಾಜೀವನ ಆರಂಭಿಸಿದ್ದ ಪೊನ್ನಮ್ಮ 15ರ ಹರೆಯದಲ್ಲೇ ಸಿನಿಮಾ ರಂಗಕ್ಕೆ ಕಾಲೂರಿದ್ದರು. ಸುದೀರ್ಘ 60ವರ್ಷಕ್ಕೂ ಅಧಿಕ ಎಲ್ಲಾ ತಲೆಮಾರಿನ ನಟ,ನಟಿಯರೊಂದಿಗೆ ನಟಿಸಿದ ಅವರು ಸುಮಾರು 700ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ ದಾಖಲೆ ಹೊಂದಿದ್ದಾರೆ. ನಾಯಕ ನಟನ ಅಮ್ಮ ಪಾತ್ರಗಳನ್ನು ಲೀಲಾಜಾಲ ನಿರ್ವಹಿಸಿದ ಅವರು ಸೂಪರ್ ಸ್ಟಾರ್ ಮೋಹನ್ ಲಾಲ್ ರ ಹಿಟ್ ಸಿನಿಮಾಗಳಲ್ಲಿ ಖಾಯಂ ಅಮ್ಮ ಪಾತ್ರಗಳಿಂದ ಪ್ರೇಕ್ಷಕ ಮನಸೂರೆಗೊಂಡಿದ್ದರು. ಈ ಜೋಡಿ ಅನುರೂಪದ ಸಹಜ ತಾಯಿ,ಮಗನೆಂಬಷ್ಟು ಜನಪ್ರಿಯವಾಗಿತ್ತು.
70ರ ದಶಕದ ನಿರ್ಮಾಪಕ ಮಣಿ ಸ್ವಾಮಿ ಅವರನ್ನು ವಿವಾಹವಾಗಿದ್ದ ಪೊನ್ನಮ್ಮ ಇಬ್ಬರು ಮಕ್ಕಳನ್ನು ಹೊಂದಿದ್ದು, ಅವರಿಬ್ಬರೂ ಅಮೇರಿಕಾದಲ್ಲಿ ನೆಲೆಸಿದ್ದಾರೆ.
ನಾಲ್ಕು ಬಾರಿ ಶ್ರೇಷ್ಠ ಸಹನಟಿ ರಾಜ್ಯ ಪ್ರಶಸ್ತಿ ಪಡೆದ ಅವರು 2021ರಲ್ಲಿ ತೆರೆಕಂಡ “ಆಣುಂ ಪೆಣ್ಣುಂ” ಸಿನಿಮದಲ್ಲಿ ಕೊನೆಯ ಬಾರಿ ನಟಿಸಿದ್ದರು. ಪ್ರಸ್ತುತ ಆಸ್ಪತ್ರೆಗೆ ಪ್ರಮುಖ ನಟ,ನಟಿಯರು ಭೇಟಿ ಕೊಡುತ್ತಿದ್ದಾರೆ. ಇಡೀ ಕೇರಳೀಯ ಚಿತ್ರೋದ್ಯಮದ ಮಂದಿ, ಅಭಿಮಾನಿಗಳು ಮಮತಾಮಯಿ ಅಮ್ಮ ಪಾತ್ರದ ಪೊನ್ನಮ್ಮನ ಆರೋಗ್ಯಕ್ಕಾಗಿ ಪ್ರಾರ್ಥಿಸುತ್ತಿದ್ದಾರೆ.