ಮಠದ ಪ್ರೀತಿಯ ಭಾಗವತರಿಗೆ ಪ್ರಶಸ್ತಿ ಸಂಭ್ರಮ: ಮಠದಿಂದ ಸನ್ಮಾನ ಗೌರವ, ಹಾಡಿನಂತೆಯೇ ಮಾತನ್ನೂ ಆರ್ದ್ರವಾಗಿಸಿದ ಅಮ್ಮಣ್ಣಾಯರು..

by Narayan Chambaltimar

Kanipura special

ತೆಂಕುತಿಟ್ಟಿನ ಮಧುರಕಂಠದ ಭಾವಸ್ಫುರಣೆಯ, ರಸಪೋಷಕ ಭಾಗವತ ದಿನೇಶ ಅಮ್ಮಣ್ಣಾಯರಿಗೆ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಗೌರವ ಪ್ರಶಸ್ತಿ ಒಲಿದ ಹಿನ್ನೆಲೆಯಲ್ಲಿ ಅವರಾಪ್ತ ಅಭಿಮಾನಿ ಬಳಗ ಸಂತಸದಲ್ಲಿದೆ. ಎಡನೀರು ಶ್ರೀಮಠದ ಭಾಗವತರೆಂದೇ ಜನಪ್ರಿಯರಾದ ಅವರಿಗೆ ಶ್ರೀ ಸಚ್ಛಿದಾನಂದ ಭಾರತೀ ಶ್ರೀಪಾದಂಗಳವರ 4ನೇ ಚಾತುರ್ಮಾಸದ ಮಂಗಲೋತ್ಸವದಲ್ಲಿ ಅನುಗ್ರಹ ಸಂಮಾನದ ಆಶೀರ್ವಾದವೂ ಒಲಿದಿದೆ. ಇದರಿಂದ ಪ್ರಶಸ್ತಿಗೊಂದು ಗರಿ ಮೂಡಿತೆಂದು ಮಾತಾಡಿದ ಅಮ್ಮಣ್ಣಾಯರು ತನ್ನ ಭಾಗವತಿಕೆಯಂತೆಯೇ ಮಾತನ್ನೂ ರಸಭಾವ ಸಮ್ಮೇಳಿಸಿ ಆರ್ದ್ರವಾಗಿಸಿದರು. ಆ ಮಾತುಗಳ ಸಾರ ಇಲ್ಲಿದೆ.

“ಯಕ್ಷಗಾನ ಎಕಾಡೆಮಿಯೇ ಗುರುತಿಸಿ ನೀಡಿದ ಗೌರವ ಪ್ರಶಸ್ತಿಯ ಘನತೆ ದೊಡ್ಡದು. ಖುಷಿ ಸಹಜ. ಆದರೆ ಅದಕ್ಕಿಂತಲೂ ದೊಡ್ಡದು ನಮ್ಮನ್ನರಿತವರಿಂದಲೇ ಸಿಗುವ ಸಂಭ್ರಮದ ಮಾನ್ಯತೆಯಲ್ಲಿದೆ. ಪ್ರಶಸ್ತಿಗೆ ಆಯ್ಕೆಯಾದೆನೆಂಬ ಖುಷಿಯಿಂದ ನನ್ನ ಮಠ ನನಗೆ ಸನ್ಮಾನಿಸಿದ್ದುಂಟಲ್ಲ, ಇದು ನನ್ನ ಸೌಭಾಗ್ಯ, ಇದೇ ನನಗೆ ಪರಮ ಪ್ರಶಸ್ತಿ” ಎಂದೇ ಮಾತಾಡಿದ ಅಮ್ಮಣ್ಣಾಯರು ಮಾತಿನಲ್ಲೂ ರಸಗಡಲ ಕಾವ್ಯನೇಯ್ದರು. ಭಾವದ ಬಲೆಯಿಂದ ನೆರೆದವರನ್ನು ಸೂರೆಗೈದರು.

48ವರ್ಷಗಳ ಕಲಾಯಾನ ನನ್ನದು. ಕಲಾಜೀವನದಲ್ಲೀಗ ನನ್ನನ್ನು ಹಿರಿಯ ಭಾಗವತ ಎಂದಾಗ ನನಗೆ ಅಳುಕಾಗುವುದುಂಟು. ನಾನೂ ಹಿರಿಯನಾದೆನೇ..? ಪ್ರಶ್ನೆ ಮೂಡುತ್ತದೆ. ಏಕೆಂದರೆ ರಂಗಕ್ಕೆ ರಸಪೋಷಕವಾಗಿ ಹಾಡುವುದು ಬಿಟ್ಟರೆ ಮತ್ತೇನೂ ನನಗರಿಯದು. ಆದ್ದರಿಂದ ನಾನೆಂದೂ ಪ್ರಾರ್ಥಿಸುವುದಿಷ್ಟೇ ದೇವರೇ ನನಗೆ ಶಕ್ತಿ ಕೊಡು, ಆರೋಗ್ಯ ಕೊಡು, ಕಂಠ ಕೊಡು ಎಂದಷ್ಟೇ..
ಈಗ ಶರೀರದ ಬಲಗುಂದಿದೆ. ಆದರೆ ಗುರು,ದೇವಾನುಗ್ರಹದಿಂದ ಶಾರೀರ ಹಾಗೆಯೇ ಉಳಿದಿದೆ. ತುಂಬಾ ಹೊತ್ತು ಕುಳಿತು ಹಾಡಲಾಗುವುದಿಲ್ಲ ಎಂದರು ಅಮ್ಮಣ್ಣಾಯರು.
ನಾನು ಎಷ್ಟೋ ಹಾಡಿದ್ದೇನೆ. ಎಂದಿಗೂ ಜನ ನೋಡಿ ಹಾಡಲಿಲ್ಲ. ಜನರನ್ನ ಓಲೈಸುವಂತೆ ಹಾಡಲಿಲ್ಲ. ರಂಗದ ರಸಕ್ಕೆ ತಕ್ಕ ಹಾಡಿದ್ದೇನೆ. ಮೈಮರೆತಿದ್ದೇನೆ. ಎಂದಿಗೂ ಜನ ನೋಡಿ ಹಾಡಿದವನೇ ಅಲ್ಲ, ಜನರೇ ಇಲ್ಲದಿದ್ದಾಗ ನಾಲ್ಕು ದನ ನೋಡಿ ಹಾಡಿದ್ದೂ ಉಂಟು!!
ಎಲ್ಲ ಕೇಳಲಿ ಎಂದು ನಾನು ಹಾಡುವುದಲ್ಲ, ಹಾಡುವುದು ಅನಿವಾರ್ಯ ಕರ್ಮ ನನಗೆ…

ಎಂದಿಗೂ ಪ್ರತಿಫಲಾಪೇಕ್ಷೆಯಿಂದ ಹಾಡಿಲ್ಲ, ಕೊಟ್ಟದ್ದನ್ನು ಸ್ವೀಕರಿಸಿದ್ದೇನೆ. ಶ್ರೀಮಠ ನನಗೆ ಬೇಕಾದಷ್ಟನ್ನೂ ಕೊಟ್ಟಿದೆ. ಅದು ನನಗೊಲಿದ ಅನುಗ್ರಹ. ಏಕೆಂದರೆ ನಾನು ಮಠದ ನೆರಳಲ್ಲಿ ಬೆಳೆದವ. ಮಠ ನನಗೆ ಮನೆಯೂ ಹೌದು. ಬದುಕಿನಲ್ಲಿ ಪ್ರೀತಿ ಎಂದರೆ ಹೀಗೂ ಉಂಟೇ ಎಂದು ಅರಿವಾದದ್ದೇ ಇಲ್ಲಿಂದ, ಪರಮಗುರುಗಳ ಮಾತೃವಾತ್ಸಲ್ಯದಿಂದ..ಅವರು ತಂದೆಯ ಪ್ರೀತಿ ಕೊಟ್ಟಿದ್ದಾರೆ. ತಾಯಿಯ ವಾತ್ಸಲ್ಯ ನೀಡಿದ್ದಾರೆ. ನನ್ನ ಭಾಗವತಿಕೆಯನ್ನು ಸಂಪೂರ್ಣ ಆಸ್ವಾದಿಸಿ ಪದ್ಯದೊಳಗೆ ಲೀನವಾಗಿ ಮಮತೆ ಇತ್ತಿದ್ದಾರೆ.
ನಾನು ಮುಜುಗರದ ಸ್ವಭಾವದವನು. ನಾನು ಹಾಡಿ ಎದ್ದಾಗ ಯಾರಾದರೂ ಬಂದು “ಅಮ್ಮಣ್ಣಾಯರೆ ಭಾರೀ ಸೊಗಸಾಗಿದೆ” ಎಂದರೆ ನಾನು ನಾಚುವೆ. ಕೂಡಲೇ ಓಡಿ ತಪ್ಪಿಸುವೆ. ನಾನೆಂದೂ ಜನರ ಹೊಗಳಿಕೆಗೆ ತಲೆ ಎತ್ತಿದವನೇ ಅಲ್ಲ. ಇಂಥ ನಾನು ಒಂದು ದಿನ ಮಠದಲ್ಲಿ ನಡೆದ ಆಟದಲ್ಲಿ ಪದ್ಯ ಹಾಡಿ ರೂಮಲ್ಲಿ ಮಲಗಿದ್ದೆ. ಅಲ್ಲಿಗೆ ಜನ ಕಳುಹಿಸಿದ ಹಿರಿಯ ಗುರುಗಳು “ಅವ ಮಲಗಿದ್ದರೆ ಎಬ್ಬಿಸಬೇಡ, ಎದ್ದಿದ್ದರೆ ಬಂದು ಊಟ ಮಾಡಲು ಹೇಳು, ಮಲಗಿದ್ದರೆ ಎದ್ದ ಬಳಿಕ ಊಟು ಮಾಡಿಸು” ಎಂದಿದ್ದರು. ಇದು ತಾಯಿ ಮಕ್ಕಳಲ್ಲಿ ತೋರಿಸುವ ವಾತ್ಸಲ್ಯ ತಾನೇ..?
ಹೀಗೆ ಪ್ರೀತಿ ಎಂದರೇನೆಂದರಿತ ಮಠದಿಂದ ಪ್ರಶಸ್ತಿ ಸಿಕ್ಕಿದಕ್ಕಾಗಿ ಗೌರವ ಸನ್ಮಾನ ಪಡೆಯುವುದೆಂದರೆ ನನಗಿದುವೇ ದೊಡ್ಡ ಪ್ರಶಸ್ತಿಯ ಸಂಭ್ರಮ ಎಂದರು ದಿನೇಶ ಅಮ್ಮಣ್ಣಾಯರು.

ಸತತ 15ವರ್ಷ ಎಡನೀರು ಮೇಳದ ಮುಖ್ಯ ಭಾಗವತರಾಗಿ ಕದಲದ ನಿಷ್ಠೆಯಿಂದ ಎಂಥ ಆಮಿಷಗಳಿಗೂ ಬಾಗದೇ, ಹೊಗಳಿಕೆಗೆ ಬೀಗದೇ ದುಡಿದ ಅವರು ಎಡನೀರು ಮೇಳ ನಿಲ್ಲುವಾಗ ಮೇಳ ತಿರುಗಾಟಕ್ಕೆ ವಿದಾಯ ಹೇಳಿದ್ದಾರೆ. ಈಗ ಅತಿಥಿಯಾಗಿ ಹಾಡುವ ಅವರು ಮಧುರ ಕಂಠದ ರಸರಾಜ. ಭಾವ ಬಯಸುವ ಪ್ರೇಕ್ಷಕರು ಅಪೇಕ್ಷಿಸುವ ಭಾಗವತ.

 

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00