ಎಡನೀರು ಮಠದಲ್ಲಿ ಚಾತುರ್ಮಾಸ ಮಂಗಲೋತ್ಸವ: ಯಕ್ಷಗಾನ ಅಕಾಡೆಮಿ ಗೌ.ಪ್ರಶಸ್ತಿ ವಿಜೇತ ಅಮ್ಮಣ್ಣಾಯ, ಜಬ್ಬಾರ್ ಗೆ ಸನ್ಮಾನ ಗೌರವ

by Narayan Chambaltimar

ಕಣಿಪುರ ಸುದ್ದಿಜಾಲ

ಕಾಸರಗೋಡಿನ ಶ್ರೀಮದೆಡನೀರು ಮಠದ ಶ್ರೀ ಸಚ್ಛಿದಾನಂದ ಭಾರತೀ ಶ್ರೀಪಾದಂಗಳವರ 4ನೇ ಚಾತುರ್ಮಾಸ ಮತ್ತು ತದಂಗವಾಗಿ ಮಠದಲ್ಲಿ ನಡೆದ ಎರಡು ತಿಂಗಳ ಪರ್ಯಂತ ಸಾಂಸ್ಕೃತಿಕ ಕಲೋತ್ಸವಕ್ಕೆ ಸೆ.18ರಂದು ಮಂಗಳಕರ ಸಮಾಪ್ತಿಯಾಯಿತು.

ಚಾತುರ್ಮಾಸ ಮಂಗಲೋತ್ಸವದಲ್ಲಿ 2023ನೇ ಸಾಲಿನ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಗೌರವ ಪ್ರಶಸ್ತಿಗೆ ಅರ್ಹರಾದ ಶ್ರೀಮಠದ ಮೇಳದ ಭಾಗವತರಾಗಿದ್ದ ದಿನೇಶ ಅಮ್ಮಣ್ಣಾಯ, ಖ್ಯಾತ ಅರ್ಥದಾರಿ ಜಬ್ಬಾರ್ ಸಮೋ ಸಂಪಾಜೆ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
ಸನ್ಮಾನಿತರ ಕುರಿತಾಗಿ ಕಲಾವಿದರಾದ ಹರೀಶ್ ಬಳಂತಿಮೊಗರು, ಪೆರ್ಮುದೆ ಜಯಪ್ರಕಾಶ್ ಶೆಟ್ಟಿ ಅಭಿನಂದನಾ ಭಾಷಣ ಮಾಡಿದರು.

ಸರಕಾರವೇ ಗುರುತಿಸಿ ನೀಡುವ ಪ್ರಶಸ್ತಿಯ ಗೌರವ ದೊಡ್ಡದು. ಆದರೆ ಅಂಥಾ ಪ್ರಶಸ್ತಿಗೆ ಭಾಜನರಾದಾಗ ನಮ್ಮನ್ನು ಕರೆದು ಶ್ರೀಮಠದಲ್ಲಿ ಮಂತ್ರಾಕ್ಷತೆ ಪೂರ್ವಕ ಸನ್ಮಾನಿಸಿ ಅಭಿನಂಧಿಸಿ ಗೌರವಿಸುವ ಸಂಸ್ಕಾರ ಉಂಟಲ್ಲ, ಇದರಲ್ಲಿ ಕಲಾ ಮಮತೆಯ ವಾತ್ಸಲ್ಯ ಇದೆ. ಪ್ರೀತಿ ಅಡಕವಾಗಿದೆ. ಆದ್ದರಿಂದ ಅಕಾಡೆಮಿಯ ಗೌರವ ಪ್ರಶಸ್ತಿಗಿಂತಲೂ ಗೇಣುದ್ದ ಎಡನೀರು ಮಠದ ಸನ್ಮಾನವೇ ದೊಡ್ಡದೆಂದು ಕಲಾವಿದರಾದ ದಿನೇಶ ಅಮ್ಮಣ್ಣಾಯ, ಜಬ್ಬಾರ್ ಸಮೋ ಸಂಪಾಜೆ ಅಭಿಪ್ರಾಯ ಪಟ್ಟರು.

ಚಾತುರ್ಮಾಸ ಸಮಿತಿ ಗೌರವಾಧ್ಯಕ್ಷ, ಕರ್ನಾಟಕ ಮಾನವ ಹಕ್ಕುಗಳ ಆಯೋಗದ ಹಂಗಾಮಿ ಅಧ್ಯಕ್ಷ ಟಿ. ಶ್ಯಾಂ ಭಟ್ ಅಧ್ಯಕ್ಷತೆ ವಹಿಸಿದರು. ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶ್ ಮತ್ತೀಹಳ್ಳಿ ಅತಿಥಿಯಾಗಿ ಪಾಲ್ಗೊಂಡು “ಎಡನೀರಿನಲ್ಲಿ ನಾನು ಇಡೀ ಕನ್ನಡನಾಡಲ್ಲಿ ಕೇಳದ ಸ್ವಚ್ಛ ಕನ್ನಡ ನುಡಿ ಕೇಳಿದೆ. ಸತತ ಎರಡು ತಿಂಗಳು ಯಾವ ಅನುದಾನಗಳೂ ಇಲ್ಲದೇ ನಿರಂತರ ಉತ್ಕೃಷ್ಟ ಗುಣಮಟ್ಟದ ಸಾಂಸ್ಕೃತಿಕ ವೈವಿಧ್ಯ ಕಾರ್ಯಕ್ರಮ ಜನಸಹಭಾಗಿತ್ವದಿಂದಲೇ ನಡೆದಿರುವುದು ರಾಜ್ಯದಲ್ಲೇ ದಾಖಲೆ ಮತ್ತು ಮಾದರಿ. ಬಹುಶಃ ಯಾವ ಮಠದಲ್ಲೂ, ಯಾವ ಸಾಂಸ್ಕೃತಿಕ ಕೇಂದ್ರದಲ್ಲೂ ಈ ಥರ ನಡೆದುದು ಇಲ್ಲ ಎಂದವರು ಪ್ರಶಂಸಿಸಿದರು. ಅವರನ್ನು ಮಠದ ವತಿಯಿಂದ ಗೌರವಿಸಲಾಯಿತು.

ಚಾತುರ್ಮಾಸ ಸಮಿತಿ ಅಧ್ಯಕ್ಷ , ಸ್ವರ್ಣೋದ್ಯಮಿ ಜಿ.ಎಲ್. ಬಲರಾಮಾಚಾರ್ಯ ಉಪಸ್ಥಿತರಿದ್ದರು. ಶ್ರೀ ಸಚ್ಛಿದಾನಂದ ಭಾರತೀ ಶ್ರೀಪಾದಂಗಳವರು ಚಾತುರ್ಮಾಸವನ್ನೊಂದು ಮಹೋತ್ಸವ ಮಾಡಿದ ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಕಲಾವಲಯದವರಿಗೆಲ್ಲ ಕೃತಜ್ಞತೆ ಸಲ್ಲಿಸಿ, ಚಾತುರ್ಮಾಸದ ಮೂಲಕ ಶ್ರೀಮಠ ಮತ್ತು ಸಮಾಜ ಒಂದಾಗಿ ಬೆರೆಯಬೇಕು ಎಂದರು.
ಚಕ್ರಪಾಣಿ ದೇವಪೂಜಿತ್ತಾಯ ಆರಿಕ್ಕಾಡಿ ಬಳಗದವರಿಂದ ವೈದಿಕ ಪ್ರಾರ್ಥನೆ ನಡೆಯಿತು. ಸಂಗೀತಜ್ಞ ಬಳ್ಳಪದವು ಯೋಗೀಶ ಶರ್ಮ ಪ್ರಾರ್ಥನೆ ಹಾಡಿದರು. ಹಿರಣ್ಯ ವೆಂಕಟೇಶ ಭಟ್ ಕಾರ್ಯಕ್ರಮ ನಿರೂಪಿಸಿದರು. ಸೂರ್ಯ ಭಟ್ ಎಡನೀರು ಸನ್ಮಾನ ಪತ್ರ ವಾಚಿಸಿದರು. ಕೆಯ್ಯೂರು ನಾರಾಯಣ ಭಟ್ ಪ್ರಾಸ್ತಾವಿಕ ಮಾತನಾಡಿದರು. ಮಠದ ಮೇನೇಜರ್ ರಾಜೇಂದ್ರ ಕಲ್ಲೂರಾಯ ವಂದಿಸಿದರು.

ಬೆಳಿಗ್ಗೆ ಮೃತ್ತಿಕಾ ವಿಸರ್ಜನೆಯೊಂದಿಗೆ ಶ್ರೀಗಳವರ ಸೀಮೋಲ್ಲಂಘನೆ ನಡೆಯಿತು. ಬಳಿಕ 60ದಿನಗಳಲ್ಲಿ 75 ಭಜನಾ ಮಂಡಳಿಗಳು ಪಾಲ್ಗೊಂಡ ಅಖಂಡ ಸಂಕೀರ್ತನೋತ್ಸವಕ್ಕೆ ಸಮಾಪ್ತಿಯಾಯಿತು. ಸಂಕೀರ್ತನೋತ್ಸವದ ಸಮಾರೋಪ ಸಭೆಯಲ್ಲಿ ಕನ್ಯಾಡಿ ಶ್ರೀರಾಮ ಕ್ಷೇತ್ರದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನವಿತ್ತರು. ಮಾಜಿ ಶಾಸಕ ಕೆ. ಕುಂಞಿರಾಮನ್ ನೇತೃತ್ವದಲ್ಲಿ ಬಳಿಕ ಪೂರಕ್ಕಳಿ ನಡೆಯಿತು. ಸಂಜೆ 5ರಿಂದ ಇಂದಿರಾ ಶರ್ಮ ಬೆಂಗಳೂರು, ಮೇಧಾ ಮಂಜುನಾಥ್ ಬೆಂಗಳೂರು ಬಳಗದ ಸಂಗೀತ ಕಛೇರಿ, ರಾತ್ರಿ ಶಬರಿಮಲೆ ಹರಿವರಾಸನಂ ಪ್ರಶಸ್ತಿ ಪುರಸ್ಕೃತ ಗಾಯಕ ವೀರಮಣಿ ಬಳಗದ ಭಕ್ತಿಗಾನ ಸಂಧ್ಯಾದೊಂದಿಗೆ ಚಾತುರ್ಮಾಸಕದ ಮಂಗಲೋತ್ಸವ ನಡೆಯಿತು.

 

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00