ಕಣಿಪುರ ಸುದ್ದಿಜಾಲ(ಸೆ.18)
ಒನ್ ನೇಷನ್ ಒನ್ ಎಲೆಕ್ಷನ್ (ದೇಶಕ್ಕೊಂದೇ ಚುನಾವಣೆ) ಕುರಿತು ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ನೇತೃತ್ವದ ಸಮಿತಿಯ ಪ್ರಸ್ತಾವನೆಗೆ ಕೇಂದ್ರ ಸಚಿವ ಸಂಪುಟ ಬುಧವಾರ (ಸೆ.18 ) ಅನುಮೋದನೆ ನೀಡಿದೆ. ಮಾಜಿ ರಾಷ್ಟ್ರಪತಿ ನೇತೃತ್ವದ ಸಮಿತಿಯು ಮಾರ್ಚ್ 2024 ರಲ್ಲಿ ಒಂದು ರಾಷ್ಟ್ರ ಒಂದು ಚುನಾವಣೆಗೆ ಸಂಬಂಧಿಸಿದಂತೆ ತನ್ನ ವರದಿಯನ್ನು ಸಲ್ಲಿಸಿತ್ತು. ಇದೀಗ ಈ ವಿಚಾರವಾಗಿ ದೇಶದಲ್ಲಿ ರಾಜಕೀಯ ವಿವಾದದ ಬಿಸಿ ಏರಿದೆ. ಭಿನ್ನಾಭಿಪ್ರಾಯಗಳ ವಿರೋಧವನ್ನೂ ಮೂಡಿಸಿದೆ.
ಇದು ದೇಶದ ಸಮಕಾಲೀನ
ಸಮಸ್ಯೆಗಳಿಂದ ಜನ ಗಮನವನ್ನು ಬೇರೆಡೆಗೆ ಸೆಳೆಯುವ ನಿರ್ಧಾರ ಮತ್ತು ಕೇಂದ್ರದಲ್ಲಿ ಬಿಜೆಪಿ ಸಾರಥ್ಯದ ಸರಕಾರದ ಝಂಡಾ ಊರುವ ತಂತ್ರ ಎಂದು ವಿಪಕ್ಷ ಬಳಗ ಆರೋಪಿಸಿವೆ.
ಚಳಿಗಾಲದ ಅಧಿವೇಶನದಲ್ಲಿ ಕೇಂದ್ರ ಸರ್ಕಾರವು ‘ಒಂದು ರಾಷ್ಟ್ರ ಒಂದು ಚುನಾವಣೆ’ ಮಸೂದೆಯನ್ನು ಸಂಸತ್ತಿನಲ್ಲಿ ಅಂಗೀಕರಿಸುತ್ತದೆ, ನಂತರ ಅದು ಕಾನೂನಾಗಿ ಪರಿಣಮಿಸುತ್ತದೆ. ಮಾಜಿ ರಾಷ್ಟ್ರಪತಿ ನೇತೃತ್ವದ ಸಮಿತಿಯು ಒಂದು ರಾಷ್ಟ್ರ ಒಂದು ಚುನಾವಣೆಗೆ ಸಂಬಂಧಿಸಿದಂತೆ ದೇಶದ 62 ರಾಜಕೀಯ ಪಕ್ಷಗಳನ್ನು ಸಂಪರ್ಕಿಸಿದ್ದು, ಅವುಗಳಲ್ಲಿ 32 ಪಕ್ಷಗಳ ಬೆಂಬಲವನ್ನು ಪಡೆದುಕೊಂಡಿದೆ. ಇದರಲ್ಲಿ 15 ಪಕ್ಷಗಳು ಒಂದು ರಾಷ್ಟ್ರೀಯ ಒಂದು ಚುನಾವಣೆಯನ್ನು ಬೆಂಬಲಿಸಲಿಲ್ಲ ಮತ್ತು 15 ಪಕ್ಷಗಳು ಯಾವುದೇ ಉತ್ತರವನ್ನು ನೀಡಲಿಲ್ಲ.
ದೇಶದಲ್ಲಿ ಮೂರ್ನಾಲ್ಕು ತಿಂಗಳು ಮಾತ್ರ ಚುನಾವಣೆ ನಡೆಯಲಿ ಎಂದು ಪ್ರಧಾನಿ ಹೇಳಿದ್ದರು. ವರ್ಷವಿಡೀ ರಾಜಕೀಯ ಇರಬಾರದು. ಏಕಕಾಲದಲ್ಲಿ ಚುನಾವಣೆ ನಡೆಸುವುದರಿಂದ ದೇಶದ ಸಂಪನ್ಮೂಲಗಳು ಉಳಿತಾಯವಾಗುತ್ತದೆ. ಅದೇ ಸಮಯದಲ್ಲಿ ಕೆಂಪು ಕೋಟೆಯ ಆವರಣದಿಂದ ಪ್ರಧಾನಿ ಮೋದಿ ಅವರು ‘‘ದೇಶವು ಒಂದು ರಾಷ್ಟ್ರ, ಒಂದು ಚುನಾವಣೆಗೆ ಮುಂದೆ ಬರಬೇಕು’’ ಎಂದು ಹೇಳಿದ್ದರು.
ಈಗ ಒನ್ ನೇಷನ್ ಒನ್ ಎಲೆಕ್ಷನ್ ( ದೇಶಕ್ಕೊಂದೇ ಚುನಾವಣೆ) ವಿಚಾರವಾಗಿ ದೇಶದದಲ್ಲಿ ರಾಜಕೀಯ ಬಿಸಿ ಹೆಚ್ಚಾಗಿದೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ‘ಒನ್ ನೇಷನ್ ಒನ್ ಎಲೆಕ್ಷನ್’ ಪದ್ಧತಿ ಪ್ರಾಯೋಗಿಕವಾಗಿಲ್ಲ, ಚುನಾವಣೆ ವೇಳೆ ಬಿಜೆಪಿ ಆ ಮೂಲಕ ನೈಜ ಸಮಸ್ಯೆಗಳಿಂದ ಗಮನ ಬೇರೆಡೆ ಸೆಳೆಯಲು ಯತ್ನಿಸುತ್ತಿದೆ. ಒಂದೊಂದು ರಾಜ್ಯವೂ ಅಲ್ಲಿನ ಪ್ರಾದೇಶಿಕ ವಿಷಯದಲ್ಲಿ ರಾಜಕೀಯ ಮಾಡಿ, ಮತದಾನ ಮಾಡಬೇಕು ಎಂದು ಅವರು ಹೇಳಿದ್ದಾರೆ.
ವರದಿಯಲ್ಲಿ ಇರುವ ಶಿಫಾರಸುಗಳು ಯಾವುದು ?
ಈ ವರದಿಯಲ್ಲಿ ಮೊದಲ ಹಂತದಲ್ಲಿ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕಕಾಲಕ್ಕೆ ಚುನಾವಣೆ ನಡೆಸಬೇಕು ಎಂದು ಹೇಳಲಾಗಿದೆ. ಲೋಕಸಭೆ ಮತ್ತು ರಾಜ್ಯ ವಿಧಾನಸಭಾ ಚುನಾವಣೆಗಳು ಏಕಕಾಲದಲ್ಲಿ ಪೂರ್ಣಗೊಂಡ 100 ದಿನಗಳ ಒಳಗಾಗಿ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನೂ ನಡೆಸಬೇಕು ಎಂದು ಶಿಫಾರಸು ಮಾಡಲಾಗಿದೆ. ಇಡೀ ದೇಶದ ಮತದಾರರಿಗೆ ಒಂದೇ ಮತದಾರರ ಪಟ್ಟಿ ಇರಬೇಕು, ಎಲ್ಲರಿಗೂ ಸಾಮಾನ್ಯ ಮತದಾರರ ಚೀಟಿ ಇರಬೇಕು’ ಎಂದು ಸಮಿತಿಯ ಶಿಫಾರಸು ಹೇಳಿದೆ.
ರಾಜ್ಯ ಚುನಾವಣಾ ಅಧಿಕಾರಿಗಳೊಂದಿಗೆ ಸಮಾಲೋಚಿಸಿ ಭಾರತೀಯ ಚುನಾವಣಾ ಆಯೋಗದ ಪರವಾಗಿ ಸಾಮಾನ್ಯ ಮತದಾರರ ಪಟ್ಟಿ ಮತ್ತು ಮತದಾರರ ಗುರುತಿನ ಚೀಟಿಯನ್ನು ತಯಾರಿಸಲು ಸಮಿತಿಯು ಶಿಫಾರಸು ಮಾಡಿದೆ.