ಕಣಿಪುರ ಸುದ್ದಿಜಾಲ
ಬಡವರ ವಾಹನವೆಂದೇ ಪರಿಗಣಿತವಾದ ಆಟೋರಿಕ್ಷಾ ಗಳ ಪರ್ಮಿಟ್ ಪರಿಷ್ಕರಿಸಲು ಕೇರಳ ಸಾರಿಗೆ ಇಲಾಖೆ ಪರಿಗಣಿಸಿದೆ. ಆಟೋಗಳಿಗೆ ಮಾಲಕರ ಆಯ್ಕೆಯಂತೆ ನಾಲ್ಕು ರೀತಿಯ ಪರ್ಮಿಟ್ ನೀಡುವುದು ನೂತನ ಯೋಜನೆಯಾಗಿದೆ. ರಾಜ್ಯ, ಅಂತರ್ ಜಿಲ್ಲಾ ಮತ್ತು ಜಿಲ್ಲಾ ಮಟ್ಟ ಹಾಗೂ ಸಿಟಿ ಓನ್ಲಿ ಪರ್ಮಿಟ್ ನೀಡುವ ಮೂಲಕ ಸಮಗ್ರ ಆಟೋರಿಕ್ಷಾ ಕಾನೂನು ಪರಿಷ್ಕರಣೆ ಮಾಡಲು ಸಾರಿಗೆ ಇಲಾಖೆ ಮುಂದಾಗಿದೆ. ಈ ಕುರಿತು ಮುಂದಿನ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ಅಂತಿಮ ನಿರ್ಧಾರದ ಘೋಷಣೆಯಾಗಲಿದೆ.
ಆಟೋರಿಕ್ಷಾಗಳಿಗೆ ಈ ವರೆಗೆ ಕೇರಳದಲ್ಲಿ ರಾಜ್ಯ ವ್ಯಾಪಕ ಸಂಚರಿಸಬಹುದಾದ ಪರ್ಮಿಟ್ ಇಲ್ಲ. ಆದರೆ ಇತ್ತೀಚಿಗೆ ಸರಕಾರ,ಪರ್ಮಿಟ್ ಪರಿಷ್ಕರಿಸಿ ಸ್ಟೇಟ್ ಪರ್ಮಿಟ್ ನೀಡಲು ನಿರ್ಧರಿಸಿತ್ತು. ಇದಕ್ಕೆ ಭಾರೀ ವಿರೋಧಗಳುಂಟಾದ ಹಿನ್ನೆಲೆಯಲ್ಲಿ ಈಗ ಪರ್ಮಿಟ್ ಗಳಲ್ಲೇ 4 ಆಯ್ಕೆಗಳನ್ನಿಟ್ಟು, ಕಾನೂನು ಪರಿಷ್ಕರಿಸಿ ಅದರಂತೆ ಪರ್ಮಿಟ್ ಪಡೆಯುವ ಸೌಲಭ್ಯವನ್ನೊದಗಿಸಲು ಸಾರಿಗೆ ಇಲಾಖೆ ಮುಂದಾಗಿದೆ.
ಇದರಂತೆ ಒಂದೊಂದು ಪರ್ಮಿಟ್ ನ ವಾಹನಗಳು ಮುಂದಕ್ಕೆ ಒಂದೊಂದು ಬಣ್ಣವನ್ನು ಹೊಂದಬೇಕಾಗುತ್ತದೆ. ರಿಕ್ಷಾ ನೋಡಿದ ಕೂಡಲೇ ಇದು ಯಾವ ಪರ್ಮಿಟ್ ಹೊಂದಿದ ವಾಹನವೆಂದು ಜನರಿಗೆ ಗೊತ್ತಾಗುವಂತಿರಬೇಕೆಂಬುದೇ ಸಾರಿಗೆ ಸಚಿವರ ಉದ್ದೇಶ.
ಪರ್ಮಿಟ್ ಆಧಾರದಲ್ಲೇ ರಿಕ್ಷಾಗಳ ತೆರಿಗೆಯೂ ನಿರ್ಣಯವಾಗಲಿದೆ. ಸ್ಟೇಟ್ ಪರ್ಮಿಟ್ ಪಡೆಯಬೇಕಿದ್ದರೆ ಸಾರಿಗೆ ಇಲಾಖೆ ಮುಂದಿಡುವ ಸುರಕ್ಷತಾ ಮಾನದಂಡಗಳು ಪಾಲಿಸಬೇಕು ಮತ್ತು ಹೆಚ್ಚುವರಿ ತೆರಿಗೆ ಪಾವತಿಸಬೇಕು. ಪರ್ಮಿಟ್ ಆಯ್ಕೆಯ ಅವಕಾಶವನ್ನು ಆಟೋ ಮಾಲಕರಿಗೆ ಕೊಟ್ಟಿರುವ ಸರಕಾರ ಈ ಮೂಲಕ ಆಟೋ ಸಂಚಾರದ ವಿಸ್ತರಣೆಯೊಂದಿಗೆ ಹೆಚ್ಚುವರಿ ತೆರಿಗೆ ಸಂಗ್ರಹಿಸುವ ಗುರಿಹೊಂದಿದೆ.
ಆಟೋರಿಕ್ಷಾಗಳು ಲಘುವಾಹನವಾಗಿದ್ದು, ಪ್ರಾದೇಶಿಕ ಸಂಚಾರಕ್ಕಷ್ಟೇ ಸೂಕ್ತ ಎಂಬುದರಿಂದ ಈ ವರೆಗೆ ಅದಕ್ಕೆ ರಾಜ್ಯವ್ಯಾಪಿ ಸಂಚಾರದ ಪರ್ಮಿಟ್ ನೀಡಿರಲಿಲ್ಲ. ಪ್ರಸ್ತುತ 4ನಮೂನೆಯ ಪರ್ಮಿಟ್ ನೀಡಿ ಕಾನೂನು ಪರಿಷ್ಕರಿಸುವುದರೊಂದಿಗೆ ಆಟೋ ಸಂಚಾರ ಇಡೀರಾಜ್ಯವಾಗಲಿದೆ. ಆಟೋದಲ್ಲೇ ಒಮ್ಮೆ ನಾಡು ಸುತ್ತಿ ಬರಬಹುದಾಗಿದೆ.