ಪ್ರಣವ್ ಫೌಂಡೇಶನ್ ಹಾಗೂ ಆರ್.ವಿ ಚಾರಿಟೇಬಲ್ ಟ್ರಸ್ಟ್ ಸಹಯೋಗದ ಪುಸ್ತಕ – 2024, ಉಚಿತ ಕಲಿಕಾ ಸಾಮಾಗ್ರಿ ವಿತರಣಾ ಕಾರ್ಯಕ್ರಮವು ಇತ್ತೀಚೆಗೆ ಕಾಸರಗೋಡು ಜಿಲ್ಲೆಯ ಎಡನೀರಿನ ಸ್ವಾಮೀಜೀಸ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಜರಗಿತು. ಈ ಕಾರ್ಯಕ್ರಮದಲ್ಲಿ ಶಾಲೆಯ 90 ಕ್ಕೂ ಅಧಿಕ ಮಕ್ಕಳಿಗೆ ಉಚಿತ ಕಲಿಕಾ ಸಾಮಾಗ್ರಿಗಳನ್ನು ವಿತರಿಸಲಾಯಿತು.
ಶ್ರೀಮಜ್ಜಗದ್ಗುರು ಶ್ರೀ ಶಂಕರಾಚಾರ್ಯ ಸಂಸ್ಥಾನ, ಎಡನೀರು ಮಠದ ಪೀಠಾಧಿಪತಿ ಶ್ರೀ ಸಚ್ಚಿದಾನಂದ ಭಾರತೀ ಮಹಾಸ್ವಾಮಿಗಳು ಕಾರ್ಯಕ್ರಮ ಉದ್ಘಾಟಿಸಿ, ಆಶೀರ್ವದಿಸಿ, ವಿದ್ಯೆ ಇಲ್ಲವಾದರೆ ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ಅನಾವರಣಗೊಳ್ಳಲು ಸಾಧ್ಯವಿಲ್ಲ. ಆದುದರಿಂದ ಮಕ್ಕಳು ಇದರ ಸಂಪೂರ್ಣ ಉಪಯೋಗ ಪಡೆದುಕೊಳ್ಳಬೇಕು ಎಂದು ನುಡಿದು, ಫೌಂಡೇಶನಿನ ಸಮಾಜಮುಖಿ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕಾಸರಗೋಡು ಜಿಲ್ಲೆಯ ನಿವೃತ್ತ ಡಿ.ಇ.ಒ ವೇಣುಗೋಪಾಲ್, ನಿವೃತ್ತ ಪ್ರಾಚಾರ್ಯ ಪ್ರೊ. ಪುರುಷೋತ್ತಮ ಪುಣಿಂಚತ್ತಾಯ, ಪ್ರಣವ್ ಫೌಂಡೇಶನ್‌ನ ಟ್ರಸ್ಟಿ ಗುರುರಂಜನ ಪುಣಿಂಚತ್ತಾಯ, ವಿಜಯರಾಜ್ ಪಿ ಮುಂತಾದವರು ಉಪಸ್ಥಿತರಿದ್ದರು.
ಶಾಲೆಯ ಮುಖ್ಯೋಪಾಧ್ಯಾಯಿನಿ ಜ್ಯೋತಿಲಕ್ಷ್ಮೀ ಭಟ್ ಸ್ವಾಗತಿಸಿದರೆ, ಚಂದ್ರಿಕಾ ಯಸ್ ವಂದಿಸಿದರು, ವೆಂಕಟಕೃಷ್ಣ ಕೆ ನಿರೂಪಿಸಿದರು.