ಪಾರ್ತಿಸುಬ್ಬ ಪ್ರಶಸ್ತಿ: ಓರ್ವ ಬಿಲ್ಲವನಿಗೆ ಸಿಕ್ಕಿದ ಖುಷಿಯಲ್ಲಿ ಸ್ವೀಕರಿಸುವೆ- ಬನ್ನಂಜೆ ಸಂಜೀವ ಸುವರ್ಣ

by Narayan Chambaltimar

Kanipura exclusive

 

ಯಕ್ಷಗಾನ ಕಲೆಗಾಗಿ ದುಡಿದ ಓರ್ವ ಬಿಲ್ಲವನ ಪ್ರಾಮಾಣಿಕ ದುಡಿತ ಗುರುತಿಸಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಪ್ರತಿಷ್ಟಿತ ಪಾರ್ತಿಸುಬ್ಬ ಪ್ರಶಸ್ತಿ ಘೋಷಿಸಿರುವುದರಲ್ಲಿ ಸಂತೋಷ ಮತ್ತು ಸಂಭ್ರಮಗಳಿವೆ. ಇದು ನಾನು ಬಯಸಿ, ಅಪೇಕ್ಷಿಸಿ ನಡೆದು ಪಡೆದ ಪ್ರಶಸ್ತಿಯಲ್ಲ. ಅಕಾಡೆಮಿ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟರ ಕಳಕಳಿಯ ಕಾಳಜಿಯ ಆಯ್ಕೆಯಿಂದಷ್ಟೇ ಒಲಿದಿದೆ. ಅವರಲ್ಲದಿದ್ದರೆ ನನ್ನಂತವನಿಗೆ ಅಕಾಡೆಮಿಯ ಅತ್ಯುನ್ನತ ಈ ಪ್ರಶಸ್ತಿ ಒಲಿಯುತ್ತಲೇ ಇರಲಿಲ್ಲ ಎಂದು ಯಕ್ಷಗಾನ ಗುರು ಬನ್ನಂಜೆ ಸಂಜೀವ ಸುವರ್ಣ ಹೇಳಿದರು.

“ಕಣಿಪುರ ಡಿಜಿಟಲ್ ಮೀಡಿಯ” ಜತೆ ಮಾತನಾಡಿದ ಅವರು ಯಕ್ಷಗಾನದಲ್ಲಿ ಪರಂಪರೆಯಿಂದಲೇ ಬಿಲ್ಲವ ಸಮಾಜವನ್ನು, ಸಮಾಜದ ಕಲಾವಿದರನ್ನು ಶೋಷಿಸಲಾಗಿದೆ. ಪ್ರತಿಭಾವಂತರನ್ನು ಮಾನ್ಯತೆ ನೀಡದೆ ತುಳಿಯಲಾಗಿದೆ. ಯೋಗ್ಯತೆ ಇದ್ದವರನ್ನೂ ಪರಿಗಣಿಸದೇ ಅವಮಾನಿಸಲಾಗಿದೆ. ಇದೇನೂ ಬ್ರಾಹ್ಮಣರು ಮಾಡಿದ್ದಲ್ಲ. ಆದರೆ ಪ್ರಚಾರ ಮಾತ್ರ ಹಾಗಾಯಿತು. ಕ್ಷೇತ್ರಾಡಳಿತ ನಿಭಾಯಿಸುತ್ತಿದ್ದ ಇತರೇ ವರ್ಗದವರು ಮಾಡಿದ ದೌರ್ಜನ್ಯಗಳಿಗೆ ನಾನೂ ಕೂಡಾ ಬಲಿಪಶು. ಆದ್ದರಿಂದಲೇ ಹೇಳಿದ್ದು ಈಗ ಈ ಬಿಲ್ಲವನಿಗೆ ಪ್ರಶಸ್ತಿ ಬಂದುದರಲ್ಲಿ ಸಂತೃಪ್ತಿ ಇದೆ. ಅಪೇಕ್ಷಿಸದೇ ಅಧ್ಯಕ್ಷರ ಆಯ್ಕೆಯಂತೆ ಪ್ರಶಸ್ತಿ ಪಡೆಯುವುದರಲ್ಲಿ ಸಾರ್ಥಕ್ಯ, ಸಂಭ್ರಮ ಕಾಣುತ್ತೇನೆ. ಇದು ಬಿಲ್ಲವನಿಗೆ ಸಿಕ್ಕಿದ ಖುಷಿಯಲ್ಲಿ ಪ್ರಶಸ್ತಿ ಸ್ವೀಕರಿಸುತ್ತೇನೆಂದು ಗುರು ಬನ್ನಂಜೆ ಸಂಜೀವ ಸುವರ್ಣರು ಹೇಳಿದರು.

ಯಕ್ಷಗಾನಕ್ಕೆ ನೈಜ ಕೊಡುಗೆ ನೀಡಿದ ಅನೇಕ ಸಾಧಕರು ನಮ್ಮ ನಡುವಲ್ಲಿದ್ದಾರೆ. ಅವರನ್ನು ಕಡೆಗಣಿಸಿ ಈ ವರೆಗೆ ಅನೇಕ ಅನರ್ಹರಿಗೂ ಪ್ರಶಸ್ತಿ ಸಂದಿದೆ. ಯೋಗ್ಯತೆಗೆ ಪ್ರಶಸ್ತಿಗಳು, ಅಂಗೀಕಾರಗಳು ಅಪರೂಪ. ನಿತ್ಯ ರಂಗಸ್ಥಳದಲ್ಲಿ ಕುಣಿಯುವ ವೃತ್ತಿಪರ ಕಲಾವಿದರಿಗಿಂತ ಭಿನ್ನವಾಗಿ ಕಲೆಗೆ ಕಾಳಜಿಯ ಕೊಡುಗೆ ಸಲ್ಲಿಸಿದ ಪ್ರಾಮಾಣಿಕರನೇಕರಿದ್ದಾರೆ. ಅಂತವರನ್ನು ಗುರುತಿಸಿ ಪ್ರಶಸ್ತಿ ನೀಡುವ ಪರಿಪಾಠ ಬೆಳೆಯಬೇಕೆಂದು ಗುರು ಸಂಜೀವ ಸುವರ್ಣರು ನುಡಿದರು. ಉಡುಪಿ ಯಕ್ಷಗಾನ ಕೇಂದ್ರದಲ್ಲಿ ಸುದೀರ್ಘ ಕಾಲ ಗುರುಗಳಾಗಿದ್ದ ಸಂಜೀವ ಸುವರ್ಣರು ಬಡಗುತಿಟ್ಟು ಯಕ್ಷಗಾನದ ಸರ್ವಾಂಗೀಣತೆಯ ಬಗ್ಗೆ ಇದಮಿತ್ಥಂ ಮಾತಾಡಬಲ್ಲ, ಮಾತಾಡಿದ್ದನ್ನೆಲ್ಲ ಪ್ರದರ್ಶಿಸಬಲ್ಲ ಚತುರ ಕಲಾಜ್ಞಾನಿ. ರಾಷ್ಟ್ರೀಯ ರಂಗಭೂಮಿ ಕಲಾವಿದರಿಗೂ ಕರಾವಳಿಯ ಯಕ್ಷಗಾನ ಕುಣಿತ ಕಲಿಸಿದವರು. ಅವರಿಗೆ ಪಾರ್ತಿಸುಬ್ಬ ಮಹಾಕವಿಯ ಹೆಸರಲ್ಲಿರುವ 1ಲಕ್ಷ ರೂ ನಗದು ಹೊಂದಿದ ಮೇರು ಪ್ರಶಸ್ತಿ ಘೋಷಣೆಯಾಗಿರುವುದು ಬಡಗುತಿಟ್ಟು ಯಕ್ಷವಲಯದಲ್ಲಿ ಸಂಭ್ರಮ ಮೂಡಿಸಿದೆ.

ಮಂಗಳೂರಲ್ಲಿ ಪ್ರಶಸ್ತಿ ಪ್ರದಾನ
—————————-
2023ನೇ ಸಾಲಿನ ಪಾರ್ತಿಸುಬ್ಬ ಪ್ರಶಸ್ತಿ ಸಹಿತ ಯಕ್ಷಗಾನ ಅಕಾಡೆಮಿಯ ಪ್ರಶಸ್ತಿಗಳನ್ನು ನವೆಂಬರ್ ತಿಂಗಳ ಮಧ್ಯಾವಧಿ ಮಂಗಳೂರು ಪುರಭವನದಲ್ಲಿ ಪ್ರದಾನ ಮಾಡಲಾಗುವುದೆಂದು ತಿಳಿಸಲಾಗಿದೆ.
ಸಂಸ್ಕೃತಿ ಇಲಾಖೆ ಸಚಿವರು, ಉಸ್ತುವಾರಿ ಸಚಿವರು, ಶಾಸಕರ ದಿನಾಂಕ ಹೊಂದಾಣಿಕೆ ಬಳಿಕ ಪ್ರಶಸ್ತಿ ಪ್ರದಾನ ಸಮಾದಂಭದ ದಿನ ಘೋಷಣೆಯಾಗಲಿದೆ.

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00