ಕಣಿಪುರ ಸುದ್ದಿಜಾಲ
ಮಂಗಳೂರಿನ ಕನ್ನಡ ಸಾಹಿತ್ಯ, ಚಿಂತನಗಳಿಗೆ ವೈಚಾರಿಕತೆಯ ಪ್ರಬುದ್ಧತೆಯನ್ನು ಕೊಟ್ಟ, ಕರಾವಳಿಯ ಮಮತೆಯ ಅಮ್ಮ, ಖ್ಯಾತ ಸಾಹಿತಿ ಎಂ. ಮನೋರಮಾ ಭಟ್(92) ಇನ್ನಿಲ್ಲ. ಸೆ.15ರಂದು ಅಪರಾಹ್ನ 2.15ಕ್ಕೆ ಅವರು ವಯೋಸಹಜ ಅಗಲಿದರು. ಹೋರಾಟ, ಚಿಂತನೆ, ಬರಹ ಮತ್ತು ಪ್ರಬುದ್ಧತೆಯ ನಡೆ-ನುಡಿಗಳಿಂದ ಮುಳಿಯ ಕುಟುಂಬವನ್ನು ಬೆಳಗಿಸಿದ ಮನೋರಮ ಭಟ್ಟರ ನಿರ್ಗಮನ ಒಬ್ಬಾಕೆ ಹೋರಾಟಗಾರ್ತಿ ಮಹಿಳೆಯ ಯುಗಾಂತ್ಯ.
ಮನೋರಮಾ ಎಂ.ಭಟ್ ಮೂಲತಃ ಕಾಸರಗೋಡಿನ ನೀರ್ಚಾಲಿನವರು. ನೀರ್ಚಾಲು ಮ.ಸಂ. ಕಾಲೇಜು ಹೈಸ್ಕೂಲಿನಲ್ಲಿ ಅಧ್ಯಾಪಕರಾಗಿದ್ದ ಹಿರಿಯ ವಿದ್ವಾಂಸ ಕನ್ನೆಪ್ಪಾಡಿ ಪರಮೇಶ್ವರ ಶಾಸ್ತ್ರಿಗಳ ಪುತ್ರಿ. ಖ್ಯಾತ ವಕೀಲ, ಯಕ್ಷಗಾನ ಕಲಾವಿದ ಮುಳಿಯ ಮಹಾಬಲ ಭಟ್ಟರ ಪತ್ನಿಯಾಗಿ ಮಂಗಳೂರು ನಗರ ಸೇರಿದ ಬಳಿಕ ಅವರ ಬದುಕಿನ ಅಧ್ಯಾಯದ ಪುಟ ಅರಳಿದ್ದೇ ವಿಭಿನ್ನವಾದ ಮನುಜಮುಖಿಯಾಗಿ…
ಕರಾವಳಿಯ ಕಲಾ,ಸಾಹಿತ್ಯ ಪರಂಪರೆಯ ಬೃಹನ್ಮುಖವಾದ ಪಂಡಿತ ಮುಳಿಯ ತಿಮ್ಮಪ್ಪಯ್ಯನವರ ಸೊಸೆಯಾಗಿ ಕಾಲಿಟ್ಟು, ಆ ಕುಟುಂಬದ ಸಾಂಸ್ಕೃತಿಕ ವರ್ಚಸ್ಸಿನ ಉನ್ನತಿಗೆ ಮನೋರಮಾ ಎಂ. ಭಟ್ಟರದ್ದು ಅನನ್ಯ, ಉಲ್ಲೇಖನೀಯ ಕೊಡುಗೆ.
ಲೇಖಕಿ, ಚಿಂತಕಿ, ಆ ಕಾಲದ ಪ್ರಧಾನ ಮಾಧ್ಯಮವಾದ ಆಕಾಶವಾಣಿಯ ಕಲಾವಿದೆ ಮತ್ತು ಹೋರಾಟಗಾರ್ತಿಯಾಗಿ ಐದು ದಶಕಗಳ ಹಿಂದೆಯೇ ಹೆಜ್ಜೆ ಗುರುತು ಸ್ಥಾಪಿಸಿದ ಮನೋರಮಾ ಎಂ. ಭಟ್ಟರು ಕರಾವಳಿ ಲೇಖಕಿ, ವಾಚಕಿಯರ ಸಂಘದ ಸ್ಥಾಪಕರಲ್ಲೊಬ್ಬರು. ಬಳಿಕ ಅಧ್ಯಕ್ಷೆಯೂ ಹೌದು. ಜತೆಗೆ ಮಹಿಳಾ ಲೇಖಕಿಯರಲ್ಲಿ ಪ್ರಗತಿಪರತೆ, ಸೃಜನಶೀಲತೆ ಹಾಗೂ ಸಂವೇದಾನಾತ್ಮಕ ಬರಹಗಳಿಗೆ ದಾರಿ ದೀವಿಗೆ ಹಿಡಿದವರು.
ಮಹಿಳೆಯರು ಎಳವೆಯಲ್ಲೇ ವಿಧವೆಯರಾದರೆ ಮಾಂಗಲ್ಯ ಕಿತ್ತೆಸೆಯಬೇಕೆಂಬ ಹಿಂದು ಸಮಾಜದ ಸಾಮಾಜಿಕ ನಂಬಿಕೆಯ ವಿರುದ್ಧ ವೈಚಾರಿಕ ಹೋರಾಟ ನಡೆಸಿದ ಕ್ರಾಂತಿಕಾರಿ ಮಹಿಳೆ ಅವರು. ಮಹಿಳೆಯರು ಶಿಕ್ಷಣ ಪಡೆದು ಬೆಳೆದು ಸ್ವಾವಲಂಬಿಯಾಗಬೇಕೆಂಬುದು ಸ್ವಾತಂತ್ರ್ಯ ಪೂರ್ವದಲ್ಲೇ ಅವರ ಧ್ವನಿ. ಇದೇ ಆಶಯದ ಚಿಂತನ ಬರಹ”ಹೆಣ್ಣಿಗೇಕೆ ಶಿಕ್ಷಣ”?, ಸ್ವಯಂವರ(ಕಾದಂಬರಿ),
ಆಯ್ಕೆ(ಬಾನುಲಿ ನಾಟಕ), ನಿರ್ಧಾರ, ಹೊಸದಾರಿ, ನಾನು ಮತ್ತು ನೀನು ಸಹಿತ ಅನೇಕ ಸಣ್ಣ ಕತೆ,ಕಾವ್ಯ, ವೈಚಾರಿಕ ಲೇಖನ, ಅಂಕಣಗಳಿಂದ ಕಲಾ ಸಾಹಿತ್ಯ ವಲಯದಲ್ಲಿ ಮುಂಚೂಣಿಯಲ್ಲಿದ್ದು ಕೆಲಸ ಮಾಡಿದ ಅವರು ಮಂಗಳೂರಿನಲ್ಲಿ ಕನ್ನಡದ ಮಹಿಳಾ ಲೇಖಕಿಯರು ಸಂಘಟಿತರಾಗುವಲ್ಲಿ ಸಕ್ರಿಯರಾಗಿ ದುಡಿದವರು.
ತನ್ನ ಮಾವ ಮುಳಿಯ ತಿಮ್ಮಪ್ಪಯ್ಯ ನವರ ಶತಮಾನೋತ್ಸವ ಸಮಾರಂಭ ತನ್ನದೇ ನೇತೃತ್ವದಲ್ಲಿ ಆಯೋಜಿಸಿ, ಆ ಬಳಿಕ ಅವರ ಹೆಸರಲ್ಲಿ ಪ್ರಶಸ್ತಿ ಸ್ಥಾಪಿಸಿ ,ಇತ್ತೀಚಿನವರೆಗೂ ಕಾರ್ಯಕ್ರಮ ಸಂಘಟಿಸಿ, ಪ್ರಶಸ್ತಿ ನೀಡುತ್ತಲೇ ಬಂದ ಅವರು ಕ.ಸಾ.ಪ ಮಂಗಳೂರು ತಾಲೂಕು ಸಾಹಿತ್ಯ ಸಮ್ಮೇಳನಾಧ್ಯಕ್ಷೆಯಾಗಿದ್ದರು.
ಹಲವು ವರ್ಷಗಳ ಕಾಲ ಮಂಗಳೂರಿನ ಉರ್ವ ಸ್ಟೋರಿನಲ್ಲಿ ವಾಸವಾಗಿದ್ದ ಅವರು ಬದುಕಿನ ಇಳಿಸಂಜೆಯಲ್ಲಿ ಆಶ್ರಮವಾಸಿಯಾಗಿದ್ದರು.
ಅನೇಕರಿಗೆ ಆಶ್ರಯದ ಅಮ್ಮ, ಇನ್ನನೇಕರಿಗೆ ಸ್ಪೂರ್ತಿ ಚೈತನ್ಯದ ನಾಯಕಿ, ಉಳಿದವರಿಗೆ ಒಲವಿನ ಸೋದರಿಯಾಗಿ ಮನುಜಮುಖಿಯಾಗಿ ಬದುಕಿದ್ದ ಅವರು ವಿದ್ವಾಂಸ ಮುಳಿಯ ತಿಮ್ಮಪ್ಪಯ್ಯನವರ ಎರಡನೇ ಸೊಸೆ.
ಅಮೇರಿಕಾದಲ್ಲಿ ನೆಲೆಗೊಂಡ ಜಯರಾಮ್ ಭಟ್, ಬೆಂಗಳೂರಲ್ಲಿರುವ ಛಾಯಾಚಿತ್ರ ತಂತ್ರಜ್ಞ ಮಹೇಶ್ ಎಂ. ಭಟ್ಟರ ಅಮ್ಮ. ಖ್ಯಾತ ಒಡಿಸ್ಸಿನರ್ತಕಿ ಬಿಜಾಯಿನಿ ಸತ್ಪತಿ ಇವರಿಗೆ ಸೊಸೆ. ಹಿಂದೆ “ನವಭಾರತ”ದಲ್ಲಿ ಮತ್ತು ಅನಂತರ ‘ಉದಯವಾಣಿ’ಯಲ್ಲಿ “ಶಿಂಗಣ್ಣ” ಕಾಲಂ ಬರೆಯುತ್ತಿದ್ದ ರಘು ಅವರ ಸಹೋದರಿ. ಇವರ ಅಗಲುವಿಕೆಗೆ “ಕಣಿಪುರ”.ಕಂಬನಿ ಮಿಡಿದಿದೆ.