ಕಣಿಪುರ ಸುದ್ದಿಜಾಲ
ಕರ್ನಾಟಕ ರಾಜ್ಯದ ಯಾವುದೇ ವಿದ್ಯಾರ್ಥಿ ನಿಲಯಗಳಲ್ಲಿ ಹೊರನಾಡು, ಗಡಿನಾಡಿನ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ನಿರ್ಬಂಧ ಹೇರದೇ, ಮುಕ್ತ ಅವಕಾಶ ಕಲ್ಪಿಸಬೇಕೆಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಕರ್ನಾಟಕ ಸರಕಾರವನ್ನು ಒತ್ತಾಯಿಸಿದ್ದಾರೆ.
ದೇಶದ ಯಾವುದೇ ಪ್ರದೇಶದಲ್ಲಿ 1ನೇ ತರಗತಿಯಿಂದ 10ನೇ ತರಗತಿ ತನಕ ಕನ್ನಡ ಮಾಧ್ಯಮಗಳಲ್ಲಿ ಕಲಿತ ವಿದ್ಯಾರ್ಥಿಗಳಿಗೆ ಕರ್ನಾಟಕ ರಾಜ್ಯದಲ್ಲಿ ಉನ್ನತ ವ್ಯಾಸಂಗಕ್ಕಾಗಿ ಕರ್ನಾಟಕ ಸರಕಾರವು ಒದಗಿಸಿರುವ ಮೀಸಲಾತಿ ಸೌಲಭ್ಯ ಗಡಿನಾಡು/ಹೊರನಾಡ ಕನ್ನಡಿಗರಿಗೂ ಒದಗಬೇಕೆಂದು ಅವರು ಸರಕಾರವನ್ನು ವಿನಂತಿಸಿದ್ದಾರೆ.
ಕರ್ನಾಟಕದಲ್ಲಿ ಉನ್ನತ ವ್ಯಾಸಂಗ ಬಯಸುವ ಗಡಿನಾಡ, ಹೊರನಾಡ ಕನ್ನಡಿಗರು ಅನೇಕರಿದ್ದಾರೆ. ಅವರಿಗೆ ವಿವಿಧ ಇಲಾಖೆಗಳ ವಿದ್ಯಾರ್ಥಿ ವಸತಿ ನಿಲಯಗಳಲ್ಲಿ ಯಾವುದೇ ನಿರ್ಬಂಧಗಳಿಲ್ಲದೇ ಅವಕಾಶಗಳನ್ನು ಮುಕ್ತ ಒದಗಿಸಬೇಕು. ಕನ್ನಡ ಮಾಧ್ಯಮದಲ್ಲೇ ಕಲಿತ ವಿದ್ಯಾರ್ಥಿ ಎಲ್ಲಿದ್ದರೂ ಹೊರನಾಡು, ಗಡಿನಾಡು ಪರಿಗಣನೆ ಸಲ್ಲದು ಎಂದು ಪ್ರಾಧಿಕಾರ ಅಧ್ಯಕ್ಷ ಬಿಳಿಮಲೆ ಸರಕಾರವನ್ನು ಒತ್ತಾಯಿಸಿದ್ದಾರೆ. ಈ ಕುರಿತು ಪ್ರಾಧಿಕಾರದಿಂದ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್, ಶಾಧಾ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಸಮಾಜ ಕಲ್ಯಾಣ ಸಚಿವ ಡಾ. ಎಚ್. ಸಿ. ಮಹದೇವಪ್ಪ ಅವರಿಗೆ ಮನವಿ ಸಲ್ಲಿಸಿ ವಿನಂತಿಸಲಾಗಿದೆ
ಕರ್ನಾಟಕದ ಗಡಿ ಪ್ರದೇಶ ಕಾಸರಗೋಡು ಸಹಿತ ಹೊರನಾಡು ಮತ್ತು ಗಡಿನಾಡಿನಲ್ಲಿ ಕನ್ನಡ ಮಾಧ್ಯಮದಲ್ಲೇ ಪ್ರಾಥಮಿಕ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಉನ್ನತ ಶೈಕ್ಷಣಿಕ ಸೌಲಭ್ಯಕ್ಕಾಗಿ ಕರ್ನಾಟಕವನ್ನು ಆಶ್ರಯಿಸುವಾಗ ಅನ್ಯರಾಜ್ಯದ ಹೆಸರಲ್ಲಿ ಹಾಸ್ಟೆಲ್ ಪ್ರವೇಶಾತಿಯಿಂದ ವಂಚಿತರಾಗುತ್ತಿದ್ದರು. ಕನ್ನಡ ಮಾಧ್ಯಮದಲ್ಲೇ ಶಿಕ್ಷಣ ಪಡೆದ ಯಾರಿಗೇ ಆದರೂ ಕನ್ನಡನಾಡಿನ ಹಾಸ್ಟೆಲ್ ಗಳಲ್ಲಿ ಪ್ರವೇಶಾತಿ ತಡೆಯುವ ನಿರ್ಬಂಧ ಸಲ್ಲದೆಂದು ಪ್ರಾಧಿಕಾರ ಸರಕಾರವನ್ನು ವಿನಂತಿಸಿದೆ.