ಓಣಂ ಸಂಭ್ರಮ: ಇಲ್ಲಿದೆ ವರ್ಷಂಪ್ರತಿ ವನವಾಸಿ ಮಂಗಗಳಿಗೂ ಓಣಂ ಔತಣ

ಕಾಸರಗೋಡು ಜಿಲ್ಲೆಯಲ್ಲೊಂದು ಅಪೂರ್ವ ವಿದ್ಯಾಮಾನ!

by Narayan Chambaltimar

kanipura special story
By
ಎಂ. ನಾ. ಚಂಬಲ್ತಿಮಾರ್

ಓಣಂ..ಎಂದರೆ ಕೇರಳದಲ್ಲಿ ಜಾತ್ಯಾತೀತ ಜನಮಾನಸದ ಮಾನವ ಮೈತ್ರಿಯ ಹಬ್ಬ. ಇದು ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಪಾಲ್ಗೊಳ್ಳುವ ದೇಶಕ್ಕೇ ಮಾದರಿಯಾದ ಅನನ್ಯ ನಾಡಹಬ್ಬ. ಈ ಹಬ್ಬದಲ್ಲಿ ಕಾಡ ಕೋಡಗವೆಂದೆನಿಸಿಕೊಂಡ ಕಾಡಿನ ಮಂಗಗಳಿಗೂ ಸಮೃದ್ಧ ಔತಣ ಉಣಿಸುವ ಅಪೂರ್ವ ಹಬ್ಬ ಕಾಸರಗೋಡು ಜಿಲ್ಲೆಯಲ್ಲಿದೆ ಬಲ್ಲಿರಾ??

ಓಣಂ ಪ್ರತ್ಯೇಕತೆಗಳಲ್ಲಿ ವಿಶೇಷವಾದುದು “ಸದ್ಯ” ಎಂದೇ ಕರೆಯುವ ಸಾಂಪ್ರದಾಯಿಕ ಸಸ್ಯಾಹಾರಿ ಸಮೃದ್ಧಿಯ ಊಟ. ಇದು ಮನುಷ್ಯರಿಗಷ್ಟೇ ಅಲ್ಲ, ಕಳೆದನೇಕ ದಶಕಗಳಿಂದ ಕಾಸರಗೋಡಿನಲ್ಲಿ ವನ್ಯಜೀವಿ ಮಂಗಗಳಿಗೆ ಸಹಿತ ಇತರ ಪಕ್ಷಿ,ಉರಗಾದಿ ವನ್ಯ ಜೀವಿಗಳಿಗೆಲ್ಲ ಆರಾಧನಾ ಪೂರ್ವಕ ಗೌರವದಿಂದ ದೊರೆಯುತ್ತಿದೆ. ಬಹುಶಃ ದೇಶದಲ್ಲೇ ಮತ್ತೊಂದೆಡೆ ಕಂಡೂ ಕೇಳರಿಯದ ಈ ಮಾನವಿಕ ಆರಾಧನೆ ಅನೇಕ ವರ್ಷಗಳಿಂದ ಕಾಸರಗೋಡಿನ ತೆಂಕಣ ಸೀಮೆಯಲ್ಲಿ ನಡೆಯುತ್ತಿದೆ. ಈ ಬಾರಿಯೂ ವಾಡಿಕೆ ತಪ್ಪದೇ ಅದು ಮುಂದುವರಿಯುತ್ತಿದೆ.. ಯಾವುದೇ ಹಬ್ಬಕ್ಕೂ ಮತ್ತೆಲ್ಲೂ ಕಾಣದ, ಕೇಳದ ಇಂಥ ಆರಾಧನೆಯಲ್ಲವೇ
ನಾಡಿನ ವೈಶಿಷ್ಟ್ಯ, ವಿಶೇಷ!!

ಇಂಥದ್ದೊಂದು ಅತ್ಯಪೂರ್ವ ಔತಣ. ವಾನರಾದಿ, ವನ್ಯಮೃಗಗಳಿಗೆ ನೀಡುವುದು ಕಾಸರಗೋಡಿನ ನೀಲೇಶ್ವರದ ಇಡಯಿಲಕ್ಕಾಡ್ ದ್ವೀಪದಲ್ಲಿ. ಇದು ಅನೇಕ ಕಾಲದಿಂದ ನಡೆಯುತ್ತಿದೆ. ಓಣಂ ಸಂಭ್ರಮಗಳ ನಡುವೆ ಒಂದು ದಿನ ವಾನರಗಳಿಗೆಂದೇ ಔತಣ ಬಡಿಸುವ ಈ ಊರಿನ ಸಂಪ್ರದಾಯ ಈಗ ಪ್ರಚಾರ ಪಡೆದಿದೆ. ಅದೊಂದು ನಾಡ ಸಂಭ್ರಮಾಚರಣೆಯಾಗಿದೆ.
ಇಷ್ಟಕ್ಕೂ ಇಡಯಿಲಕ್ಕಾಡ್ ಎಂಬ ದ್ವೀಪದೊಳಗೆ ಇಂಥ ಮಾನುಷಿಕ ಕಳಕಳಿಯ ಹಬ್ಬಾಚರಣೆ ಆರಂಭವಾದುದಕ್ಕೂ ಒಂದು ಅನನ್ಯ ಜೀವಪ್ರೇಮದ ಮಮತೆಯ ಮಾನವಿಕ ಕತೆ ಇದೆ…ನೀಲೇಶ್ವರದ ನದೀದಂಡೆಯ ಇಡಯಿಲಕ್ಕಾಡ್ ದ್ವೀಪ ಎಂದರೆ ಜೈವಿಕ ವೈವಿಧ್ಯಗಳ ಕಾಡು. ಅದು ಹೊಳೆ ಮತ್ತು ಸಮುದ್ರ ನಡುವಣ ಊರಲ್ಲಿದೆ. ಅಲ್ಲಿ ದಟ್ಟಕಾಡಿದೆ. ಅದರೊಳಗೆ ನಾಗಬನವಿದೆ. ಅನನ್ಯ ಉರಗ, ಸರೀಸೃಪಗಳಿವೆ. ವೈವಿಧ್ಯ ಪಕ್ಷಿ ಸಂಕುಲಗಳಿವೆ. ಬನ ಎಂಬುದರ ಪ್ರತ್ಯಕ್ಷ ಸಾಕ್ಷಿಯಾಗಿ ಹಾವುಗಳನೇಕ ಉಳ್ಳ ದ್ವೀಪದಲ್ಲಿ ಅತ್ಯಧಿಕ ಮಂಗಗಳೂ ಇವೆ. ಈ ದ್ವೀಪದೊಳಗೆ ಇತ್ತೀಚಿನ ವರ್ಷದ ವರೆಗೂ ಚಾಲಿಲಂ ಮಾಣಿಕ್ಯಂ ಎಂಬ ಅಜ್ಜಿ ನಿರ್ಭಯದಿಂದ ಒಂಟಿಯಾಗಿ ವಾಸಿಸಿದ್ದರು. ಅವರು ವರ್ಷಕ್ಕೊಮ್ಮೆ ಓಣಂ ಸಂದರ್ಭ ತಾನು ಮೃಷ್ಟಾನ್ನ ಉಣ್ಣುವಾಗ ಕಾಡಿನ ಮಂಗಗಳಿಗೆ ಸಹಿತ ಇತರ ಪ್ರಾಣಿಗಳಿಗೂ ನೀಡುತ್ತಿದ್ದರು. ಈ ಕಾರಣದಿಂದಲೇ ಅವರು ದನಿಯೆತ್ತಿ ಕರೆದರೆ ಕಾಡಕೋಡಗ ಸಹಿತ ಕರೆಕೇಳುವ ಪ್ರಾಣಿಗಳು ಮಮತೆಯಿಂದ ದೌಡಾಯಿಸುತ್ತಿದ್ದುವು!!

ಯಾವಾಗ ಅಜ್ಜಿಗೆ ವಯಸ್ಸಾಯಿತೋ, ಆಗ ಈ ಜವಾಬ್ದಾರಿಯನ್ನು ಊರ ಯುವಕ ಸಂಘ ಕೈಗೆತ್ತಿಕೊಂಡಿತು. ಕಳೆದ 16ವರ್ಷಗಳಿಂದ ಇಡಯಿಲಕ್ಕಾಡ್ ನವೋದಯ ಯುವಕ ಸಂಘ,ಗ್ರಂಥಾಲಯ ದ ಬಾಲವೇದಿಕೆಯ ಕಳಕಳಿಯಿಂದ ವಾನರಗಳಿಗೆ ಉಣಿಸುವ ಓಣಂ ಸದ್ಯ ನಡೆಯುತ್ತಿದೆ. ಈ ಬಾರಿಯದ್ದು ಸತತ 17ನೇ ವರ್ಷದ ಸಂಭ್ರಮ. ಈ ಸಲ ಇದೇ ಸೆ.16ರಂದು ಓಣಂ ಆಚರಣೆಯ “ಅವಿಟ್ಟಂ” ದಿನ ಬೆಳಿಗ್ಗೆ 10ಗಂಟೆಗೆ ಇಡಯಿಲಕ್ಕಾಡ್
ದ್ವೀಪದ ವಾನರ ಭೋಜನ ನಡೆಯಲಿದೆ. ಈಗ ಇದಕ್ಕೆ ಸ್ಥಾನೀಯ ಸಮಾಜಮುಖಿ ನಾಯಕರು, ಸ್ಥಳೀಯಾಡಳಿತ ಸಂಸ್ಥೆಗಳ ಬೆಂಬಲವೂ ಇದೆ. ಇದರಿಂದ ಪ್ರಚಾರವೂ ಸಿಕ್ಕಿದೆ.

ಈ ಬಾರಿಯದ್ದು ನವೋದಯ ಗ್ರಂಥಾಲಯದ ಬಾಲಕರ ವೇದಿಕೆಯ 17ನೇ ವರ್ಷದ ಕಾರ್ಯಕ್ರಮವಾದುದರಿಂದ ವಾನರ ಭೋಜನಕ್ಕೆ 17 ವೈಶಿಷ್ಟ್ಯಗಳ ಸಮೃದ್ಧ ತಿನಿಸುಗಳಿವೆ. ಎಲ್ಲವೂ ಹಣ್ಣುಹಂಪಲು ಮತ್ತು ತರಕಾರಿ ವೈವಿಧ್ಯಗಳು ಮಾತ್ರ. ಈಗ ಕರೆ ‌ದರೆ ಸಾಕು.., ಅನೇಕ ವರ್ಷಗಳಿಂದ ತಿಂದುಂಡು ಪರಿಚಿಯವಾದ ವಾನರುಗಳು ಸರದಿ ಸಾಲಲ್ಲಿ ಜಿಗಿದು ಕುಳಿತು ಬಾಳೆ ಎಲೆಯಿಂದ ಬೇಕು, ಬೇಕಾದುದನ್ನು ಗಬಗಬನೆ ತಿಂದು ತೇಗುವುದನ್ನು ನೋಡುವುದೇ ಚಂದ..!

ಓಣಂ ಔತಣ ಕಾಡ ಕೋಡಗಗಳಿಗೆ ಇಲ್ಲೀಗ ಸುಪರಿಚಿತವಾಗಿದೆ. ಎಲೆಯಲ್ಲಿ ಬಡಿಸಿ ಕೈ ಚಪ್ಪಾಳೆ ಹೊಡೆದು ಆಮಂತ್ರಿಸುವುದೇ ತಡ, ಯಾವುದೇ ಅಳುಕಿಲ್ಲದೇ ಅವು ಬಾಲ ಕುಣಿಸುತ್ತಾ ಮರದಿಂದ ಜಿಗಿದು ತಯಾರಾಗುತ್ತವೆ. ತಮ್ಮಿಷ್ಟದ ಹಣ್ಣು, ತರಕಾರಿ ತಿನ್ನುತ್ತವೆ. ಬಹುಶಃ ಹಬ್ಬವೊಂದರ ಮರೆಯಲ್ಲಿ ವನ್ಯ ಜೀವಿಗಳಿಗೂ ಉಣಿಸುವ ಇಂಥ ಅಪೂರ್ವ ಬೆಳವಣಿಗೆ ಮತ್ತೆಲ್ಲಾದರೂ ಉಂಟೋ ಗೊತ್ತಿಲ್ಲ. !!
ವಸುದೈವ ಕುಟುಂಬಕಂ ಎಂದು ಹೇಳುವುದಲ್ಲ, ಹಾಗೆಯೇ ಬದುಕಬೇಕೆನ್ನುವುದಕ್ಕೆ ಕಾಸರಗೋಡಿನ ನೀಲೇಶ್ವರದಲ್ಲಿದೆ ಪ್ರತ್ಯಕ್ಷ ನಿದರ್ಶನ..ಇದಲ್ಲವೇ ಹಬ್ಬಾಚರಣೆಯ ವೈಭೋಗಕ್ಕಿಂತ ಮಿಗಿಲಾದ ಮಾನವಿಕ ಮಾದರಿ?

ಚಿತ್ರ ಕೃಪೆ: ಶ್ಯಾಂ ಬಾಬು ವೆಳ್ಳಿಕೋತ್ತ್, ನೀಲೇಶ್ವರಂ

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00