ಕಣಿಪುರ ಸುದ್ದಿಜಾಲ
ಕರಾವಳಿ ಮತ್ತು ಮಲೆನಾಡಲ್ಲಿ ಹರಿದು ಹಂಚಿಹೋಗಿ ನೆಲೆಸಿರುವ ಸಮಗ್ರ ಮರಾಟಿ ಸಮುದಾಯ ಪ್ರತಿನಿಧಿಗಳ ಬೃಹತ್ ಸಮಾವೇಶ ಅಕ್ಟೋಬರ್ 20ರಂದು ಮೂಡಬಿದಿರೆಯ ಆಳ್ವಾಸ್ ಆವರಣದಲ್ಲಿ ನಡೆಯಲಿದ್ದು, ನಾಡಿನೆಲ್ಲಡೆ ಸಮಾವೇಶ ಯಶಸ್ವಿಗೆ ವಿಫುಲ ಸಿದ್ಧತೆ ನಡೆಯುತ್ತಿದೆ.
ದ.ಕ, ಉಡುಪಿ, ಕಾಸರಗೋಡು, ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು ಮೊದಲಾದೆಡೆ ನೆಲೆಸಿರುವ ಕರಾವಳಿಯ ಮೂಲನಿವಾಸಿ ಗಿರಿವರ್ಗ ನಾಗರಿಕರಾದ ಮರಾಟಿ ಸಮುದಾಯ ಜನಪದೀಯ ಮತ್ತು ಸಾಂಸ್ಕೃತಿಕವಾದ ಶ್ರೀಮಂತ ಹಿನ್ನೆಲೆ ಇದ್ದರೂ ಸಾಮಾಜಿಕವಾಗಿ ಹಲವು ಸಮಸ್ಯೆಗಳನ್ನೆದುರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಸಮುದಾಯದ ಶ್ರೇಯೋಭಿವೃದ್ಧಿಗೆ ಚಿಂತನೆ ನಡೆಸಿ, ಜನಾಂಗದ ಅಭ್ಯುದಯಕ್ಕಾಗಿ ಸರಕಾರವನ್ನು ಒತ್ತಾಯಿಸುವ ಧ್ಯೇಯದಲ್ಲಿ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ.
ಮರಾಟಿ ಸಮುದಾಯ ಕರಾವಳಿಯ ಗಿರಿಕಂದರದ ನಡುವೆ ಬದುಕಿ ಬೆಳೆದ ಮೂಲನಿವಾಸಿಗಳು. ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಹಿಂದುಳಿದ ಈ ಸಮುದಾಯದ ಅರ್ಹ ಸವಲತ್ತುಗಳು ಈಗ ಕೃತಕವಾಗಿ ಅನ್ಯರು ಕಬಳಿಸುತ್ತಾರೆ. ಸಾಮಾಜಿಕ, ಆರ್ಥಿಕ, ರಾಜಕೀಯ, ಶೈಕ್ಷಣಿಕ,ಸಾಂಸ್ಕೃತಿಕ ರಂಗದಲ್ಲಿ ಬೆಂಬಲ, ಪ್ರೋತ್ಸಾಹಗಳಿಲ್ಲದೇ ಶೋಷಣೆ ಎದುರಿಸುತ್ತಿರುವ ಸಮಾಜದ ಜನತೆಯ ಮೀಸಲಾತಿ ಸೌಲಭ್ಯವೂ ಕಬಳಿಕೆಯಾಗುತ್ತಿದೆ. ವಿದ್ಯಾರ್ಥಿಗಳಿಗೆ ಅರ್ಹವಾಗಿ ದೊರೆಯಬೇಕಿದ್ದ ಪ್ರೋತ್ಸಾಹಧನ, ವಿದ್ಯಾರ್ಥಿ ವೇತನ ಸಕಾಲಕ್ಕೆ ಸಿಗುತ್ತಿಲ್ಲ. ಆಸ್ತಿ ಪರಭಾರೆ, ಭೂಮಿ ವಿಚಾರದಲ್ಲೂ ಸಮಸ್ಯೆಗಳಿವೆ. ಹೀಗೆ ಸಮುದಾಯ ಎದುರಿಸುವ ವಿವಿಧ ಸಮಸ್ಯೆಗಳ ಚಿಂತನ ಮತ್ತು ಅದರ ಪರಿಹಾರದ ಉದ್ದೇಶದಿಂದ ವಿಶಾಲ ಸಮ್ಮೇಳನ ಜೋಡಿಸಲಾಗುತ್ತಿದೆ.
ಮೂಲನಿವಾಸಿ ಮರಾಟಿ ಸಮುದಾಯಕ್ಕೆ ಶೈಕ್ಷಣಿಕ ಪ್ರೋತ್ಸಾಹ, ಉದ್ಯೋಗ ಮೀಸಲಾತಿ, ಸರಕಾರಿ ನಿಗಮ, ಮಂಡಳಿಗಳಲ್ಲಿ ಪ್ರಾತಿನಿಧ್ಯ ನೀಡಿ ಮುನ್ನೆಲೆಗೆ ತರಬೇಕೆಂಬುದು ಸಮಾವೇಶದ ಆಗ್ರಹವಾಗಿದೆ.
‘ಗದ್ದಿಗೆ’ ಸಮಾವೇಶಕ್ಕೆ ಜಮ್ಮು ಕಾಶ್ಮೀರ ಸರಕಾರದ ಮುಖ್ಯ ಕಾರ್ಯದರ್ಶಿ, ಉಡುಪಿ ಮೂಲದ ಎಚ್. ರಾಜೇಶ್ ಪ್ರಸಾದ್ ಅಧ್ಯಕ್ಷರಾಗಿದ್ದು, ಕರ್ನಾಟಕ ರಾಜ್ಯ ಮರಾಟಿ ಸಮುದಾಯ ಮುಖಂಡ,ನಿವೃತ್ತ ಐ ಎಫ್ ಎಸ್ ಅಧಿಕಾರಿ ಡಾ.ಕೆ.ಸುಂದರ ನಾಯ್ಕ್ ಗೌರವಾಧ್ಯಕ್ಷರಾಗಿದ್ದಾರೆ. ಜನಾಂಗದ ಪ್ರಮುಖರು ಸಮಾವೇಶದ ಸ್ವಾಗತ ಸಮಿತಿ ಪದಾಧಿಕಾರಿಗಳಾಗಿದ್ದು , ಕರಾವಳಿ, ಮಲೆನಾಡು ಸಹಿತ ಕಾಸರಗೋಡು, ಕೊಡಗಿನಿಂದ ಅತ್ಯಧಿಕ ಜನರನ್ನು ಸಮಾವೇಶದಲ್ಲಿ ಪಾಲ್ಗೊಳ್ಳಿಸುವ ಸಿದ್ಧತೆ ನಡೆಯುತ್ತಿದೆ.
ಕಾಸರಗೋಡು ವಲಯ ಮರಾಟಿ ಸಮುದಾಯದ “ಗದ್ದಿಗೆ” ಸಿದ್ಧತಾ ಸಭೆ ಡಾ. ನಾರಾಯಣ ನಾಯ್ಕರ ಮುತುವರ್ಜಿಯಲ್ಲಿ ಪೆರ್ಲದಲ್ಲಿ ಜರುಗಿತು. ಅನೇಕರು ಪಾಲ್ಗೊಂಡಿದ್ದರು.