ಕೇರಳದ ಕೊಚ್ಚಿನ್ ನಲಿ 73 ವರ್ಷ ಪ್ರಾಯದ ವಯೋವೃದ್ಧೆಯನ್ನು ಹತ್ಯೆ ಮಾಡಿ ಶವವನ್ನು ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ಪೊಲೀಸರು ಮಣಿಪಾಲದಿಂದ ಇಬ್ಬರನ್ನು ಬಂಧಿಸಿದ್ದಾರೆ.
ಬಂಧಿತರು ಪ್ರಕರಣದಲ್ಲಿ ಪೋಲೀಸರು ಹುಡುಕಾಡುತ್ತಿದ್ದ ಆರೋಪಿ ಮ್ಯಾಥ್ಯೂಸ್ ಹಾಗೂ ಪತ್ನಿ, ಉಡುಪಿ ಮೂಲದ ಶರ್ಮಿಳ ಎಂಬವರಾಗಿದ್ದಾರೆ.ಕೇರಳದ ಕೊಚ್ಚಿಯ ಕಡವಂತ್ರ ಎಂಬಲ್ಲಿಯ ನಿವಾಸಿ ಸುಭದ್ರಾ ಎಂಬ ವಯೋವೃದ್ಧೆ ಸೆಪ್ಟಂಬರ್ 4 ರಿಂದ ನಾಪತ್ತೆಯಾಗಿದ್ದರು. ತನಿಖೆ ನಡೆಸಿದ್ದ ಪೊಲೀಸರು ಆಲಪ್ಪುಳದ ಕಳವೂರ್ ಕುರ್ತುಸೇರಿ ಎಂಬಲ್ಲಿ ಮನೆಯೊಂದರ ಹಿಂದೆ ಹೂತಿಟ್ಟಿದ್ದ ಸ್ಥಿತಿಯಲ್ಲಿ ಮಹಿಳೆಯ ಮೃತದೇಹ ಪತ್ತೆ ಹಚ್ಚಿದ್ದರು.
ಮೃತ ದೇಹ ಸಿಕ್ಕ ಮನೆಯು ಉಡುಪಿ ಮೂಲದ ಶರ್ಮಿಳಾ ಎಂಬವರದ್ದಾಗಿದ್ದು, ಶರ್ಮಿಳಾ ಹಾಗೂ ಆಕೆಯ ಪತಿ ಮ್ಯಾಥ್ಯೂಸ್ ಅನಂತರ ನಾಪತ್ತೆಯಾಗಿದ್ದರು. ನಾಪತ್ತೆಯಾಗಿದ್ದ ಸುಭದ್ರಾ ಅವರ ಪತ್ತೆಗಾಗಿ ಸಿಸಿ ಟಿವಿ ಪರಿಶೀಲನೆ ನಡೆಸಿದ್ದ ಪೊಲೀಸರು ಶರ್ಮಿಳಾ ಜೊತೆಯಲ್ಲಿ ಸುಭದ್ರಾ ತೆರಳಿದ್ದ ದೃಶ್ಯವನ್ನು ಗಮನಿಸಿದ್ದರು. ಹೀಗಾಗಿ ಶರ್ಮಿಳಾ ವಿಚಾರಣೆಗೆ ಬಂದ ವೇಳೆ ಮನೆ ಬೀಗ ಹಾಕಲಾಗಿದ್ದು, ಪೊಲೀಸರು ಸ್ಥಳದಲ್ಲಿ ಮತ್ತು ರಾಜ್ಯ ವ್ಯಾಪಕ ಹುಡುಕಾಟ ನಡೆಸಿದ್ದಾರೆ. ಈ ವೇಳೆ ಮನೆಯ ವಾಶ್ ರೂಂ ಪಕ್ಕದಲ್ಲಿ ಮಣ್ಣು ಮುಚ್ಚಿರುವ ಗುಂಡಿ ಕಂಡು ಬಂದಿದ್ದು, ಅದನ್ನು ಪರಿಶೀಲಿಸಿದಾಗ ಸುಭದ್ರಾ ಅವರ ಮೃತ ದೇಹ ಪತ್ತೆಯಾಗಿದೆ.
ಹಲವು ವರ್ಷದಿಂದ ಕೊಚ್ಚಿಯಲ್ಲಿ ವಾಸವಾಗಿರುವ ಉಡುಪಿ ಮೂಲದ ಶರ್ಮಿಳಾಗೆ ಸುಭದ್ರ ಅವರು ಪರಿಚಯವಾಗಿದ್ದರು. ಕಡವಂತ್ರ ಎಂಬಲ್ಲಿ ವಾಸವಾಗಿದ್ದ ಶರ್ಮಿಳಾಳಿಗೆ ಸುಭದ್ರ ಅವರೇ ಕಳವೂರ್ ಕುರ್ತಸೇರಿಯಲ್ಲಿ ಮನೆ ಬಾಡಿಗೆ ಕೊಡಿಸಿದ್ದರು. ಶರ್ಮಿಳಾ ಜೊತೆಯಲ್ಲಿ ತುಂಬಾ ಆತ್ಮೀಯತೆಯಲ್ಲಿದ್ದ ಇದ್ದ ಸುಭದ್ರಾ ಅವರನ್ನು ಚಿನ್ನ ದೋಚುವ ಉದ್ದೇಶದಿಂದ ಕೊಲೆ ಮಾಡಲಾಗಿದೆ ಎಂದು ಪೋಲೀಸರು ಶಂಕಿಸಿದ್ದಾರೆ.