ಬಡಗುತಿಟ್ಟಿನ ಬೇಡಿಕೆಯ ಖ್ಯಾತ ಮದ್ಲೆಗಾರ ಶಶಿ ಆಚಾರ್ ಉಡುಪಿ ಅವರು ಮುಂದಿನ ಸಾಲಿನ ತಿರುಗಾಟವನ್ನು ಪ್ರಸಿದ್ಧ ಡೇರೆ ಮೇಳವಾದ ಸಾಲಿಗ್ರಾಮ ಮೇಳದಲ್ಲಿ ನಡೆಸಲಿದ್ದಾರೆ.
ಯಕ್ಷಗಾನದ ಮದ್ದಳೆವಾದನದಲ್ಲಿ ಎರಡು ದಶಕಗಳಿಂದ ಸಕ್ರಿಯರಾಗಿರುವ ಅವರು 20ವರ್ಷದ ಹಿಂದೆ ಪೆರ್ಡೂರು ಮೇಳದ ಮೂಲಕ ಡೇರೆಮೇಳದಲ್ಲಿ ತಿರುಗಾಟ ಆರಂಭಿಸಿದ್ದರು.
ಬಳಿಕ ಅತಿಥಿಯಾಗಿ ಗುತ್ಯಮ್ಮ ಮೇಳ, ಹಟ್ಟಿಯಂಗಡಿ ಮೇಳ, ಹಾಲಾಡಿ ಮೇಳಗಳಲ್ಲಿ ಮತ್ತು ಹವ್ಯಾಸಿಯಾಗಿ ತಿರುಗಾಟ ನಡೆಸಿದ್ದ ಅವರು ಇದೀಗ ಮತ್ತೆ ಸಾಲಿಗ್ರಾಮ ಮೇಳದ ಮೂಲಕ ಡೇರೆ ಮೇಳಕ್ಕೆ ಪುನರಾಗಮಿಸುತ್ತಿದ್ದಾರೆ.
ಡೇರೆಮೇಳದಲ್ಲಿ ತಿರುಗಾಟ ಮಾಡುವುದೆಂದರೆ ಅದರ ಅನುಭವ , ಅಲ್ಲಿನ ಶೈಲಿಯೇ ಭಿನ್ನ. ಡೇರೆ ಮೇಳದಲ್ಲಿ ತಿರುಗಾಟ ಮಾಡಬೇಕೆನ್ನುವ ಉತ್ಸಾಹ ನನಗೂ ಇತ್ತು. ಅದಕ್ಕನುಕೂಲವಾಗಿ ಈಗ ಮತ್ತೊಮ್ಮೆ ಅವಕಾಶ ಒದಗಿದೆ. ಅದೂ ಸಾಲಿಗ್ರಾಮ ಮೇಳದಲ್ಲಿ ಎನ್ನುವುದೇ ಸಂತಸ ಎಂದರು ಮದ್ಲೆಗಾರ್ ಶಶಿ ಆಚಾರ್ಯ.
ಶಶಿ ಆಚಾರ್ಯರದ್ದು ಗಟ್ಟಿಯಾದ ಹಿಮ್ಮೇಳ ವಾದಕರ ಪರಂಪರೆ. ಅವರು ಪ್ರಸಿದ್ದ ಮದ್ದಳೆ ವಾದಕ,ಗುರು ತಿಮ್ಮಪ್ಪ ನಾಯ್ಕರ ಶಿಷ್ಯ ಸೀತಾರಾಂ ಆಚಾರ್ಯರ ಪುತ್ರ. ತಂದೆಯ ಹಾದಿಯಲ್ಲೇ ಎಳವೆಯಲ್ಲೇ ಮದ್ದಳೆ ವಾದನ ಚತುರನಾಗಿ ರೂಪುಗೊಂಡ ಶಶಿ ಆಚಾರ್ ಅವರು ತೆಂಕು, ಬಡಗಿನ ಗಾನವೈಭವಗಳಲ್ಲಿ ಮದ್ದಳೆ ವಾದಕನಾಗಿ ತಿಟ್ಟು ಮೀರಿದ ಕಲಾವಲಯದಲ್ಲಿ ಸುಪರಿಚಿತರು. ಪ್ರಸ್ತುತ ಸಾಲಿಗ್ರಾಮ ಮೇಳದ ಮೂಲಕ ನವಯಾನಕ್ಕೆ ಕಾಲಿಟ್ಟ ಅವರ ನವ್ಯಾನುಭವದ ಬಯಕೆಯ ಪಯಣಕ್ಕೆ ಅಭಿಮಾನಿಗಳು ಶುಭಕೋರಿದ್ದಾರೆ.