ಕಣಿಪುರ ಸುದ್ದಿಜಾಲ
ಯಕ್ಷಗಾನ ಸಹಿತ ಕಲೆಗಳಲ್ಲಿ ಎಷ್ಟೇ ಅತ್ಯಾಧುನಿಕ ರೆಡಿಮೇಡ್ ಚೆಂಡೆ, ಮದ್ಲೆಗಳು ಬಂದರೂ ಅದು ಸಾಂಪ್ರದಾಯಿಕ ಶೈಲಿಯ ಚರ್ಮವಾದ್ಯ ನೀಡುವ ಶ್ರುತಿ ಮಾಧುರ್ಯದ ಮಧುರನಾದವನ್ನು ಯಾವ ಕಾರಣಕ್ಕೂ ನೀಡಲಾರದು. ಚೆಂಡೆ,ಮದ್ಲೆಗಳು ಮಾಧುರ್ಯ ಭರಿತವಾಗಬೇಕಿದ್ದರೆ ನಿರ್ದಿಷ್ಟ ಚರ್ಮಕ್ಕೆ ನಿರ್ದಿಷ್ಟ ಕಳಸೆ ಬೇಕು. ಇದರಲ್ಲಿ ತಯಾರಿಸಿದ ಉಪಕರಣಕ್ಕೆ ಮುಚ್ಚಿಗೆ ಹಾಕಿ ಅದರಿಂದ ಶಾಸ್ತ್ತೀಯ ಬದ್ಧ ನಾದ ಮೂಡಿಸುವುದೆಂದರೆ ಆಳವಾದ ಸ್ವರಜ್ಞಾನ, ನಾದದ ಪರಿಜ್ಞಾನ, ಶೃತಿ,ಮಾಧುರ್ಯಗಳ ಅರಿವು ಮತ್ತು ಶಾರೀರಿಕ ಪರಿಶ್ರಮ ಅಗತ್ಯ. ಇಂಥ ನೈಪುಣ್ಯ ಉಳ್ಳವರ ಕೊರತೆ ವರ್ತಮಾನದ ಸಮಸ್ಯೆ, ಭವಿಷ್ಯದ ಆತಂಕವಾಗಿದೆ ಎಂದು ಚರ್ಮವಾದ್ಯಗಳ ಮರ್ಮವನ್ನರಿತ ಕುಶಲಕರ್ಮಿ, ತೆಂಕಣ ಯಕ್ಷಗಾನಕ್ಕೆ ಆರೂವರೆ ದಶಕಗಳಿಂದ ಹಿಮ್ಮೇಳ ಪರಿಕರಗಳನ್ನೊದಗಿಸುತ್ತಿರುವ ಕೂಡ್ಳು ಸದಾನಂದ ರಾವ್ ನುಡಿದರು.
“ಕಣಿಪುರ” ಆನ್ಲೈನ್ ಕಚೇರಿಗೆ ಇಂದು ಭೇಟಿ ಇತ್ತು ಮಾತನಾಡಿದ ಅವರು ಯಕ್ಷಗಾನದ ಹಿಮ್ಮೇಳ ನೈಜ ವೈಭವ ಕಾಣಬೇಕಾದರೆ ಭಾಗವತರಿಗೆ ಎಷ್ಟೇ ಸ್ವರ ಮಾಧುರ್ಯ ಇದ್ದರೂ ಸಾಲದು. ಹಿಮ್ಮೇಳ ಪರಿಕರಗಳ ನುಡಿತ, ಬಡಿತಗಳಲ್ಲಿ ಶ್ರುತಿಭರಿತ ಮಧುರಧ್ವನಿ ಝೇಂಕರಿಸಬೇಕು. ಇದು ನುಡಿತ,ಬಡಿತದಿಂದಲೇ ಮೂಡುವುದಲ್ಲ. ಉಪಕರಣಗಳ ನಿರ್ಮಾಣದಲ್ಲಿ ಧ್ವನಿ ಝೇಂಕಾರವನ್ನಡಗಿಸಬೇಕು. ಕಲಾವಿದ ಅದನ್ನು ಪ್ರಕಟಿಸಬೇಕು. ಹೀಗೆ ಮಾಡಲು ಚರ್ಮವಾದ್ಯಗಳಿಂದಷ್ಟೇ ಸಾಧ್ಯ ಎಂದವರು ಅಭಿಪ್ರಾಯಪಟ್ಟರು.
ತನ್ನ 6ನೇ ವಯಸ್ಸಿನಲ್ಲಿ ಮದ್ದಳೆ ವಾದನದೊಂದಿಗೆ ತಿರುಗಾಟ ಆರಂಭಿಸಿದ ಕೂಡ್ಳು ಸದಾನಂದ ರಾಯರಿಗೀಗ 85ರ ಹರೆಯ. 15ರ ಹರೆಯದಲ್ಲೇ ಚೆಂಡೆ,ಮದ್ದಳೆ ನಿರ್ಮಾಣ, ರಿಪೇರಿ ಕೆಲಸಗಳನ್ನು ಸ್ವತಂತ್ರವಾಗಿ ಮಾಡಲಾರಂಭಿಸಿದ ಇವರು ಕಳೆದ 7ದಶಕದಲ್ಲಿ ಬರೋಬ್ಬರಿ 5 ಸಾವಿರದಷ್ಟು ಚೆಂಡೆ,ಮದ್ದಳೆ ಒದಗಿಸಿದ್ದಾರೆ. ಒಂದು ದಿನವೂ ವಿಶ್ರಾಂತಿ ಪಡೆಯದೇ, ಬದುಕನ್ನೇ ನಾದವಿಸ್ಮಯಕ್ಕೆ ಮುಡಿಪಿಟ್ಟು, ಮದ್ದಳೆಗೆ ನಾದ ತುಂಬಿಸಿ ಝೇಂಕರಿಸುವಂತೆ ಮಾಡುವ ಕಾಯಕವನ್ನೇ ತಪಸ್ಸಾಗಿಸಿಕೊಂಡ ಸದಾನಂದರ ಕೈಚಳಕದಲ್ಲಿ ರೂಪುಗೊಂಡ ಹಿಮ್ಮೇಳ ಪರಿಕರಕ್ಕೆ ಈಗಲೂ ಎಲ್ಲಿಲ್ಲದ ಡಿಮ್ಯಾಂಡ್..
ಆದರವರಿಗೆ ವೃದ್ಧಾಪ್ಯದ ಸಹಜ ಸಮಸ್ಯೆ!
ಕಟೀಲು, ಧರ್ಮಸ್ಥಳ, ಎಡನೀರು, ಹೊಸನಗರ, ಹನುಮಗಿರಿ ಸಹಿತ ತೆಂಕಿನ ಪ್ರಮುಖ ಮೇಳಕ್ಕೆ ಇವರಿಂದಲೇ ಚೆಂಡೆ,ಮದ್ದಳೆ ಪೂರೈಕೆ ಮತ್ತು ನವೀಕರಣ.
ಅಲ್ಲದೇ ಅಮೇರಿಕ, ಲಂಡನ್, ಸಹಿತರ ಐರೋಪ್ಯ ರಾಷ್ರಗಳಿಂದಲೂ, ದೇಶದ ದೆಹಲಿ, ಬೆಂಗಳೂರು, ಕೇರಳದ ವಿವಿಧ ದೇವಾಲಯಗಳಿಂದಲೂ ಚೆಂಡೆ, ಮದ್ದಳೆ,ಮೃದಂಗ ಬೇಡಿಕೆಯಿಂದ ಇವರನ್ನು ಹುಡುಕಿ ಬರುವವರಿಗೆ ಬರವೇ ಇಲ್ಲ. ಪ್ರಸ್ತುತ 85ರ ಹರೆಯದಲ್ಲೂ ಬತ್ತದ ಉತ್ಸಾಹದಿಂದ ಪಾರಂಪರಿಕ ವಿಧಾನದಲ್ಲಿ ಚರ್ಮವಾದ್ಯ ತಯಾರಿಸುತ್ತಿರುವ ಸದಾನಂದ ಕೂಡ್ಳು ಸದಾನಂದ ರಾಯರಿಗೆ ಈ ಕಸುಬೇ ಧ್ಯಾನ.
ಇವರಿಗಿದು ಪರಂಪರಾಗತ ಕುಲಕಸುಬು. ದುಡಿತ ಆರಂಭಿಸಿದಂದಿನಿಂದ ಇಂದಿನ ತನಕವೂ ಬಿಡುವಿಲ್ಲದೇ, ವಿಶ್ರಾಂತಿ ಪಡೆಯದೇ ಪರಂಪರೆಯಿಂದ ಆರ್ಜಿಸಿದ ನಾದವಿಜ್ಞಾನವನ್ನು ಕೈ ದಾಟಿಸುತ್ತಿರುವ ಸದಾನಂದ ರಾಯರು ಅವರ ಪರಂಪರೆಯ ಕೊನೆಯ ಕೊಂಡಿ.
ಧ್ವನಿ ಎಂಬುದಕ್ಕೆ ಕೊನೆ ಇಲ್ಲ. ಧ್ವನಿಯ ಮಾಧುರ್ಯಕ್ಕೆ ದೇವತೆಗಳು ಸಹಿತ ಒಲಿಯದವರೇ ಇಲ್ಲ. ನಾನು ಪ್ರತಿಯೊಂದು ಮದ್ದಳೆ ರೂಪಿಸುವಾಗಲೂ ಅದರಿಂದ ಗರಿಷ್ಟ ಮಧುರನಾದ ಮೊಳಗುವಂತೆ ಮುಚ್ಚಿಗೆ ಹಾಕುತ್ತೇನೆ. ಇದು ವಿಪರೀತ ತ್ರಾಣ ಬಯಸುವ, ಪರಿಶ್ರಮ ಬೇಕಾಗುವ ಕೆಲಸ. ಇದನ್ನೊಂದು ಧ್ಯಾನದಂತೆ ಏಕಾಂತದಲ್ಲಿ ಮಾಡುತ್ತಾ, ಅದರ ನಾದ ಶ್ರವಿಸುತ್ತಾ ಪಡೆಯುವ ಆನಂದ ಉಂಟಲ್ಲ, ಅದು ಕೋಟಿ ಕೊಟ್ಟರೂ ಸಿಗದು. ಅದಕ್ಕೆ ಬೆಲೆ ಕಟ್ಟಲಾಗದು. ನಾವು ನಿರ್ಮಿಸಿಕೊಟ್ಟ ಚರ್ಮವಾದ್ಯಗಳಲ್ಲಿ ಕಲಾವಿದರು ತಮ್ಮ ಪ್ರತಿಭೆ ಮೆರೆಸಿ, ಮೆರೆಯುವುದನ್ನು ಕಾಣುವುದೇ ನಮ್ಮ ಖುಷಿ. ಎಲ್ಲಿಯೂ ಯಾರೂ ಇದೆಲ್ಲಿ?ಯಾರು ತಯಾರಿಸಿದ ಚೆಂಡೆ, ಮದ್ಲೆ ಎಂದು ಕೇಳಲಾರರು. ನುಡಿಸುವ ಕಲಾವಿದರನ್ನಷ್ಟೇ ಕಂಡು, ಅವರ ಕೈ ಚಳಕಕ್ಕೆ ಭೇಷ್ ಎನ್ನುತ್ತಾರೆ, ಚಪ್ಪಾಳೆ ಹೊಡೆಯುತ್ತಾರೆ. ಹೀಗೆ ಹೃದಯ ಮೀಟುವ ಧ್ವನಿ ಝೇಂಕಾರದ ನಾದ ಮೊಳಗಬೇಕಿದ್ದರೆ ಶಾಸ್ತ್ರೀಯ ಆಧಾರದಲ್ಲಿ ನಿರ್ಮಿಸಿದ ಉಪಕರಣಗಳೇ ಬೇಕೆಂದರು ಸದಾನಂದ ರಾಯರು.