ಕಣಿಪುರ ಸುದ್ದಿಜಾಲ
ಕರ್ನಾಟಕದ ಚೆಂಡುಹೂ ರೈತರಿಗೆ ಓಣಂ ಸಂಭ್ರಮಾಚರಣೆ ಕಾಲದಲ್ಲಿ ಕೇರಳದಲ್ಲಿ ಒದಗುತ್ತಿದ್ದ ಬೇಡಿಕೆಯ ಮಾರುಕಟ್ಟೆಯ ಬಾಗಿಲು ಮುಚ್ಚಲಿದೆಯೇ..?
ಓಣಂ ಹಬ್ಬಕ್ಕೆ ಕಳೆ ಏರಿಸುವ ಹೂ ರಂಗೋಲಿಯಲ್ಲಿ ಅರಳಿ ನಳನಳಿಸುತ್ತಿದ್ದ ಚೆಲುವಿನ ಹೂನಗು ರೈತರ ಮುಖದಿಂದ ಮಾಯವಾಗಲಿದೆಯೇ..??ಈಗ ಕೇರಳವೇ ಹೂಕೃಷಿಯಲ್ಲಿ ಸ್ವಾವಲಂಬಿಯಾಗುವತ್ತ ಹೆಜ್ಜೆ ಎತ್ತಿದೆ. ಓಣಂ ಮಾರುಕಟ್ಟೆ, ಬೇಡಿಕೆಗಳ ಸಾಧ್ಯತೆ ಮನಗಂಡು ಕೇರಳದಲ್ಲಿ ನಡೆಸಿದ ಪ್ರಯೋಗಾತ್ಮಕ ಬೆಳೆ ಯಶಸ್ವಿಯಾಗಿದೆ. ಕೃಷಿ ಇಲಾಖೆ, ಕುಟುಂಬಶ್ರೀ, ಸ್ಥಳೀಯಾಡಳಿತ ಸಂಸ್ಥೆಗಳು ಕೈ ಜೋಡಿಸಿ ಹೂ ಕೃಷಿಗೆ ಮುಂದಾಗಿದ್ದು ನಿರೀಕ್ಷೆ ಮತ್ತು ಭರವಸೆಯ ಪ್ರತಿಫಲ ಕಂಡಿದೆ.
ಕೇರಳದ 793.83 ಹೆಕ್ಟೇರ್ ನಲ್ಲಿ ಈ ಬಾರಿ ಚೆಂಡು ಹೂ ಕೃಷಿ ನಡೆದಿದೆ. 700ಟನ್ ಗಿಂತ ಅಧಿಕ ಇಳುವರಿ ನಿರೀಕ್ಷೆಯಾಗಿದ್ದು, ಈಗ ಕೊಯ್ಲು ಆರಂಭವಾಗಿದೆ.
ಎಲ್ಲಾ ಜಿಲ್ಲೆಗಳಲ್ಲೂ ಕೃಷಿ ಇಲಾಖೆಯ ಬೆಂಬಲದಲ್ಲಿ ಕುಟುಂಬಶ್ರೀ ಕಾರ್ಯಕರ್ತೆಯರ ಮೂಲಕ ಇಂಥದ್ದೊಂದು ಪ್ರಯೋಗ ನಡೆದದ್ದು ಇದೇ ಮೊದಲು. ಕೇವಲ ಚೆಂಡು ಹೂ ಅಲ್ಲದೇ ಓಣಂ ಬೇಡಿಕೆಯ ನಾನಾ ಹೂಗಳ ಕೃಷಿ ನಡೆದಿದೆ. ಕುಟುಂಬ ಶ್ರೀ ಮೂಲಕ “ನಿರಪೊಲಿ” ಯೋಜನೆಯಂತೆ 1,253 ಹೆಕ್ಟೇರ್ ಜಾಗದಲ್ಲಿ 3ಸಾವಿರ ಮಹಿಳಾ ಕೃಷಿಕಸಂಘ ಹೂ ಕೃಷಿಗೆ ಕೈಜೋಡಿಸಿ ಬಂಪರ್ ಬೆಳೆ ತೆಗೆದು ಹೂನಗೆ ಚೆಲ್ಲಿವೆ.
ಓಣಂ ಕಾಲದಲ್ಲಿ ಕೇರಳದಲ್ಲಿ 10ದಿನಗಳ ಪರ್ಯಂತ ಚೆಂಡು ಹೂ ಸಹಿತ ಇತರ ಹೂಗಳಿಗೆ ವ್ಯಾಪಕ ಬೇಡಿಕೆ ಇದೆ. ಇದು ತಮಿಳ್ನಾಡು, ಕರ್ನಾಟಕದ ಹೂ ಕೃಷಿಕರ ಪಾಲಿಗೆ ವರದಾನವಾಗಿತ್ತು. ಆದರೀಗ ನಿಧಾನವಾಗಿ ಕೇರಳವೂ ಹೂ ಕೃಷಿಯಲ್ಲಿ ಸ್ವಾವಲಂಬನೆಯತ್ತ ಹೆಜ್ಜೆ ಎತ್ತಿರುವುದು ಕರುನಾಡಿನ ಕೃಷಿಕರಿಗೆ ಭವಿಷ್ಯದಲ್ಲಿ ಆತಂಕ ಮೂಡಿಸಲಿದೆ. ಆದರೆ ಕೇರಳದ ಬೇಡಿಕೆಯಷ್ಟನ್ನೂ ಕೇರಳದಲ್ಲೇ ಉತ್ಪಾದಿಸಲು ಸಾಧ್ಯವಾಗದು. ಆದರೆ ಹೂವಿನ ಬೆಲೆ ಏರಿಕೆಯನ್ನು ನಿಯಂತ್ರಿಸಬಹುದಾಗಿದೆ.ಈ ಬಾರಿ ಹೂವಿನ ಬೆಳೆ ಮಾಡಿದರೂ ಅದರ ಮಾರುಕಟ್ಟೆಗೆ ಸರಕಾರಿ ವ್ಯವಸ್ಥೆಗಳಿಲ್ಲ. ಕೃಷಿಕರು, ಕುಟುಂಬಶ್ರೀ ಸ್ವಂತ ಮಾರುಕಟ್ಟೆ ಕಂಡುಕೊಳ್ಳಬೇಕಾಗಿದೆ. ಇದೇ ವೇಳೆ ವಯನಾಡು ದುರಂತದ ಹಿನ್ನೆಲೆಯಲ್ಲಿ ಶೈಕ್ಷಣಿಕ ಸಂಸ್ಥೆ, ಸರಕಾರಿ ಸಂಸ್ಥೆ, ಯುವಕ ಸಂಘಗಳಲ್ಲಿ ಸಾರ್ವಜನಿಕ ಓಣಂ ಆಚರಣೆಗಳಿಲ್ಲವಾದುದು ಹೂವಿನ ಮಾರುಕಟ್ಟೆಗೆ ಹೊಡೆತ ನೀಡಲಿದೆ. ಆದರೆ ಭವಿಷ್ಯದಲ್ಲಿ ಬೇಡಿಕೆ, ಮಾರುಕಟ್ಟೆ ಎರಡೂ ಒದಗುವ ನಿರೀಕ್ಷೆಯನ್ನು ಕೃಷಿ ಇಲಾಖೆ ಹೊಂದಿದೆ. ಹೂ ಕೃಷಿಯಲ್ಲಿ ಸ್ವಾವಲಂಬಿಗಳಾಗಿ ಓಣಂ ಅವಧಿಯಲ್ಲಿ ಕುಟುಂಬಶ್ರೀ ವನಿತೆಯರಿಗೆ ಉಜ್ವಲ ಆರ್ಥಿಕ ಆದಾಯ ಕಂಡುಕೊಳ್ಳಬಹುದು ಎಂಬುದನ್ನು ಸಾರುತ್ತಾ ಕೇರಳದ ಬಂಜರು ಭೂಮಿಯಲ್ಲೂ ಚೆಲುವಿನ ಚಿತ್ತಾರದಿಂದ ಅರಳಿ ನಿಂತಿವೆ ವರ್ಣರಂಜಿತ ಚೆಂಡುಹೂಗಳು.