ಕಣಿಪುರ ಸುದ್ದಿಜಾಲ
ಕೇರಳದ ಸಿನಿಮೋದ್ಯಮದಲ್ಲಿ ಮಹಿಳೆಯರು ಎದುರಿಸುವ ವೃತ್ತಿಕ್ಷೇತ್ರದ ಸಮಸ್ಯೆಗಳ ಕುರಿತು ನ್ಯಾಯಮೂರ್ತಿ ಹೇಮಾ ಆಯೋಗವು ನೀಡಿದ ತನಿಖಾ ವರದಿಯನ್ನು ಕೇರಳ ಸರಕಾರ ಇಷ್ಟು ಕಾಲ ಮುಚ್ಚಿಟ್ಟದ್ದೇಕೆಂದು ಪ್ರಶ್ನಿಸಿ ಕೇರಳ ಹೈಕೋರ್ಟು ಸರಕಾರವನ್ನು ಕಟುವಾಗಿ ಟೀಕಿಸಿದೆ.
ನ್ಯಾ. ಹೇಮಾ ಆಯೋಗದ ವರದಿ 2021ರಲ್ಲೇ ಡಿಜಿಪಿ ಮೂಲಕ ಸರಕಾರಕ್ಕೆ ಲಭಿಸಿತ್ತಾದರೂ ಅನಂತರದ 3ವರ್ಷಗಳ ಕಾಲ ಈ ಕುರಿತು ಯಾವುದೇ ಕ್ರಮ ಕೈಗೊಳ್ಳದೇ ವರದಿಯನ್ನು ನಿರ್ಲಕ್ಷಿಸಿರುವುದು, ಅಡಗಿಸಿಟ್ಟಂತೆ ಮೌನವಾದುದು ಸರಕಾರದ ನಿಷ್ಕ್ರಿಯತೆಯನ್ನು ಸಾರುತ್ತಿದೆ ಎಂದು ಹೈಕೋರ್ಟು ಉಲ್ಲೇಖಿಸಿದೆ.
ಹೇಮಾ ಕಮೀಷನ್ ವರದಿಯ ಆಧಾರದಲ್ಲಿ ತನಿಖೆ ನಡೆಯಬೇಕು ಮತ್ತು ಅದಕ್ಕೆ ಪ್ರತ್ಯೇಕ ತನಿಖಾದಳ ರೂಪಿಸಬೇಕು. ಹೇಮಾ ಕಮೀಷನ್ ಆಯೋಗ ಸಮರ್ಪಿಸಿದ ಸಮಗ್ರ ತನಿಖಾವರದಿಯನ್ನು ಯಾವುದೇ ಗೌಪ್ಯತೆ ಇಲ್ಲದೇ ತನಿಖಾದಳಕ್ಕೆ ಒದಗಿಸಬೇಕು. ಇದರ ಆಧಾರದಲ್ಲಿ ತನಿಖೆ ನಡೆಯಬೇಕು ಎಂದು ಹೈಕೋರ್ಟ್ ಜಸ್ಟೀಸ್ ಎ.ಕೆ.ಜಯಶಂಕರ್, ಸಿ.ಎಸ್. ಸುಧಾ ಅವರನ್ನೊಳಗೊಂಡ ವಿಶೇಷ ನ್ಯಾಯಪೀಠ ಆದೇಶಿಸಿದೆ.
ಎರಡು ವಾರದ ಬಳಿಕ ಕೇಸನ್ನು ಮರು ಪರಿಗಣಿಸಲಾಗುವುದು. ಅಷ್ಟರಲ್ಲೇ ಸರಕಾರ ಈ ಕುರಿತಾದ ವರದಿ ಒಪ್ಪಿಸಬೇಕು ಮತ್ತು ತನಿಖಾ ವರದಿಯ ಗೌಪ್ಯತೆ ಕಾಪಾಡಬೇಕು.
ಹೈಕೋರ್ಟಿನ ನ್ಯಾಯಮೂರ್ತಿಯೊಬ್ಬರ ನೇತೃತ್ವದಲ್ಲಿ ನಡೆದ ತನಿಖಾ ವರದಿಯ ಕೆಲವೊಂದಷ್ಟು ಪುಟಗಳನ್ನು ಸರಕಾರ ಕತ್ತರಿಸುತ್ತದೆ ಎಂದರೆ ಏನರ್ಥ? ಎಂದು ಪ್ರಶ್ನಿಸಿರುವ ಸರಕಾರ ತನಿಖಾ ವರದಿಯನ್ನು ಮೂರುವರ್ಷ ತೆಪ್ಪಗಿಟ್ಟು ಮಾಡಿರುವುದಾದರೂ ಏನನ್ನು? ಈ ಮೌನಕ್ಕೆ ಏನರ್ಥ? ಎಂದು ಕಟುವಾಗಿ, ವಿಸ್ತೃತವಾಗಿ ಸರಕಾರವನ್ನು ವಿಮರ್ಶಿಸಿದೆ.
ತ್ಯೇಕ ತನಿಖಾದಳ ಹೇಮ ಕಮೀಷನ್ ವರದಿ ಆಧಾರದಲ್ಲೇ ತನಿಖೆ ನಡೆಸಬೇಕು. ವರದಿಯ ಗೌಪ್ಯತೆ ಕಾಪಾಡಬೇಕು. ದೂರುದಾತರ ಮತ್ತು ಆಪಾದಿತರ ಖಾಸಗಿತನ ಪರಿಗಣಿಸಿಯೇ ತನಿಖೆ ನಡೆಸಬೇಕು ಎಂದು ಪ್ರತ್ಯೇಕ ತನಿಖಾ ದಳಕ್ಕೆ ನ್ಯಾಯಪೀಠ ಆದೇಶಿಸಿದೆ. ಕೇರಳದ ಸಮಾಜ ಭಿನ್ನ ಸಾಮಾಜಿಕ ವಾತಾವರಣ ಹೊಂದಿದೆ. ಕೇವಲ ಸಿನಿಮೋದ್ಯಮ ಮಾತ್ರವಲ್ಲ, ಸಮಾಜದ ಇನ್ನಿತರ ವಲಯದಲ್ಲೂ ಮಹಿಳೆಗೆ ಸುರಕ್ಷಿತ ಉದ್ಯೋಗ ವಾತಾವರಣ ನಿರ್ಮಾಣವಾಗಬೇಕು ಎಂದು ಹೈಕೋರ್ಟಿನ ನ್ಯಾಯಪೀಠ ಹೇಳಿದೆ.