ಕಣಿಪುರ ಸುದ್ದಿಜಾಲ
ಕುಂಬಳೆ ಸಮೀಪದ ಮೊಗ್ರಾಲು, ನಾಂಗಿ ಪ್ರದೇಶದಲ್ಲಿ ರೈಲು ಡಿಕ್ಕಿಯಾಗಿ ನವಿಲುಗಳು ದಾರುಣ ಸಾವನ್ನಪ್ಪುವ ಘಟನೆಗಳು ಹೆಚ್ಚುತ್ತಿವೆ. ಕಳೆದೊಂದೇ ವಾರದಲ್ಲಿ 5ರಷ್ಟು ನವಿಲುಗಳು ರೈಲಿನಡಿಗೆ ಸಿಲುಕಿ ಸಾವನ್ನಪ್ಪಿದ ಬಗ್ಗೆ ಸ್ಥಳೀಯರು ತಿಳಿಸಿದ್ದಾರೆ.
ರಾಷ್ಟ್ರಪಕ್ಷಿ ನವಿಲುಗಳು ಕಾಡು ತೊರೆದು ನಾಡು ಸೇರಿದ್ದಲ್ಲದೇ ಈಗ ಸಮುದ್ರ ದಂಡೆಯ ತೀರದಲ್ಲೂ ಕಾಣಿಸುತ್ತಿದೆ. ಮಂಗಳೂರು – ಕಾಸರಗೋಡು ನಡುವಣ ರೈಲುಮಾರ್ಗ ಸಮುದ್ರ ದಂಡೆಯಲ್ಲೇ ಸಾಗುತ್ತಿದ್ದು, ಇಲ್ಲಿ ರೈಲಿನಡಿಗೆ ನವಿಲು ಸಿಲುಕಿ ಸಾಯುವುದು ಹೇಗೆಂಬುದು ಪ್ರಶ್ನೆ ಸೃಷ್ಠಿಸಿದೆ.
ಕಾಸರಗೋಡಿನಲ್ಲಿ ನವಿಲುಗಳ ಸಂಖ್ಯೆ ಇತ್ತೀಚಿಗೆ ವ್ಯಾಪಕಗೊಂಡಿದೆ. ಎಲ್ಲಾ ಪ್ರದೇಶಗಳಲ್ಲೂ ನವಿಲು ಕಂಡುಬರುತ್ತಿದೆ. ನವಿಲುಗಳ ಸಂತಾನೋತ್ಪತ್ತಿ ಹೆಚ್ಚುತ್ತಿರುವುದು ನಿಯಂತ್ರಿಸಲಾಗದ ಸವಾಲಾಗಿ ಮಾರ್ಪಟ್ಟಿದೆ.
ರಾಷ್ಟ್ರಪಕ್ಷಿ ನವಿಲು ರೈಲಿಗೆ ಬಡಿದು ಸಾವಪ್ಪುತ್ತಿರುವುದು ಮತ್ತು ರೈಲು ಹಳಿಯ ಬದಿಯಲ್ಲೇ ಅದರ ಅನಾಥ ಕಳೇಬರ ಕಾಣುತ್ತಿರುವುದು ಹೃದಯ ವಿದ್ರಾವಕ ದೃಶ್ಯ. ನಾಡಿನೆಲ್ಲಡೆ ತುಂಬುತ್ತಾ ಕೃಷಿಗೆ ಉಪಟಳ ನೀಡುತ್ತಾ ತನ್ನ ಸಂಖ್ಯೆಯನ್ನು ಗಣನೀಯ ಹೆಚ್ಚಿಸಿಕೊಂಡ ನವಿಲುಗಳನ್ನು ನಿಯಂತ್ರಿಸುವುದು ಹೇಗೆ?
ಇದು ಅರಣ್ಯ ಇಲಾಖೆಯ ಮುಂದಿರುವ ಮಿಲಿಯನ್ ಡಾಲರ್ ಪ್ರಶ್ನೆ.
ಕಾಡಿಂದ ಬಂದು ನಾಡಲ್ಲಿ ನವಿಲು ಸಂತಾನೋತ್ಪತ್ತಿ ಹೆಚ್ಚಿಸಲು ಕಾರಣವೇನು?
ಸಹಜವಾಗಿಯೇ ನವಿಲುಗಳ ವೈರಿಯಾದ ಗುಳ್ಳೆನರಿ, ಕಾಡುನಾಯಿ, ಪುನುಗುಬೆಕ್ಕು ಮೊದಲಾದುವುಗಳ ಸಂಖ್ಯೆ ನಾಡಲ್ಲಿ ಕ್ಷೀಣಿಸಿದೆ. ಇದರಿಂದಾಗಿ ಜನನಿಬಿಡ ಪ್ರದೇಶಗಳಲ್ಲೂ ನೆಲೆಕಂಡು ನವಿಲುಗಳು ಸಂತಾನೋತ್ಪತ್ತಿ ಮಾಡುತ್ತವೆ. ಜತೆಗೆ ಕೃಷಿ ಸಹಿತವಾದ ಆಹಾರಗಳೂ ಯಥೇಚ್ಛ ದೊರೆಯುತ್ತದೆ. ಹಾಗೆಯೇ ರಾಷ್ಟ್ರಪಕ್ಷಿ ಮತ್ತು ಮಯೂರವಾಹನ ಎಂಬ ಗಣನೆಯಿಂದ ನವಿಲಿಗೆ ತೋಂದರೆಗಳಾಗುತ್ತಿಲ್ಲ. ಈ ಸುರಕ್ಷತೆಯೇ ನವಿಲುಗಳ ಸಂಖ್ಯಾ ಬಾಹುಳ್ಯಕ್ಕೆ ಕಾರಣವಾಗಿವೆ.