ಕಣಿಪುರ ಸುದ್ದಿಜಾಲ
ಕೇರಳದ ವಯನಾಡಿನ ಮೂರು ಗ್ರಾಮಗಳನ್ನೇ ಕೊಚ್ಚಿಕ್ಕೊಂಡೊಯ್ದು ನೂರಾರು ಸಾವು,ನೋವುಗಳ ಮರಣ ಮೃದಂಗ ಭಾರಿಸಿದ ನಾಡಿನಲ್ಲೀಗ ನಿರುದ್ಯೋಗ ಮತ್ತು ಹಸಿವಿನ ಕತೆಗಳ ನೀರವ ಮೌನ ಮಾತಾಡುತ್ತಿದೆ..
ಜರ್ಜರಿತವಾಗಿ ಛಿದ್ರಗೊಂಡ ನೆಲದಲ್ಲೇ ಜೀವನದ ನಾನಾ ಬವಣೆಯ ಕತೆಯ ಕಣ್ಣೀರು ಕಾಣುತ್ತಿದೆ.
ವಯನಾಡು ಜಿಲ್ಲೆಯ ಮೇಪ್ಪಡಿ ಪಂಚಾಯಿತಿಯ ಮೂರು ಗ್ರಾಮ ನಾಶಗೊಂಡ ದುರಂತ ರಾಷ್ಟ್ರೀಯ ದುರಂತದಂತೆ “ವಯನಾಡು ದುರಂತ ಎಂದೇ ಬಿಂಬಿಸಲ್ಪಟ್ಟು ಪ್ರಚಾರವಾದ ಕಾರಣ ಅನಂತರದಲ್ಲಿ ವಯನಾಡಿಗೆ ಪ್ರವಾಸಿಗರೊಬ್ಬರೂ ಕಾಲೂರುತ್ತಿಲ್ಲ. ಪ್ರವಾಸಿಗರ ಸ್ವರ್ಗವೆಂದೇ ಬಿಂಬಿತವಾಗಿ ನಯನಮನೋಹರ ತಾಣಗಳಿಂದ ಮನಸೆಳೆಯುತ್ತಿದ್ದ ವಯನಾಡೀಗ ಕಂಬನಿಯ ಕತೆಯನ್ನಷ್ಟೇ ಹೇಳುತ್ತದೆ.
ಇಲ್ಲಿ ಈಗ ಪ್ರವಾಸಿಗರ ಕೇಕೆ ಕೇಳುತಿಲ್ಲ. ಮಧುಚಂದ್ರ ಆಚರಿಸಲು ಬರುತ್ತಿದ್ದ ನವದಂಪತಿಗಳ ಕಿಲಕಿಲ ನಗು ಕಾಣುತ್ತಿಲ್ಲ. ಉಲ್ಲಾಸದ ಪ್ರವಾಸಕ್ಕೆ ಬರುತ್ತಿದ್ದವರ ನೆರಳು ಕೂಡಾ ಈ ಕಡೆ ಸುಳಿಯುತ್ತಿಲ್ಲ. ವಯನಾಡು ಈಗ ಬರಿದಾಗಿದೆ. ಮೂಕವಾಗಿದೆ. ಹೊರನಾಡಿಂದ ಬರುತ್ತಿದ್ದ ಪ್ರವಾಸಿಗರೂ ಈ ನಾಡನ್ನು ಕೈಬಿಟ್ಟಿದ್ದಾರೆ.
ವಯನಾಡಿನ ಆಕರ್ಷಣೆಯೇ ರಮಣೀಯ ಪ್ರವಾಸೋದ್ಯಮ. ಪರಿಣಾಮ ಕಾಡು,ಮೇಡಿನ ನಾಡಿನಲ್ಲಿ ರೆಸಾರ್ಟ್ ಸಹಿತ ಟೂರಿಸಂ ಪ್ರಾಜೆಕ್ಟ್ ಗಳು ಯಥೇಚ್ಛ ಇದ್ದುವು. ಆದರೆ ವಯನಾಡು ಭೂಕುಸಿತ ದುರಂತದ ಬಳಿಕ ಇಲ್ಲಿಗೆ ಯಾರೂ ಕಾಲಿಡುತ್ತಿಲ್ಲ. ದೇಶದಲ್ಲೇ ವಯನಾಡು ಸುರಕ್ಷಿತವಲ್ಲ ಎಂಬ ಭೀತಿ ಹರಡಿದೆ. ಪರಿಣಾಮ ಐಷಾರಾಮಿ ಹೋಟೆಲ್, ರಿಸಾರ್ಟುಗಳು ಪ್ರವಾಸಿಗರಿಲ್ಲದೆ ಬಿಕೋ ಅನ್ನುತ್ತಿವೆ. ಬುಕ್ಕಿಂಗ್ ಮಾಡಿದವರೆಲ್ಲ ಕ್ಯಾನ್ಸೆಲ್ ಮಾಡಿದ್ದಲ್ಲದೇ ಯಾರೊಬ್ಬರೂ ಹೊಸತಾಗಿ ಬರುತ್ತಿಲ್ಲ. ಇಲ್ಲಿ ದುಡಿಯುತ್ತಿದ್ದ ನೂರಾರು ಮಂದಿ ಈದರಿಂದಾಗಿಯೇ ಈಗ ನಿರುದ್ಯೋಗಿಗಳಾಗಿದ್ದಾರೆ.
ಪರಿಣಾಮ ಕಳೆದ ತಿಂಗಳೊಂದರಲ್ಲೇ 30ಕೋಟಿ ರೂಗಳ ನಷ್ಟ ಗುರುತಿಸಲಾಗಿದೆ.
ಟೂರಿಸಂ ವಯನಾಡಿನ ಪ್ರಧಾನ ಆದಾಯದ ದಾರಿ. ರೆಸಾರ್ಟ್, ಹೋಟೆಲ್ ಗಳ ಹೊರತು ಚಿಕ್ಕಪುಟ್ಟ ಕ್ಯಾಂಟೀನು, ಪೆಟ್ಟಿಗೆ ಅಂಗಡಿ, ಟ್ಯಾಕ್ಸಿ, ರಿಕ್ಷಾ ಸಹಿತ ಈ ನಾಡಿನ ಸರ್ವ ವಲಯಕ್ಕಿದು ಆದಾಯ ರಹಿತ ನಿರುದ್ಯೋಗವನ್ನು ತಂದಿತ್ತಿದೆ.
ಪ್ರವಾಸಿಗರಿಲ್ಲದ ಕಾರಣ ಬಾಡಿಗೆಯೇ ಇಲ್ಲದ ರಿಕ್ಷಾ ಚಾಲಕರು, ಟ್ಯಾಕ್ಸಿಯವರು ಒಂದೆಡೆಯಾದರೆ ಸಣ್ಣಪುಟ್ಟ ವ್ಯಾಪಾರದ ಪೆಟ್ಟಿಗೆ ಅಂಗಡಿಯವರೂ ಜನರಿಲ್ಲದೇ ಕಂಗಾಲಾಗಿದ್ದಾರೆ. ಬೇಂಕ್ ಲೋನ್ ತೆಗೆದು ವಾಹನ ಖರೀದಿ, ಮನೆ ನಿರ್ಮಾಣ ಇನ್ನಿತ್ಯಾದಿ ಮಾಡಿದವರು ಪ್ರತಿಕೂಲ ವಾತಾವರಣದಲ್ಲಿ ಅಸಹಾಯಕರಾಗಿದ್ದಾರೆ.
ಟೂರಿಸಂ ಅವಲಂಬಿಸಿ ಸುಮಾರು 10ಸಾವಿರದಷ್ಟು ಜನರು ಇಲ್ಲಿ ಬೇರೆ, ಬೇರೆ ವಲಯದಲ್ಲಿ ಉದ್ಯೋಗ ಕಂಡಿದ್ದರು. ಆದರೆ ವಯನಾಡು ಭೂಕುಸಿತದ ಬಳಿಕ ಇವರು ನಿರುದ್ಯೋಗದಿಂದ ಅಕ್ಷರಶ: ಬಳಲಿದ್ದಾರೆ. ಇದರ ಪರಿಹಾರಕ್ಕೆ ಸರಕಾರದ ಪ್ಯಾಕೇಜ್ ನಿರೀಕ್ಷೆಯಲ್ಲಿ ಅವರಿದ್ದಾರೆ.
ವನ್ಯಮೃಗ ಹಾವಳಿ ಹೆಚ್ಚಳ
ಮೇಪ್ಪಡಿ ಪಂಚಾಯತಿನ ಮೂರು ಗ್ರಾಮಗಳು ರಣಭೀಕರ ಭೂಕುಸಿತದಿಂದ ಛಿದ್ರಗೊಂಡಾಗ ಈ ನಾಡಿನ , ಇಲ್ಲಿನ ಕಾಡಿನ ಪ್ರಾಕೃತಿಕ ದಾರಿಗಳೇ ಮುಚ್ಚಿವೆ. ವನ್ಯ ಮೃಗಗಳು ದಾರಿ ತಪ್ಪಿ ಅಲೆದಾಡುತ್ತಿವೆ. ಕಾಡಾನೆಗಳು ಕಾಡು ಸೇರಲಾಗದೇ ಊರಬದಿಯಲ್ಲೇ ತಿರುಗಾಡುತ್ತಿವೆ. ಇದರೊಂದಿಗೆ ಒಂದು ನಾಡನ್ನು ಮರು ನಿರ್ಮಿಸುವ ಕಾಯಕ ನಡೆಯಬೇಕಿದೆ. ಜನಸಂಚಾರಗಳು ವಿರಳವಾದ ನಾಡಲ್ಲೀಗ ವನ್ಯಮೃಗಗಳು ಸುಖವಿಹಾರ ನಡೆಸುತ್ತಿವೆ.
ಮಹಾ ದುರಂತ ನಡೆದ ನೆಲದ ಚಿತ್ರಣವೇ ಭೀಕರ..
ಅಲ್ಲಿ ಮತ್ತೆ ಹಸಿರ ಸಿರಿಯೊಂದಿಗೆ ಜೀವದುಸಿರಿಗೆ ಭರವಸೆ ಮೂಡಿಸುವ ಕೆಲಸ ನಡೆಯಬೇಕಾಗಿದೆ.