ದೇಶದ ರಾಜಧಾನಿ ದೆಹಲಿ ಸಹಿತ ಮಹಾನಗರದ ಈ ಬಾರಿಯ ದೀಪಾವಳಿಗೆ ಕರಿನೆರಳು ಬಿದ್ದಾಗಿದೆ!
ಈ ಬಾರಿಯ ದೀಪಾವಳಿ ಪಟಾಕಿ ರಹಿತವಾಗಲಿದ್ದು,ಅದು ಸಂಭ್ರಮದ ಶೋಭೆ ಕೆಡಿಸಲಿದೆ.
ಮುಂಬರುವ ಚಳಿಗಾಲದ ದಟ್ಟ ವಾಯುಮಾಲಿನ್ಯ ನಿಯಂತ್ರಿಸುವ ಉದ್ದೇಶದಿಂದ ರಾಜಧಾನಿ ದೆಹಲಿಯಲ್ಲಿ ಪಟಾಕಿ ಉತ್ಪಾದನೆ, ಮಾರಾಟವನ್ನು ನಿಷೇಧಿಸಿ ಇಂದು ದೆಹಲಿ ಸರಕಾರದ ಸಚಿವರು ಆದೇಶಿಸಿದ್ದಾರೆ.
ಇಂದಿನಿಂದ ಮುಂಬರುವ 2025 ಜನವರಿ ತನಕ ಈ ಆದೇಶ ಜ್ಯಾರಿಯಲ್ಲಿದ್ದು ಪರಿಸರ ಮಲಿನೀಕರಣ ತಡೆಗೆ ಜನರು ಸಹಕರಿಸುವಂತೆ ದೆಹಲಿಯ ಪರಿಸರ ಖಾತೆ ಸಚಿವ ಗೋಪಾಲ್ ರೈ ವಿನಂತಿಸಿದ್ದಾರೆ.
ಪಟಾಕಿ ನಿರ್ಮಾಣ, ಮಾರಾಟವನ್ನು ಆನ್ಲೈನಿನಲ್ಲೂ ತಡೆಯಲಾಗಿದ್ದು, ಪಟಾಕಿಯಿಂದಾಗಿ ವ್ಯಾಪಕ ವಾಯು ಮಾಲಿನ್ಯವಾಗುತ್ತದೆಂದು ಸಚಿವರು ತಿಳಿಸಿದರು.
ಚಳಿಗಾಲದಲ್ಲಿ ವರ್ಷಂಪ್ರತಿ ದೆಹಲಿ ಸಹಿತ ದೇಶದ ಪ್ರಮುಖ ನಗರಗಳಲ್ಲಿ ವಾಯುಮಾಲಿನ್ಯ ಹೆಚ್ಚಾಗುತ್ತಿದೆ.
ದೆಹಲಿಯ ವಾಯುಮಾಲಿನ್ಯ ಹಿನ್ನೆಲೆಯಲ್ಲಿ ಪಟಾಕಿಗೆ ನಿಷೇಧ ಹೇರಿದ ಕ್ರಮ ದೇಶದ ಇತರೆಡೆಗೂ ಆತಂಕ ಮೂಡಿಸಿದೆ. ದೀಪಾವಳಿ ಹಬ್ಬ ಸಮೀಪಿಸಿದ ಹಿನ್ನೆಲೆಯಲ್ಲಿ ಪಟಾಕಿ ಉದ್ದಿಮೆಗೆ ಇದು ಆತಂಕ ಸೃಷ್ಠಿಸಿದೆ. ಕರ್ನಾಟಕದಲ್ಲಿ ಬೆಂಗಳೂರಿನಂತೆಯೇ ಮಂಗಳೂರು, ಮೈಸೂರಿನಲ್ಲೂ ವಾಯುಮಾಲಿನ್ಯ ಅಪಾಯ ಮಟ್ಟ ತಲುಪಿದೆಯೆಂದು ಗ್ರೀನ್ ಫೌಂಡೇಷನ್ ಮೊನ್ನೆಯಷ್ಟೇ ಎಚ್ಚರಿಕೆ ನೀಡಿತ್ತು. ಪರಿಸರದ ನೆಲ,ಜಲ,ವಾಯು ಸಂರಕ್ಷಣೆಯಲ್ಲಿ ನಾಗರಿಕ ಸಮಾಜ ಎಚ್ಚರಿಕೆಯ ಹೆಜ್ಜೆ ಇಡದಿದ್ದಲ್ಲಿ ಸರಕಾರವೇ ಕಾನೂನು ಕ್ರಮ ಕೈಗೊಳ್ಳುವಂತಾಗಲಿದೆ.
ಪಟಾಕಿಗಿಂತಲೂ ವಾಹನ ದಟ್ಟಣೆಯೇ ವಾಯುಮಾಲಿನ್ಯಕ್ಕೆ ಪ್ರಧಾನ ಕಾರಣವಾಗಿದ್ದು, ಹಳೆಯ ವಾಹನಗಳ ಸಂಚಾರ ತಡೆಯಬೇಕೆಂಬ ಆಗ್ರಹ ಜ್ಯಾರಿಯಲ್ಲಿರುವಾಗಲೇ ಪಟಾಕಿ ಉದ್ಯಮವನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ.