ಕಣಿಪುರ ಸುದ್ದಿಜಾಲ
ಕುಂಬ್ಳೆಯ ಪ್ರಸಿದ್ದ ಕಣಿಪುರ ಶ್ರೀಗೋಪಾಲಕೃಷ್ಣ ದೇವಾಲಯದಲ್ಲಿ ಜರಗುವ ಗಣೇಶೋತ್ಸವದ ಧಾರ್ಮಿಕ ಸಭೆಯಲ್ಲಿಂದು ನಾಡಿನ ನಾಲ್ವರು ಪ್ರಮುಖ ಸಾಧಕರನ್ನು ಗೌರವಿಸಲಾಯಿತು.
ಶ್ರೀ ಕ್ಷೇತ್ರದ ಜೀರ್ಣೋದ್ಧಾರ ಸಹಿತ ಬ್ರಹ್ಮಕಲಶಕ್ಕೆ ಬೃಹತ್ ಮೊತ್ತದ ಉದಾರ ದಾನಗೈದ ಕೊಡುಗೈದಾನಿ, ಉದ್ಯಮಿ ಕೆ.ಕೆ.ಶೆಟ್ಟಿ ಹಾಗೂ ಮತ್ತೋರ್ವ ದಾನಿ, ಉದ್ಯಮಿ ಕೆ.ಪಿ.ರೈ ಕುತ್ತಿಕ್ಕಾರ್ ಮತ್ತು ನಾಟ್ಯನಿಲಯಂ ಕುಂಬ್ಳೆಯ ಭರತನಾಟ್ಯ ಶಿಕ್ಷಕಿ, ಕಲಾವಿದೆ ಡಾ. ವಿದ್ಯಾಲಕ್ಷ್ಮಿ ಬೇಳ, ಕು. ವರ್ಷಾ ಪೂಜಿತ್ತಾಯ,ಮತ್ತು ಉದಯೋನ್ಮುಖ ಪ್ರತಿಭೆ ಮಾ. ಹಂಶಿತ್ ಆಳ್ವ ಇವರನ್ನು ದೇವಳದಲ್ಲಿ ಸನ್ಮಾನಿಸಲಾಯಿತು.
ಕಣಿಪುರದ ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿ ಮತ್ತು ಕ್ಷೇತ್ರ ಜೀರ್ಣೋದ್ಧಾರ ಬ್ರಹ್ಮಕಲಶ ಸಮಿತಿ ವತಿಯಿಂದ ಸಾಧಕರಿಗೆ ಜಂಟಿ ಸನ್ಮಾನ ಗೌರವ ನೀಡಲಾಯಿತು.
ನನ್ನ ಆರಂಭವೇ ಕಣಿಪುರದಿಂದ..
——————
ನಾನು ಎಳವೆಯಲ್ಲಿ ಕಣ್ಣರಳಿಸಿ ಮೊದಲು ನೋಡಿದ ದೇವರೇ ಕಣಿಪುರದ ಶ್ರೀಕೃಷ್ಣ. ನನ್ನ ದಾನಧರ್ಮಾದಿ ಸೇವೆಯೂ ಚಿಕ್ಕದಾಗಿ ಆರಂಭಗೊಂಡದ್ದು ಇಲ್ಲಿಂದಲೇ. ನಾನು ಮುಂಡಪಳ್ಳ ರಾಜರಾಜೇಶ್ವರಿ ಕ್ಷೇತ್ರವನ್ನು ಏಕಾಂಗಿಯಾಗಿ ಸ್ಥಾಪಿಸಿದ್ದೇನಾದರೂ ಅದಕ್ಕೆಲ್ಲ ಕಾರಣ ನನ್ನ ಉದ್ಯಮದ ಯಶಸ್ಸು.ಈ ಯಶಸ್ಸಿನ ಹಿಂದೆ ಕಣಿಪುರದ ಕೃಷ್ಣಾನುಗ್ರಹ ಇದೆ. ಈಗ ಇಲ್ಲಿ ಅವಳಿ ಸನ್ಮಾನವಿತ್ತುದನ್ನು ದೇವಾನುಗ್ರಹವೆಂದು ಸ್ವೀಕರಿಸುವುದಾಗಿ ಉದ್ಯಮಿ, ದಾನಿ, ಧಾರ್ಮಿಕ ಪೋಷಕ ಕೆ.ಕೆ.ಶೆಟ್ಟಿ ನುಡಿದರು.
ಕಣಿಪುರ ಸಾರ್ವಜನಿಕ ಗಣೇಶೋತ್ಸವ ಸಮಿತಿ ಸಂಚಾಲಕ ಕೆ.ಶಂಕರ ಆಳ್ವ ಸ್ವಾಗತಿಸಿ ಪ್ರಸ್ತಾವಿಕ ಮಾತಾಡಿ ಸಾಧಕ ಪ್ರತಿಭೆಗಳನ್ನು ಪರಿಚಯಿಸಿದರು. ಅವರು ನಾಡಿಗೆ ಇತ್ತ ಕೊಡುಗೆಗಳನ್ನು ಪ್ರಶಂಸಿಸಿದರು.
ವಿಟ್ಲ ಮೂರ್ಕಜೆ ಮೈತ್ರೇಯಿ ಗುರುಕುಲದ ಜಗನ್ನಾಥ ಕಾಸರಗೋಡು ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಗಣೇಶೋತ್ಸವದಂಥ ಉತ್ಸವಗಳು ಧಾರ್ಮಿಕ ಪ್ರಧಾನ್ಯತೆಯಿಂದ ಜರುಗಿ, ಅಂತರಾತ್ಮ ಬೆಳಗಿಸಬೇಕೇ ಹೊರತು ಅದು ಡಿಜೆ ಸದ್ದಿನ ಬೀದಿ ಗುಲ್ಲಾಗಬಾರದು ಎಂದರು. ಜತೆಗೆ ಮೈತ್ರೇಯಿ ಗುರುಕುಲ ಶಿಕ್ಷಣ ಸಂಸ್ಥೆಯ ಪರಿಚಯವನ್ನಿತ್ತರು. ಈ ಸಂದರ್ಭ ಕುಂಬ್ಳೆ ಗಣೇಶೋತ್ಸವ ಸಮಿತಿ ವತಿಯಿಂದ ಗುರುಕುಲಕ್ಕೆ ದೇಣಿಗೆ ನೀಡಲಾಯಿತು.
ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ಡಾ.ಕಿಶೋರ್ ಕುಂಬ್ಳೆ ಅಧ್ಯಕ್ಷತೆ ವಹಿಸಿದರು. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ರಘುನಾಥ ಪೈ ಕುಂಬ್ಳೆ ಉಪಸ್ಥಿತರಿದ್ದರು.
ಕಲಾರತ್ನ ಶಂನಾಡಿಗ ಕುಂಬಳೆ ಕಾರ್ಯಕ್ರಮ ನಿರೂಪಿಸಿದರು. ವಿಜಯಲಕ್ಷ್ಮಿ ಶಂನಾಡಿಗ, ಮಧುಸೂಧನ ಕಾಮತ್, ಪ್ರಶಾಂತ್ ಭಟ್, ಶಿವಾನಂದ ಕುಂಬ್ಳೆ, ದಯಾನಂದ ಕುಂಬ್ಳೆ ಸನ್ಮಾನಪತ್ರ ವಾಚಿಸಿದರು.
ಗ್ರಾ.ಪಂ.ಸದಸ್ಯೆ ವಿದ್ಯಾ ಪೈ ಕುಂಬಳೆ ಪ್ರಾರ್ಥನೆ ಹಾಡಿದರು.