ಕಣಿಪುರ ಸುದ್ದಿಜಾಲ
ಕೇರಳದ ಪ್ರಸಿದ್ದ ಗುರುವಾಯೂರು ದೇಗುಲದಲ್ಲಿಂದು ಬರೋಬ್ಬರಿ 356 ವಿವಾಹಗಳು ಜರುಗಿ ದಾಖಲೆ ನಿರ್ಮಿಸಿದೆ.
ಈ ಹಿಂದೆ 2017ರಲ್ಲಿ 270ಮದುವೆ ನಡೆದದ್ದು ಈ ವರೆಗಿನ ದಾಖಲೆಯಾಗಿತ್ತು.
ಕೇರಳದ ಬಹುತೇಕರಿಗೆ ಬದುಕಿನ ಮದುವೆಯೆಂಬ ಮಂಗಳಕಾರ್ಯವನ್ನು ಗುರುವಾಯೂರು ದೇಗುಲದಲ್ಲಿ ನಡೆಸಬೇಕೆಂಬುದು ಜೀವನದ ಕನಸು. ಹೀಗಾಗಿ ದೈನಂದಿನ ಅನೇಕ ಮದುವೆಗಳು ಅಲ್ಲಿ ಜರುಗುತ್ತಲೇ ಇರುತ್ತದೆ. ಇದಕ್ಕೆಂದೇ ನಾಲ್ಕು ಕಲ್ಯಾಣ ಮಂಟಪಗಳಿದ್ದು ಮದುವೆ ಬುಕ್ಕಿಂಗ್ ಗೆ ಅನುಸಾರವಾಗಿ ದೇವಸ್ವಂ ಮಂಡಳಿ ವತಿಯಿಂದ ಸೌಲಭ್ಯ ಸಹಿತ ಮಂಟಪ ಒದಗಿಸಲಾಗುತ್ತದೆ.
ಈ ಬಾರಿಯ ಸೆ.8ರಂದು ಮದುವೆಗೆ ಭಾರೀ ಬೇಡಿಕೆಯ ದಿನವಾಗಿ ಕಂಡುಬಂದಿದೆ. ಈ ದಿನವೇ ಬೇಕೆಂದು ಬಯಸಿ ಬಂದವರಿಗೆಲ್ಲ ಮದುವೆಗೆ ಅವಕಾಶ ನೀಡಿ ವ್ಯವಸ್ಥೆ ಒದಗಿಸಿದ್ದು ದೇವಸ್ವಂ ಮಂಡಳಿಯ ಹೆಗ್ಗಳಿಕೆ. ನಿನ್ನೆ ಮಧ್ಯಾಹ್ನದ ತನಕ ಚೀಟಿ ಮಾಡಿಸಿ ಮುಂಗಡ ಬುಕ್ಕಿಂಗ್ ಮಾಡಿದ 356 ಜೋಡಿಗಳ ಮದುವೆಗೆ ಇಂದು ಅವಕಾಶ ಕಲ್ಪಿಸಲಾಗಿದೆ.
ಇಂದು ಮುಂಜಾನೆ 4ಗಂಟೆಗೆ ಚೀಟಿಯ ಸರದಿ ಪ್ರಕಾರ ಮದುವೆ ಆರಂಭಗೊಂಡಿತ್ತು. ಒಟ್ಟು 6ಮಂಟಪಗಳನ್ನು ಏರ್ಪಡಿಸಿ, ಅದಕ್ಕೆಲ್ಲಾ ವಾದ್ಯವೃಂದವನ್ನೂ ನೀಡಲಾಗಿತ್ತು. ವ್ಯವಸ್ಥೆಗೆಂದೇ ಅನೇಕ ಪೋಲೀಸರ ನೇಮಕವೂ ನಡೆದಿತ್ತು. ಒಂದು ಮದುವೆಯ ತಂಡದಲ್ಲಿ ವಧೂವರನಲ್ಲದೇ ಛಾಯಾಗ್ರಾಹಕ ಸಹಿತ ತಲಾ 25ಮಂದಿಗೆ ಮಂಟಪ ಪ್ರವೇಶಾವಕಾಶ ನೀಡಲಾಗಿತ್ತು. ಮುಂಜಾನೆ 4ರಿಂದ ಮಧ್ಯಾಹ್ನದ ವೇಳೆಗೆ 356ಜೋಡಿಗಳು ಹಸಮಣೆ ಏರಿದ್ದು ಕೇರಳದ ಮದುವೆ ಚರಿತ್ರೆಯಲ್ಲೇ ದಾಖಲೆಯಾಗಿದೆ.
ಈ ಮದುವೆ ಸಂಭ್ರಮದಲ್ಲಿ ವಿವಾಹಿತರಾದ ಜೋಡಿಗಳ ಮದುವೆಯಂತೆಯೇ ಇದನ್ನು ಕಣ್ತುಂಬಿಕೊಂಡವರು ಕೂಡಾ ಒಂದೇ ದಿನದಲ್ಲಿ ಇಷ್ಟೊಂದು ಮದುವೆಯಲ್ಲಿ ಪಾಲ್ಗೊಂಡ ದಾಖಲೆಗೂ ಸೇರುತ್ತಾರೆ.
ಗುರುವಾಯೂರು ದೇಗುಲದಲ್ಲಿ ನಡೆಯುವುದು ಸರಳ ವಿವಾಹ. ಆಗರ್ಭ ಶ್ರೀಮಂತರಿಂದ ಮೊದಲ್ಗೊಂಡು ಜನಸಾಮಾನ್ಯರ ತನಕ ಎಲ್ಲರಿಗೂ ಒಂದೇ ವಿಧಾನ, ಒಂದೇ ಸಮಾಯಾವಕಾಶ. ಇಲ್ಲಿ ದೇವರ ನಡೆಯ ಮಂಟಪದಲ್ಲಿ ಮದುವೆಗಷ್ಟೇ ಅವಕಾಶ. ಉಳಿದ ಕಾರ್ಯಕ್ಕರಮಗಳೇನಿದ್ದರೂ ಮದುವೆ ತಂಡಗಳು ಖಾಸಗಿಯಾಗಿ ಸಭಾಂಗಣ ಗೊತ್ತುಪಡಿಸಿ ಮಾಡಬೇಕು. ಹೀಗಿದ್ದರೂ ಗುರುವಾಯೂರಿನಲ್ಲಿ ಮದುವೆ ಆಗಬೇಕೆನ್ನುವುದು ಅನೇಕರಿಗೆ ಬಯಕೆ. ಇನ್ನನೇಕರಿಗೆ ಇದು ಹರಕೆ.