ವಿದೂಷಕ ವೇಷ ಧರಿಸಿ ಭಿಕ್ಷಾಟನೆ ನಡೆಸಿ ಲಕ್ಷಾಂತರ ರೂ ಗಳಿಸಲಿಕ್ಕಾಗುತ್ತದೆಯೇ..?
ಹೀಗೆ ಗಳಿಸಿದ ದುಡ್ಡನ್ನು ಅನಾಥಾಲಯಕ್ಕೆ ನೀಡಿ ಸಹಾಯ ಮಾಡಲಿಕ್ಕಾಗುತ್ತದೆಯೇ?
ಹೌದು ಉಡುಪಿ ಕಾಪು ನಿವಾಸಿ ಸಚಿನ್ ಶೆಟ್ಟಿ ಮತ್ತು ಬಳಗದವರು ಅಷ್ಟಮಿಗೆ ವಿದೂಷಕರ ವೇಷ ಧರಿಸಿ ಊರೂರು ಅಲೆದು ಭಿಕ್ಷೆ ಎತ್ತಿದ್ದು ಬರೋಬ್ಬರಿ 14.33ಲಕ್ಷರೂಗಳು!
ಈ ಹಣವನ್ನು ಅವರು ನೇರವಾಗಿ ಕಾರ್ಕಳ ತಾಲೂಕಿನ ಬೈಲೂರು ಕೌಡೂರಿನ ಹೊಸಬೆಳಕು ಆಶ್ರಮಕ್ಕೆ ದಾನವಾಗಿತ್ತಿದ್ದಾರೆ.
ತನುಲಾ ತರುಣ್ ಎಂಬವರು ನಡೆಸುವ ಹೊಸಬೆಳಕು ಆಶ್ರಮದಲ್ಲಿ 180ಮಂದಿ ಅನಾಥರಿದ್ದಾರೆ. ಈ ಆಶ್ರಮದ ಪರಿಸ್ಥಿತಿಯನ್ನರಿತ ಸಚಿನ್ ಶೆಟ್ಟಿ ಬಳಗ ಆಶ್ರಮಕ್ಕೆ ನೆರವಾಗುವ ಧ್ಯೇಯದಿಂದ ಅಷ್ಟಮಿಗೆ ವಿದೂಷಕ ವೇಷ ಧರಿಸಿ ಭಿಕ್ಷೆ ಎತ್ತಿದ್ದರು. ಆಶ್ರಮದ ಕ್ಯೂಆರ್ ಕೋಡ್ ಬಳಸಿ, ಉದ್ದೇಶವನ್ನು ತಿಳಿಸಿ ಭಿಕ್ಷಾಟನೆ ನಡೆಸಿರುವುದರಿಂದ ಜನರು ಪೂರಕವಾಗಿ ಸ್ಪಂದಿಸಿದ್ದಾರೆ. ದೇಣಿಗೆಯೊಂದಿಗೆ ಸಹಕರಿಸಿದ್ದಾರೆ.
ಸಮಾಜಕ್ಕೆ ನೆರವಾಗುವ ಮನಸಿದ್ದರೆ ದಾರಿಗಳು ಹಲವುಂಟು ಎನ್ನುವುದಕ್ಕೆ ಇದು ನಿದರ್ಶನವಾಗಿದೆ. ಕಾಪು ಸಚಿನ್ ಶೆಟ್ಟಿ ಬಳಗ ಆಶ್ರಮಕ್ಕೆ ತೆರಳಿ ಅನಾಥರೊಂದಿಗೆ ಬೆರೆತು, ಅವರಿಗೆ ಜೀವನ್ಮುಖಿ ಬದುಕಿನ ಭರವಸೆಯೊಂದಿಗೆ ವೇಷ ಹಾಕಿ ಗಳಿಸಿದ ಮೊತ್ತವನ್ನು ಹಸ್ತಾಂತರಿಸಿದರು.