ಕಣಿಪುರ ಸುದ್ದಿಜಾಲ
ಆನೆಯೊಂದರ 50ನೇ ಜನ್ಮದಿನಾಚರಣೆಗೆ ಗಜಪ್ರೇಮಿಗಳು ಸೇರಿ ಸಂಭ್ರಮದಿಂದ ಸುವರ್ಣ ಮಹೋತ್ಸವ ಆಚರಿಸಿದ್ದಾರೆ..!
ಮಹಿಳೆಯರಂತೂ ಆನೆಗೆ ಸುತ್ತುವರಿದು ಆತನ ಕತೆಯನ್ನೇ ಹಾಡಾಗಿಸಿ ಸ್ತುತಿಸಿ ತಿರುವಾದಿರ ನೃತ್ಯವಾಡಿದ್ದಾರೆ..!
ಆನೆ ಒಂದಕ್ಕೆ ಅಭಿಮಾನದ ಆದರದಿಂದ ಭಕ್ತಿಪೂರ್ವಕ ಹೀಗೆ 50ನೇ ಬರ್ತ್ ಡೇ ಆಚರಿಸಲ್ಪಟ್ಟದ್ದು ಸಾಕ್ಷಾತ್ ಕೇರಳದಲ್ಲಿ..
ಇಂಥ ಅದೃಷ್ಟಶಾಲಿ ಆನೆಯ ಹೆಸರು ಮಣಿಕಂಠನ್. ಈಗ ಆತ ಬರೇ ಮಣಿಕಂಠನಲ್ಲ, ವೆಳಿನಲ್ಲೂರು ಮಣಿಕಂಠನ್ ಎಂದು ಕೇರಳದ ಆನೆಪ್ರಿಯರೆಲ್ಲರ ಮನಗೆದ್ದ ಗಜವೀರ.
ವೆಳಿನಲ್ಲೂರು ಶ್ರೀರಾಮಸ್ವಾಮಿ ಕ್ಷೇತ್ರಕ್ಕೆ 38ವರ್ಷಗಳ ಹಿಂದೆ ನಡೆಗೊಪ್ಪಿಸಿದ ಆನೆ ಇದು. ಆಗ ಅವನು 12ರ ತುಂಟ. ತನ್ನ ತುಂಟಾಟಿಕೆಯಿಂದಲೇ ಭಕ್ತರ ಮನಗೆದ್ದ ಆತನನ್ನು ಭಕ್ಕತಜನರು ಪ್ರೀತಿಸಿದರು
ಕಬ್ಬು, ಬೆಲ್ಲ, ಕಲ್ಲಂಗಡಿಗಳನ್ನೆಲ್ಲ ಕೊಟ್ಟು ಕೊಂಗಾಟ ಮಾಡಿದರು. ಆತನೂ ಅಷ್ಟೇ ಜನರ ಭಾವುಕ ಮನಸ್ಸರಿತು ಮಮತೆಯಿಂದಲೇ ವರ್ತಿಸಿದ. ಕ್ರಮೇಣ ಆತನ ಗುಣನಡತೆಯ ನ್ನು ಜನರು ಕೊಂಡಾಡತೊಡಗಿದರು. ಆದರ ವ್ಯಾಪ್ತಿ ಆ ಪ್ರದೇಶವನ್ನೂ ದಾಟಿತು..
ಪರಿಣಾಮವಾಗಿ ಅವನನ್ನು ಸಾಕ್ಷಾತ್ ಶಬರಿಮಲೆ ಅಯ್ಯಪ್ಪ ಸನ್ನಿಧಾನ ಸಹಿತ ಪ್ರಸಿದ್ದವಾದ ವೈಕಂ, ಚೆಂಗನ್ನೂರು, ಕೊಟ್ಟಾರಕ್ಕರ ಕ್ಷೇತ್ರದ ಉತ್ಸವಕ್ಕೆ ದೇವಸ್ವಂ ಮಂಡಳಿ ವತಿಯಿಂದ ಕೊಂಡೊಯ್ಯಲಾಯಿತು. ಮಹೋತ್ಸವದಂದು ದೇವರ ಉತ್ಸವಮೂರ್ತಿಯನ್ನು ನೆತ್ತಿಯಲ್ಲಿಟ್ಟು ಅಂಬಾರಿ ಸಾಗುವ ಸುಯೋಗ ಅವನದಾಯಿತು.
ಹೀಗೆ ಸನ್ನಡತೆಯಿಂದ ಭಕ್ತಜನರ ಪ್ರೀತಿ ಪಡೆದು, ದೇವಸಾನ್ನಿಧ್ಯದಲ್ಲೇ ಬದುಕುವ ಮಣಿಕಂಠನಿಗೆ ಈಗ ಭರ್ತಿ 50ವರ್ಷ!
ಈ ಹಿನ್ನೆಲೆಯಲ್ಲಿ ವೆಳಿನಲ್ಲೂರು ದೇವಳದ ಸಮಿತಿ ನೇತೃತ್ವದಲ್ಲಿ ಅವನಿಗೋಸ್ಕರ ಪ್ರಾರ್ಥಿಸಿದ ವಿಶೇಷ ಪೂಜೆ ಪುನಸ್ಕಾರಗಳು ಸಂದಿದೆ. ಈ ವೇಳೆ ಮಾನಿನಿಯರು ಗಜವೀರನ ಕತೆಯನ್ನೇ ಹಾಡಾಗಿಸಿ ತಿರುವಾದಿರ ನಾಟ್ಯ ಕುಣಿದಿದ್ದಾರೆ.
ಹಾಡು, ಕುಣಿತ, ಪೂಜೆಗಳಲ್ಲಿ ತನ್ನದೇ ಹೆಸರು ಮೊಳಗುವುದು ಕಂಡಾಗ ಮಣಿಕಂಠನ ಕಣ್ಣಾಲಿಗಳಿಂದ ಆನಂದ ಭಾಷ್ಪ ಹರಿದಿದೆ. ಆತ ಸೊಂಡಿಲನ್ನೆತ್ತಿ ಧನ್ಯವಾದ ಹೇಳಿದ್ದಾನೆ. ಚಾಮರದಂತ ಕಿವಿ ಬಡಿಯುತ್ತಲೇ ಸ್ಪಂದಿಸಿದ್ದಾನೆ.
ಬಹುಶಃ ದೇಗುಲದ ಮೂಕ ಜೀವವೊಂದಕ್ಕೆ ಇಂಥಾ ಭಾವುಕ ಪ್ರೀತಿಯ ಜನ್ಮದಿನಾಚರಣೆ ನಡೆದದ್ದು ಅಪೂರ್ವ..